ಹಾನಗಲ್: ವಾಯ ಮಾಲಿನ್ಯ ಸಕಲ ಜೀವರಾಶಿಗೆ ಮಾರಕವಾಗುತ್ತಿದ್ದು, ಈ ನಿಟ್ಟಿನಲ್ಲಿ ಪರಿಸರ ಶುದ್ಧಗೊಳಿಸುವ ಪಂಚವಟಿ ವನಗಳ ನಿರ್ಮಾಣ ಮಾಡಬೇಕಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಬುಧವಾರ ವರದಶ್ರೀ ಫೌಂಡೇಶನ್ ವತಿಯಿಂದ ತಾಲ್ಲೂಕಿನಲ್ಲಿ 1008 ಸ್ಥಳಗಳಲ್ಲಿ ಐದು ಸಸಿಗಳನ್ನು ನೆಡುವ ಪಂಚವಟಿ ವನ (ಆಕ್ಸಿಜನ್ ಟವರ್) ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಪಂಚವಟಿ ವನದ ಮಹತ್ವ ಮತ್ತು ಅದರ ಪ್ರಾಯೋಗಿಕತೆಯನ್ನು ಅರಿಯಬೇಕಾಗಿದೆ. ರಾಜ್ಯದ 56 ಸಾವಿರ ಸ್ಥಳಗಳಲ್ಲಿ ವರದಶ್ರೀ ಫೌಂಡೇಶನ್ ವತಿಯಿಂದ ಪಂಚವಟಿ ವನಗಳನ್ನು ನಿರ್ಮಿಸಲಾಗಿರುವುದು ಹೆಮ್ಮೆಯ ವಿಷಯ ಎಂದರು.
ವರದಶ್ರೀ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರೆಡ್ಡೇರ ಮಾತನಾಡಿ, ಮನುಷ್ಯ ಮಾನಸಿಕ, ದೈಹಿಕ, ಕೌಟುಂಬಿಕ ಮತ್ತು ಅಧ್ಯಾತ್ಮಿಕವಾಗಿ ಅಭಿವೃದ್ಧಿ ಸಾಧಿಸಬೇಕಾಗಿದೆ. ನಮ್ಮ ಪರಿಸರದಲ್ಲಿ ಗಾಳಿ ಮಲೀನವಾಗುತ್ತಿದೆ ಎಂದು ಸಂಶೋಧನೆಗಳು ವರದಿ ನೀಡುತ್ತಿವೆ. ಹೀಗಾಗಿ ನಮ್ಮ ಸಂಸ್ಥೆಯಿಂದ ಒಂದೇ ಸ್ಥಳದಲ್ಲಿ ಪತ್ರಿ, ಬನ್ನಿ, ಬೇವು, ಅರಳಿ ಮತ್ತು ಅತ್ತಿಮರದ ಸಸಿಗಳ ಗುಂಪು ನೆಡುವ ಪಂಚವಟಿ ವನ ಅಭಿಯಾನ ಕೈಗೊಳ್ಳಲಾಗಿದೆ. ಶಾಲೆ, ಕಾಲೇಜು, ದೇವಸ್ಥಾನಗಳ ಆವರಣದಲ್ಲಿ ಐದು ಸಸಿಗಳನ್ನು ನೆಟ್ಟು ಬೆಳೆಸುವ ಬದ್ಧತೆಯನ್ನು ಆಸಕ್ತರು ವಹಿಸಬೇಕಾಗಿದೆ. ಇದರಿಂದ ಸುತ್ತಲಿನ ಒಂದು ಕಿ.ಮೀ ವ್ಯಾಫ್ತಿಯಲ್ಲಿ ಸಾಂಕ್ರಾಮಿಕ ಸೇರಿದಂತೆ ಸಾಕಷ್ಟು ರೋಗಗಳನ್ನು ಹಿಮ್ಮೆಟ್ಟಿಸುವ ಆಹ್ಲಾದಕರ ವಾತಾವರಣ ಸೃಷ್ಠಿಯಾಗುತ್ತದೆ ಎಂದರು.
ಗಣ್ಯರಾದ ಎ.ಎಸ್.ಬಳ್ಳಾರಿ, ಸಿ.ಮಂಜುನಾಥ, ಕೆ.ಎಲ್.ದೇಶಪಾಂಡೆ, ಶಿವಕುಮಾರ ದೆಶಮುಖ, ಕುಮಾರ ಹತ್ತಿಕಾಳ, ನೀಲಮ್ಮ ಉದಾಸಿ, ನಾಗರತ್ನ ಶೇಠ, ಗೀತಾ ವೇರ್ಣೆಕರ, ಜಗದೀಶ ಕೊಂಡೋಜಿ, ಅಶೋಕ ಕಮಾಟಿ, ರಾಜಶೇಖರ ಸಿಂಧೂರ, ರಮೇಶ ಹಳೆಕೋಟಿ, ವಿಜಯ ಕುಬಸದ, ಅರುಣ ನಾಗಜ್ಜನವರ, ಅನಿಲ್ ವೇರ್ಣೆಕರ, ವಿರುಪಾಕ್ಷಪ್ಪ ಕಡಬಗೇರಿ, ರವಿ ಲಕ್ಷ್ಮೇಶ್ವರ, ಪ್ರಕಾಶ ಜಂಗಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.