ADVERTISEMENT

ರಟ್ಟೀಹಳ್ಳಿ: ಭಕ್ತರ ಇಷ್ಟಾರ್ಥ ಈಡೇರಿಸುವ ಗುಂಡಗಟ್ಟಿ ಶನೇಶ್ವರ

ಮರಳಸಿದ್ದೇಶ್ವರ ಭಜನಾ ಮಂಡಳಿಯಿಂದ 1984 ರಲ್ಲಿ ಶನೇಶ್ವರ ಮೂರ್ತಿ ಪ್ರತಿಷ್ಠಾಪನೆ

ಪ್ರದೀಪ ಕುಲಕರ್ಣಿ
Published 25 ಫೆಬ್ರುವರಿ 2024, 4:23 IST
Last Updated 25 ಫೆಬ್ರುವರಿ 2024, 4:23 IST
ರಟ್ಟೀಹಳ್ಳಿ ತಾಲ್ಲೂಕು ಗುಂಡಗಟ್ಟಿ ಗ್ರಾಮದ ಶನೇಶ್ವರ ದೇವಸ್ಥಾನದ ಹೊರನೋಟ
ರಟ್ಟೀಹಳ್ಳಿ ತಾಲ್ಲೂಕು ಗುಂಡಗಟ್ಟಿ ಗ್ರಾಮದ ಶನೇಶ್ವರ ದೇವಸ್ಥಾನದ ಹೊರನೋಟ   

ರಟ್ಟೀಹಳ್ಳಿ: ತಾಲ್ಲೂಕಿನ ಗುಂಡಗಟ್ಟಿ ಗ್ರಾಮ ಶನೇಶ್ವರ ದೇವರ ಪ್ರಭಾವದಿಂದಾಗಿ ಸಾಕಷ್ಟು ಮಹತ್ವ ಪಡೆದಿದೆ.

ಸ್ವತಂತ್ರ ಪೂರ್ವದಲ್ಲಿ ಕೊಪ್ಪ (ಈಗಿನ ಗುಂಡಗಟ್ಟಿ ಗ್ರಾಮ)ದಲ್ಲಿ ಸ್ವಾರಸ್ಯಕರ ಘಟನೆ ನಡೆಯುತ್ತದೆ. ಊರಿನ ಪ್ರಮುಖರೊಬ್ಬರ ಆಕಳು ಅರಣ್ಯದೊಳಗೆ ಹೋಗಿ ಬಂದ ಮೇಲೆ ಸಂಜೆ ಹಾಲು ಕರೆಯುತ್ತಿರಲಿಲ್ಲ. ಒಂದು ದಿನ ಮನೆಯ ಯಜಮಾನ ಆಕಳನ್ನು ಹಿಂಬಾಲಿಸಿದಾಗ ಗಂಜಿ ಮುಳ್ಳಿನ ಪೆಳೆಯ ಒಳಹೊಕ್ಕು ಆಕಳು ಕೆಚ್ಚಲಿನಿಂದ ಹಾಲು ತಾನಾಗಿಯೇ ಸುರಿಸುತ್ತಿರುವುದನ್ನು ನೋಡಿ, ಯಜಮಾನ ಗ್ರಾಮದ ಪೂಜ್ಯರಿಗೆ ತಿಳಿಸುತ್ತಾರೆ. ನಂತರ ಪರಿಶೀಲಿಸಿ ಸುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಿ ಭೂಮಿ ಅಗೆದಾಗ ಶಿವಲಿಂಗ ಪತ್ತೆಯಾಯಿತು. ಕಲ್ಲಿನ ಗುಂಡಿನಂತಿದ್ದ ಶಿವಲಿಂಗವನ್ನು ಗ್ರಾಮದೊಳಗೆ ತಂದು ಪ್ರತಿಷ್ಠಾಪಿಸಲಾಗುತ್ತದೆ ಅಲ್ಲಿಂದ ಈ ಗ್ರಾಮಕ್ಕೆ ಗುಂಡಗತ್ತಿ, ಗುಂಡಗಟ್ಟಿ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ.

1875ರಲ್ಲಿ ಕುಷ್ಟರೋಗ ಪೀಡಿತನಾಗಿದ್ದ, ಕೈ ಬೆರಳುಗಳು ಅರ್ಧಭಾಗವಷ್ಟೇ ಇದ್ದ ಒಬ್ಬ ಮುಸ್ಲಿಂ ಸಂತ ‘ಶ್ರೀ ಶನೇಶ್ವರ ಪ್ರಭಾವ’ ಎಂಬ ನಾಟಕವನ್ನು ಗಲಗಿನ ಕಡ್ಡಿಯಿಂದ ಮಸಿಯಲ್ಲಿ ಅದ್ದಿ ಬರೆಯುತ್ತಾ ಹೋಗುತ್ತಾನೆ. ಶನೇಶ್ವರನ ಕಥೆ ಪೂರ್ಣಗೊಳ್ಳುವ ಹೊತ್ತಿಗೆ ಬೆರಳುಗಳು ಮೊದಲಿನಂತಾಗಿ ಕುಷ್ಟರೋಗದಿಂದ ಸಂಪೂರ್ಣ ಗುಣಮುಖನಾದನು ಎನ್ನುವ ಪ್ರತೀತಿ ಇದೆ.

ADVERTISEMENT

ಶನೇಶ್ವರನ ಕಥೆಯಿಂದ ಪ್ರೇರೇಪಿತರಾದ ಗುಂಡಗಟ್ಟಿ ಗ್ರಾಮದ ಯುವಕರು, 1910 ರಲ್ಲಿ ಮರಳಸಿದ್ದೇಶ್ವರ ಭಜನಾ ಮಂಡಳಿ ಸಂಘ ಕಟ್ಟಿ,ನಾಡಿನೆಲ್ಲೆಡೆ ಸಂಚರಿಸಿ ಶನೇಶ್ವರನ ನಾಟಕವನ್ನು ಸ್ವತಃ ಮರುಳಸಿದ್ದೇಶ್ವರ ಭಜನಾ ಮಂಡಳಿ ಸದಸ್ಯರು ಮಾಡುತ್ತಾರೆ. ನಾಟಕಕ್ಕೆ ಉತ್ತಮ ಪ್ರಶಂಸೆ ದೊರೆಯುತ್ತದೆ. ಆಗ ಮರುಳಸಿದ್ದೇಶ್ವರ ಭಜನಾ ಮಂಡಳಿಯ ಸದಸ್ಯರು ಗುಂಡಗಟ್ಟಿ ಗ್ರಾಮದಲ್ಲಿ ಶನೇಶ್ವರ ದೇವಸ್ಥಾನ ಪ್ರತಿಷ್ಠಾಪಿಸುವ ಸಂಕಲ್ಪ ಮಾಡುತ್ತಾರೆ.

ಊರಿನಲ್ಲಿ ಸಿಕ್ಕ ಶಿಲಾಶಾಸನದಿಂದ ಮಧ್ಯಪ್ರದೇಶದ ಉಜೈನಿ ಆಸ್ಥಾನದ ರಾಜ ವಿಕ್ರಮಾದಿತ್ಯ ಗುಂಡಗಟ್ಟಿ ಗ್ರಾಮಕ್ಕೆ ಭೇಟಿ ನೀಡಿರುವುದು ತಿಳಿಯುತ್ತದೆ. ಶಾಸನದಲ್ಲಿರುವುದಕ್ಕೂ ಮುಸ್ಲಿಂ ಸಂತ ಶನೇಶ್ವರನ ಪ್ರಭಾವ ಅರ್ಥಾತ್ ರಾಜ ವಿಕ್ರಮಾದಿತ್ಯ ನಾಟಕ ಬರೆದಿದ್ದಕ್ಕೂ ಹೊಂದಾಣಿಕೆ ಇದೆ ಎನ್ನುವುದನ್ನು ಮನಗಂಡ ಭಜನಾ ಮಂಡಳಿಯವರು 1984 ರಲ್ಲಿ ಶನೇಶ್ವರ ಮೂರ್ತಿ ಪ್ರತಿಷ್ಠಾಪಿಸುತ್ತಾರೆ. ಅಲ್ಲದೆ ನಾಟಕಗಳಿಂದ ಗಳಿಸಿದ ಹಣದಲ್ಲಿ ದೇವಸ್ಥಾನ ಹಾಗೂ ಗ್ರಾಮದ ಮಹಾದ್ವಾರ ನಿರ್ಮಿಸುತ್ತಾರೆ.

ರಾಜ್ಯದ ವಿವಿಧ ಊರುಗಳಲ್ಲಿ ಶನೇಶ್ವರ ಮಹಾತ್ಮೆ ಕುರಿತು 800 ನಾಟಕ ಪ್ರಯೋಗ ಮಾಡಲಾಗಿದೆ. ಭಜನಾ ಮಂಡಳಿಗೆ ಬರುವ ಆದಾಯವನ್ನುಗ್ರಾಮದ ದೇವಸ್ಥಾನ ಅಭಿವೃದ್ಧಿಗೆ ಬಳಸಲಾಗುತ್ತದೆ ಎನ್ನುತ್ತಾರೆ ಸ್ಥಳೀಯ ಮರಳುಸಿದ್ದೇಶ್ವರ ಭಜನಾ ಮಂಡಳಿ ಸದಸ್ಯ ಹಾಗೂ ಹಾವೇರಿ ಜಿಲ್ಲಾ ಕಲಾವಿದರ ಒಕ್ಕೂಟದ ಅಧ್ಯಕ್ಷ ಕರಬಸಪ್ಪ ಮಲ್ಲಪ್ಪ ಪೂಜಾರ.

ರಟ್ಟೀಹಳ್ಳಿ ತಾಲ್ಲೂಕು ಗುಂಡಗಟ್ಟಿ ಗ್ರಾಮದಲ್ಲಿ ಸ್ಥಾಪಿತಗೊಂಡ ಮರಳುಸಿದ್ದೇಶ್ವರ ಭಜನಾ ಮಂಡಳಿ ಸ್ವಂತ ಕಟ್ಟಡ.

ನಿತ್ಯ ರುದ್ರಾಭಿಷೇಕ...

‘ಗ್ರಾಮದ ಒಂದೇ ಪ್ರಾಂಗಣದಲ್ಲಿ ಈಶ್ವರ ದೇವಸ್ಥಾನ ಶನೇಶ್ವರ ಆಂಜನೇಯ ವಿಘ್ನೇಶ್ವರ ನವಗ್ರಹ ದೇವರಗಳನ್ನು ಪ್ರತಿಷ್ಠಾಪಿಸಲಾಗಿದೆ. ನಿತ್ಯ ರುದ್ರಾಭಿಷೇಕ ನಡೆಯುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ಜಾತ್ಯತೀತವಾಗಿ ಜನರು ಬರುತ್ತಾರೆ’ ಎನ್ನುತ್ತಾರೆ ದೇವಸ್ಥಾನ ಕಮೀಟಿ ಅಧ್ಯಕ್ಷ ಶಂಕರಗೌಡ. ಸಿ. ಪಾಟೀಲ. ‘ಪ್ರತಿ ಶನಿವಾರ ಹಾಗೂ ಅಮವಾಸ್ಯೆ ದಿನ ರಾತ್ರಿ ಇಲ್ಲಿ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕಮಿಟಿಯಿಂದ ಮಾಡಲಾಗುತ್ತದೆ. ದೂರದ ಊರುಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಮದುವೆ ಕಾರ್ಯಗಳಿಗೆ ದೇವಸ್ಥಾನ ಕಮಿಟಿಯಿಂದ ಕಲ್ಯಾಣಮಂಟಪ ನಿರ್ಮಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.