ADVERTISEMENT

ಸಾಮೂಹಿಕ ಅತ್ಯಾಚಾರ: ಆರೋಪಿಗಳ ಸಂಖ್ಯೆ 10ಕ್ಕೆ ಏರಿಕೆ

ಹೈದರಾಬಾದ್‌ನಲ್ಲಿ ಪೊಲೀಸರಿಗೆ ಸೆರೆ ಸಿಕ್ಕ ಆರೋಪಿ ತೌಸಿಫ್‌ ಚೌಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 22:27 IST
Last Updated 18 ಜನವರಿ 2024, 22:27 IST
ಇಬ್ರಾಹಿಂ ಗೌಸ್‌
ಇಬ್ರಾಹಿಂ ಗೌಸ್‌   

ಹಾವೇರಿ: ಹಾನಗಲ್‌ ತಾಲ್ಲೂಕಿನ ನಾಲ್ಕರ್‌ ಕ್ರಾಸ್‌ ಬಳಿ ಜನವರಿ 8ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈವರೆಗೆ ಒಟ್ಟು 10 ಆರೋಪಿಗಳ ಬಂಧನವಾಗಿದೆ.

ಅಕ್ಕಿಆಲೂರಿನ ಮೀನು ವ್ಯಾಪಾರಿ ಇಬ್ರಾಹಿಂ ಖಾದರ್‌ ಗೌಸ್‌ (27) ಮತ್ತು ಕಾರು ಚಾಲಕ ತೌಸಿಫ್‌ ಅಹಮದ್‌ ಚೌಟಿ ಅಲಿಯಾಸ್‌ ಕಾಟ್ಲ (25) ಬಂಧಿತರು. ಇಬ್ರಾಹಿಂ ಅಕ್ಕಿಆಲೂರಿನಲ್ಲೇ ಸಿಕ್ಕಿಬಿದ್ದರೆ,  ತೌಸಿಫ್‌ಗೆ ಹೈದರಾಬಾದ್‌ನಲ್ಲಿ ಬಂಧಿಸಲಾಯಿತು. ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಬೈಕ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ:

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ಆರೋಪಿ ಮಹಮ್ಮದ್ ಸೈಫ್‌ ಸಾವಿಕೇರಿ ಎಂಬಾತ ಅಪಘಾತದಲ್ಲಿ ಕಾಲಿನ ಮೂಳೆ ಮುರಿದುಕೊಂಡು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಬಂಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದ್ದಾರೆ.

ತೌಸಿಫ್‌ ಚೌಟಿ
ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ 

ಅಶೋಕ ನೇತೃತ್ವದಲ್ಲಿ ಪ್ರತಿಭಟನೆ

ನಾಳೆ ಹಾವೇರಿ: ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಜನವರಿ 20ರಂದು ಪ್ರತಿಭಟನೆ ನಡೆಯಲಿದೆ. ‘ಅತ್ಯಾಚಾರಿಗಳನ್ನು ಬಂಧಿಸುವಲ್ಲಿ ಮತ್ತು ಸೂಕ್ತ ತನಿಖೆ ನಡೆಸುವಲ್ಲಿ ಪೋಲಿಸ್ ಇಲಾಖೆಯು ರಾಜ್ಯ ಸರ್ಕಾರದ ಮಧ್ಯವರ್ತಿಯಂತೆ ನಡೆದುಕೊಳ್ಳುವ ನೀತಿ ಖಂಡಿಸಿ ಮತ್ತು ಸಂತ್ರಸ್ತೆಗೆ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ತಿಳಿಸಿದರು.  ‘ಬಿಜೆಪಿ ಜಿಲ್ಲಾ ಕಚೇರಿಯಿಂದ ಮಧ್ಯಾಹ್ನ 12ಕ್ಕೆ ಪಾದಯಾತ್ರೆ ಹೊರಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟಿಸುತ್ತೇವೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಶಾಸಕ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸುವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.