ಹಿರೇಕೆರೂರ: ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಆವರಣ ಹಾಗೂ ಆಟದ ಮೈದಾನ ಮಳೆಯಾದರೆ ಕೆಸರುಗದ್ದೆಯಂತಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ತೊಂದರೆಯಾಗುತ್ತಿದೆ.
ಎರಡೂ ಶಾಲೆಗಳು ಒಂದೇ ಆವರಣದಲ್ಲಿವೆ. ಚನ್ನಳ್ಳಿ, ಇಂಗಳಗೊಂದಿ, ಹಿರೇಮೊರಬ, ಬುರಡಿಕಟ್ಟಿ ಮತ್ತು ಹಿರೇಕೆರೂರಿನಿಂದ ಬರುವ ಒಟ್ಟು 550 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಆವರಣ ಕೆಸರುಮಯವಾಗಿರುವುದರಿಂದ ಮಕ್ಕಳು ಜಾರಿಬಿದ್ದು, ಗಾಯವಾಗುವುದು ಹಾಗೂ ಬಟ್ಟೆ ಕೊಳೆಯಾಗುವುದು ಸಾಮಾನ್ಯವಾಗಿದೆ.
ಒಂದು ತಿಂಗಳಿನಿಂದ ಆಗಾಗ್ಗೆ ಮಳೆ ಸುರಿಯುತ್ತಿದ್ದ ಶಾಲೆಯ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಕೆಲವು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕೆಸರಿನಲ್ಲೇ ಓಡಾಡುವುದು ಅನಿವಾರ್ಯವೂ ಆಗಿದೆ.
‘ಸರ್ಕಾರವು ಶಿಕ್ಷಣಕ್ಕಾಗಿ ಕೋಟಿಗಟ್ಟಲೆ ಅನುದಾನ ನೀಡುತ್ತದೆ. ಆದರೆ, ಇಲ್ಲಿನ ಶಾಲೆಯ ಆವರಣದಲ್ಲಿ ನೀರು ನಿಲ್ಲದಂತೆ ಹಾಗೂ ಮೈದಾನ ಸುಧಾರಣೆಗೆ ಮಾತ್ರ ಯಾವ ಅಧಿಕಾರಿಗಳೂ ಕ್ರಮ ವಹಿಸುತ್ತಿಲ್ಲ. ಆವರಣದಲ್ಲಿ ನೀರು ನಿಂತಿದ್ದರಿಂದ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಮಕ್ಕಳ ಆಟೋಟಕ್ಕೂ ತೊಂದರೆಯಾಗುತ್ತಿದೆ’ ಎಂದು ಮಕ್ಕಳ ಪಾಲಕರು ಬೇಸರ ವ್ಯಕ್ತಪಡಿಸಿದರು.
ಶೌಚಾಲಯ ಪೀಠೋಪಕರಣ ಕೊರತೆ
2019ರಲ್ಲಿ ಸರ್ಕಾರವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆ ಪ್ರಾರಂಭಿಸಿತು. ಪಠ್ಯಪುಸ್ತಕ ವಿತರಣೆ ಮಾಡಿದ್ದು ಬಿಟ್ಟರೆ ಹೊಸಕಟ್ಟಡ ಶೌಚಾಲಯ ಮತ್ತು ಪೀಠೋಪಕರಣದ ವ್ಯವಸ್ಥೆ ಮಾಡಿಲ್ಲ. ಗಂಡು ಮಕ್ಕಳು ಶೌಚಕ್ಕೆ ಮನೆಗೆ ಹೋಗುತ್ತಾರೆ. ಬೇರೆ ಹಳ್ಳಿಗಳಿಂದ ಬರುವ ಮಕ್ಕಳಿಗೆ ಬಯಲು ಶೌಚವೇ ಗತಿಯಾಗಿದೆ. ಹೆಣ್ಣುಮಕ್ಕಳ ಶೌಚಾಲಯ ಶಿಥಿಲಾವಸ್ಥೆ ತಲುಪಿದೆ. ಬಾಗಿಲು ಮುರಿದಿವೆ. ಇಂತಹ ಸಮಸ್ಯೆಗಳ ನಡುವೆಯೇ ಮಕ್ಕಳು ಶಿಕ್ಷಣ ಪಡೆಯಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.