ಹಾವೇರಿ: ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ಮಾಡಿರುವ ಜಿಲ್ಲೆಯ ಕಾರ್ಮಿಕರಿಗೆ ಏಪ್ರಿಲ್ 17ರಿಂದ ಮೇ 27ರವರೆಗೂ ₹ 15.71 ಕೋಟಿ ವೇತನ ಪಾವತಿಯಾಗಿಲ್ಲ. ಕೂಲಿ ಹಣ ಬಾರದಿದ್ದರಿಂದ ನೊಂದಿರುವ ಕಾರ್ಮಿಕರು, ‘ಮಕ್ಕಳ ಶಾಲೆ ಶುಲ್ಕ ಹಾಗೂ ದಿನನಿತ್ಯದ ಖರ್ಚಿಗೆ ಹಣ ಬೇಕು. ಆದಷ್ಟು ಬೇಗ ಹಣ ಕೊಡಿಸಿ’ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿರುವ ಜನರ ವಲಸೆ ತಪ್ಪಿಸಲು ಹಾಗೂ ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ದೇಶದಾದ್ಯಂತ ನರೇಗಾ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಪುರುಷರು ಹಾಗೂ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಬಳಿಯೂ ಉದ್ಯೋಗ ಕಾರ್ಡ್‌ಗಳಿವೆ.
ಕಾರ್ಮಿಕರಿಗೆ ಈ ಹಿಂದೆ ₹ 349 ಕೂಲಿ ನೀಡಲಾಗುತ್ತಿತ್ತು. ಈಗ ಕೂಲಿ ಹಣವನ್ನು ₹ 370ಕ್ಕೆ ಏರಿಕೆ ಮಾಡಲಾಗಿದೆ. ಜಿಲ್ಲೆಯ ಪ್ರತಿ ಅರ್ಹ ಕುಟುಂಬಕ್ಕೂ 100 ದಿನಗಳ ಕೂಲಿ ಕೆಲಸ ಒದಗಿಸುವುದರೊಂದಿಗೆ ಪರಿಷ್ಕೃತ ಕೂಲಿ ಹಣವನ್ನು ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿ, ಕೃಷಿ ಇಲಾಖೆ, ಅರಣ್ಯ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಿಂದ ಕೆಲಸ ನೀಡಲಾಗುತ್ತಿದೆ.
ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿರುವ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಏಪ್ರಿಲ್ 17ರಿಂದ ಮೇ 27ರವರೆಗೆ ಕೂಲಿ ಹಣ ನೀಡಿಲ್ಲ. ಕೂಲಿ ಹಣ ನೆಚ್ಚಿಕೊಂಡಿದ್ದ ಕಾರ್ಮಿಕರು, ತಮ್ಮ ಹಣ ಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹಣ ಪಾವತಿ ಮಾಡದಿದ್ದರೆ, ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದೆಂದು ಕಾರ್ಮಿಕರ ಸಂಘಟನೆ ಎಚ್ಚರಿಕೆ ನೀಡಿದೆ.
ವಲಸೆ ಹೋಗುವ ಪರಿಸ್ಥಿತಿ: ನರೇಗಾ ಹಣ ಬಾಕಿ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಬಾಸೂರಿನ ಕಾರ್ಮಿಕ ಮಹಿಳೆ ಕವಿತಾ ದುಂಡಶಿ, ‘15 ದಿನಕ್ಕೊಮ್ಮೆ ಕೂಲಿ ನೀಡುವುದಾಗಿ ಹೇಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕೆಲಸ ನೀಡಿದ್ದರು. ಆದರೆ, ತಿಂಗಳು ದಾಟಿದರೂ ಕೂಲಿ ಪಾವತಿಯಾಗಿಲ್ಲ. ಕಚೇರಿಯಿಂದ ಕಚೇರಿಗೆ ಅಲೆಯಲು ನಮಗೆ ಗೊತ್ತಾಗುವುದಿಲ್ಲ. ನಮಗೆ ಕೂಲಿ ಹಣ ಬೇಕು’ ಎಂದು ಆಗ್ರಹಿಸಿದರು.
‘ನರೇಗಾ ಕೆಲಸಕ್ಕೂ ಮುನ್ನ ಬೇರೆ ಊರಿಗೆ ವಲಸೆ ಹೋಗುತ್ತಿದ್ದೆವು. ನರೇಗಾ ಕೆಲಸ ಸಿಕ್ಕ ನಂತರ ಊರಿನಲ್ಲೇ ಇದ್ದುಕೊಂಡು ಜೀವನ ಮಾಡುತ್ತಿದ್ದೇವೆ. ಆದರೆ, ಈಗ ಸರಿಯಾದ ಸಮಯಕ್ಕೆ ಕೂಲಿ ಹಣ ಬರುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ, ವಲಸೆ ಹೋಗುವುದು ಅನಿವಾರ್ಯವಾಗಲಿದೆ’ ಎಂದು ಹೇಳಿದರು.
ಕದರಮಂಡಲಗಿಯ ಕಾರ್ಮಿಕ ಹನುಮಂತಪ್ಪ ಬ್ಯಾಡಗಿ ಮಾತನಾಡಿ, ‘ಕೆಲಸ ಮಾಡಿರುವ ನಮಗೆ ಇದುವರೆಗೂ ಹಣ ಬಂದಿಲ್ಲ. ಅಧಿಕಾರಿಗಳ ಬಳಿ ಕೇಳಿದರೆ, ಕೇಂದ್ರದಿಂದ ಹಣ ಬಂದಿಲ್ಲವೆಂದು ಹೇಳುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಬರುತ್ತದೆ. ಆದರೆ, ನಮಗೆ ಏನು ಬರುತ್ತದೆ. ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡು ನಮಗೆ ಹಣ ಕೊಡಿಸಬೇಕು’ ಎಂದರು.
ಕಾರ್ಮಿಕ ಬೀರಪ್ಪ ಗೋಡೇರ್ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಲ್ಲಿ ಎನ್‌ಎಂಎಂಎಸ್ ಆ್ಯಪ್ ಮೂಲಕ ಕಾರ್ಮಿಕರ ಹಾಜರಾತಿ ಪಡೆಯಲಾಗುತ್ತಿದ್ದು, ಇದರ ನಿರ್ವಹಣೆಯನ್ನು ಪಂಚಾಯಿತಿ ಸಿಬ್ಬಂದಿಗೆ ವಹಿಸಲಾಗುತ್ತಿದೆ. ಇದರ ಬದಲು ಮೇಟ್‌ಗಳಿಗೆ ವಹಿಸಬೇಕು. ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ನೆರಳು, ನೀರು, ಪ್ರಥಮ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್ ಅವರಿಗೂ ಮನವಿ ಸಲ್ಲಿಸಿದ ಕಾರ್ಮಿಕರು, ಆದಷ್ಟು ಬೇಗ ಹಣ ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿದರು. ಪ್ರತಿಭಟನೆ ಎಚ್ಚರಿಕೆಯನ್ನೂ ನೀಡಿದರು.
ಹಳೇ ಬಾಕಿ ಪಾವತಿಯಾಗಿದೆ. ಏಪ್ರಿಲ್ 17ರಿಂದ ಕೂಲಿ ಹಣ ಬಾಕಿಯಿದೆ. ಕೇಂದ್ರದಿಂದಲೇ ಕಾರ್ಮಿಕರ ಖಾತೆಗಳಿಗೆ ಹಣ ವರ್ಗಾವಣೆ ಆಗಲಿದೆರುಚಿ ಬಿಂದಲ್ ಸಿಇಒ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.