ADVERTISEMENT

ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ನಿರ್ಮಿಸುವ ಸರ್ಕಾರದ ನಿರ್ಧಾರ ಸಮಂಜಸ

ರಾಜ್ಯ ಸರ್ಕಾರದ ನಿಲುವು ಸ್ವಾಗತಿಸಿದ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 16:03 IST
Last Updated 30 ಜನವರಿ 2019, 16:03 IST
ಶಿವಾನಂದ ಗುರುಮಠ
ಶಿವಾನಂದ ಗುರುಮಠ   

ಹಾವೇರಿ: ಒಂದು ಸಾವಿರ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವಾಗಿ ಮಾರ್ಪಡಿಸುವ ರಾಜ್ಯ ಸರ್ಕಾರದ ನಿರ್ಧಾರವು ಸಮಂಜಸವಾಗಿದೆ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಬುಧವಾರ ಇಲ್ಲಿ ಸ್ವಾಗತಿಸಿದರು.

‘ಜಾಗತೀಕರಣದ ಪರಿಣಾಮ ಇಂಗ್ಲಿಷ್ ಅನಿವಾರ್ಯವಾಗಿದೆ. ಬಡ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆಯಬೇಕಾದರೆ, ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.

‘ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿರೋಧದ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಹುನ್ನಾರವಿದೆ. ಬಹುತೇಕ ರಾಜಕಾರಣಿಗಳು ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಸರ್ಕಾರದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಂದ ತಮ್ಮ ಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುವ ಆತಂಕ ಉಂಟಾಗಿದೆ ಎಂದರು.

ADVERTISEMENT

ಇನ್ನೊಂದೆಡೆ ಸಾಹಿತಿಗಳು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ತಮ್ಮ ಸಾಹಿತ್ಯ ಓದಲು ಜನರು ಇಲ್ಲದಂತಾಗುತ್ತದೆ ಎಂಬ ಆತಂಕದಿಂದ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಕ್ಕೆ ವಿರೋಧಿಸುತ್ತಿದ್ದಾರೆ ಎಂದರು.

ಗೋಕಾಕ ಮಾದರಿಯ ಚಳವಳಿ ಮಾಡಲು ಮುಂದಾದರೂ, ಯಶಸ್ವಿ ಆಗುವುದಿಲ್ಲ. ಏಕೆಂದರೆ ಅದಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರ ಬೆಂಬಲ ಸಿಗುವುದಿಲ್ಲ. ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದರು.

ಸಾಲ ಮನ್ನಾ:
₹45 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ ಎನ್ನುವ ಮೂಲಕ ರಾಜ್ಯ ಸರ್ಕಾರವು ರೈತರ ಹಾದಿ ತಪ್ಪಿಸುತ್ತಿದೆ. ವಾಸ್ತವದಲ್ಲಿ ಒಟ್ಟು ಮೊತ್ತದ ಬಗ್ಗೆ ಇನ್ನೂ ನಿಖರ ಮಾಹಿತಿಯೇ ಇಲ್ಲ ಎಂದರು.

ಸರ್ಕಾರದ ನಿಬಂಧನೆಗಳಿಗೆ ಅನುಗುಣವಾಗಿ ರೈತರು ಸಲ್ಲಿಸಿದ ಅರ್ಜಿಗಳನ್ನು ಬ್ಯಾಂಕ್‌ಗಳು ಪರಿಶೀಲನೆ ನಡೆಸುತ್ತಿವೆ. ಪರಿಶೀಲನೆ ಪೂರ್ಣಗೊಂಡ ಬಳಿಕ ನಿಖರ ಮಾಹಿತಿ ಸಿಗಲಿದೆ ಎಂದರು.

ಸಾಲಮನ್ನಾದ ಹಣವನ್ನು ಬ್ಯಾಂಕುಗಳಿಗೆ ಮೂರು ವರ್ಷಗಳಲ್ಲಿ ಕಂತುಗಳ ಮೂಲಕ ಮರುಪಾವತಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಇದರಿಂದಾಗಿ ಬ್ಯಾಂಕುಗಳು ರೈತರಿಗೆ ಸಾಲ ಕೊಡಲು ನಿರಾಕರಿಸುತ್ತಿವೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

ಜನರ ತೆರಿಗೆ ಹಣದಲ್ಲಿ ಐಷರಾಮಿ ಜೀವನ ನಡೆಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದುಂಧುವೆಚ್ಚಕ್ಕೆ ಕಡಿವಾಣ ಹಾಕುವ ಕಾಯಿದೆ ಬರಬೇಕು. ಇಲ್ಲದಿದ್ದರೆ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿ ಬಡವರ ಸಂಖ್ಯೆ ಹೆಚ್ಚಾಗುತ್ತದೆ. ದೇಶ ದಿವಾಳಿಯಾಗುವ ಅಪಾಯವೇ ಹೆಚ್ಚಿದೆ. ಪ್ರಣಾಳಿಕೆ ಈಡೇರಿಸದ ಪಕ್ಷಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದರು.

ಪ್ರಮುಖರಾದ ಶಿವಯೋಗಿ ಬೆನ್ನೂರು, ಸುರೇಶ ಸಜ್ಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.