ADVERTISEMENT

ಜನರ ಬದುಕು ಬದಲಿಸಿದ ‘ಗ್ಯಾರಂಟಿ’

ಫಲಾನುಭವಿಗಳ ಸಮಾವೇಶ: ಶಾಸಕ ಶ್ರೀನಿವಾಸ ಮಾನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 4:37 IST
Last Updated 24 ಜುಲೈ 2025, 4:37 IST
ಹಾನಗಲ್‌ನಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು
ಹಾನಗಲ್‌ನಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು   

ಹಾನಗಲ್: ‘ಬಿಟ್ಟಿ ಭಾಗ್ಯ ಎಂದು ಬೇಕಾಬಿಟ್ಟಿಯಾಗಿ ಮಾತನಾಡಿದವರಿಗೂ ಇದೀಗ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆಯಾಗಿದೆ. ಇವೆಲ್ಲ ಜನರ ಬದುಕು ಬದಲಿಸುವ ಗಟ್ಟಿ ಭಾಗ್ಯಗಳು ಎಂಬುದು ಸಾಬೀತಾಗಿದೆ. ಗ್ಯಾರಂಟಿ
ಯೋಜನೆಗಳಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ’ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇಲ್ಲಿನ ಶಾಸಕರ ಮಾದರಿ ಶಾಲೆಯ ಮೈದಾನದಲ್ಲಿ ತಾಲ್ಲೂಕು ಆಡಳಿತ ಗುರುವಾರ ಆಯೋಜಿಸಿದ್ದ ಹಾನಗಲ್ ಮತ್ತು ಬಮ್ಮನಹಳ್ಳಿ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದರು.

‘ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ರಚನೆಯಾದ ರಾಜ್ಯ ಸರ್ಕಾರ, ಜನರ ನಿರೀಕ್ಷೆಯನ್ನು ಸಾಕಾರಗೊಳಿಸಿದೆ. ಎಲ್ಲ ಗ್ಯಾರಂಟಿ ಯೋಜನೆಗಳನ್ನು ಸಕಾಲಿಕ ಹಾಗೂ ಸಾರ್ಥಕವಾಗಿ ಜಾರಿಗೊಳಿಸಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೂ ಕ್ರಮ ವಹಿಸಿದೆ’ ಎಂದರು.

ADVERTISEMENT

‘ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗಳಿಗೆ ₹180 ಕೋಟಿ, ರಸ್ತೆ ನಿರ್ಮಾಣಕ್ಕಾಗಿ ₹200 ಕೋಟಿ ಅನುದಾನ ಬಿಡುಗಡೆಯಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ  ದಾನಿಗಳ ಸಹಾಯ ಪಡೆದು ಸ್ಮಾರ್ಟ್‌ ಕ್ಲಾಸ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿದ್ದೇವೆ. ಐಎಎಸ್, ಕೆಎಎಸ್, ಸಿಇಟಿ ತರಬೇತಿಯ ಪ್ರಯೋಜನವನ್ನು ವಿದ್ಯಾರ್ಥಿಗಳು
ಪಡೆಯುತ್ತಿದ್ದಾರೆ’ ಎಂದು ಹೇಳಿದರು.

‘ಇನ್ನೊಂದು ವರ್ಷದಲ್ಲಿ 13 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಕಂದಾಯ ಗ್ರಾಮ, ಉಪ ಗ್ರಾಮಗಳ ಘೋಷಣೆಗೆ ಸಜ್ಜಾಗಿದ್ದೇವೆ. ಭೂ ಸುರಕ್ಷಾ ಯೋಜನೆಯಲ್ಲಿ ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಉದ್ದಿಮೆಗಳು ಶೀಘ್ರ ಆರಂಭವಾಗಲಿವೆ. ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಒದಗಿಸಲು ಉದ್ಯೋಗ ಸಮೃದ್ಧಿ ಕೇಂದ್ರ ಆರಂಭಿಸುತ್ತಿದ್ದೇವೆ’ ಎಂದರು.

ತಹಶೀಲ್ದಾರ್ ರೇಣುಕಾ ಎಸ್. ಮಾತನಾಡಿ, ‘ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ತಾಲ್ಲೂಕು ಆಡಳಿತ ಸಮರ್ಥವಾಗಿ ಕೆಲಸ ಮಾಡುತ್ತಿದೆ. ತಾಂತ್ರಿಕ ತೊಂದರೆಗಳಿಂದ ಯಾರಿಗಾದರೂ ಸೌಲಭ್ಯ ತಲುಪದಿದ್ದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಚಾರಿಸಿರಿ. ನಮ್ಮ ಗಮನಕ್ಕೆ ತನ್ನಿ’ ಎಂದು ಹೇಳಿದರು.

ಸವಣೂರು ಉಪವಿಭಾಗಾಧಿಕಾರಿ ಮಹ್ಮದ್ ಖಿಜರ, ಶಿಗ್ಗಾವಿ ಡಿವೈಎಸ್‌ಪಿ ಮಂಜುನಾಥ, ತಾಲ್ಲೂಕು ಪಂಚಾಯ್ತಿ ಇಒ ಎಸ್.ದೇವರಾಜ, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ., ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.