ADVERTISEMENT

‘ಸಹಿಷ್ಣುತೆ ಇದ್ದಲ್ಲಿ ಸಮಾಜದಲ್ಲಿ ಶಾಂತಿ’

ರಾಮಕೃಷ್ಣ -ವಿವೇಕಾನಂದ ಭಾವ ಪ್ರಚಾರ ಪರಿಷತ್‌ನ 5ನೇ ವಾರ್ಷಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 17:19 IST
Last Updated 14 ಡಿಸೆಂಬರ್ 2018, 17:19 IST
ರಾಣೆಬೆನ್ನೂರಿನಲ್ಲಿ ರಾಮಕೃಷ್ಣ -ವಿವೇಕಾನಂದ ಭಾವ ಪ್ರಚಾರ ಪರಿಷತ್‌ನ 5ನೇ ವಾರ್ಷಿಕ ಸಮ್ಮೇಳನವನ್ನು ಗದಗ ಶಾಸಕ ಎಚ್. ಕೆ.ಪಾಟೀಲ ಉದ್ಘಾಟಿಸಿದರು. ಸ್ವಾಮಿ ಗೌತಮಾನಂದಜಿ ಮಹಾರಾಜ್‌, ಸ್ವಾಮಿ ಮುಕ್ತಿದಾನಂದ, ಸ್ವಾಮಿ ಆತ್ಮವಿದಾನಂದ, ಸ್ವಾಮಿ ಜಿತಕಾಮಾನಂದ, ಸ್ವಾಮಿ ಬೋಧಸ್ವರೂಪಾನಂದ, ಸ್ವಾಮಿ ಆತ್ಮಜ್ಞಾನಂದ, ಸ್ವಾಮಿ ತತ್ವರೂಪಾನಂದ, ಸ್ವಾಮಿ ನಿರ್ಭಯನಂದ, ಸ್ವಾಮಿ ವೀರೇಶಾನಂದ ಇದ್ದಾರೆ
ರಾಣೆಬೆನ್ನೂರಿನಲ್ಲಿ ರಾಮಕೃಷ್ಣ -ವಿವೇಕಾನಂದ ಭಾವ ಪ್ರಚಾರ ಪರಿಷತ್‌ನ 5ನೇ ವಾರ್ಷಿಕ ಸಮ್ಮೇಳನವನ್ನು ಗದಗ ಶಾಸಕ ಎಚ್. ಕೆ.ಪಾಟೀಲ ಉದ್ಘಾಟಿಸಿದರು. ಸ್ವಾಮಿ ಗೌತಮಾನಂದಜಿ ಮಹಾರಾಜ್‌, ಸ್ವಾಮಿ ಮುಕ್ತಿದಾನಂದ, ಸ್ವಾಮಿ ಆತ್ಮವಿದಾನಂದ, ಸ್ವಾಮಿ ಜಿತಕಾಮಾನಂದ, ಸ್ವಾಮಿ ಬೋಧಸ್ವರೂಪಾನಂದ, ಸ್ವಾಮಿ ಆತ್ಮಜ್ಞಾನಂದ, ಸ್ವಾಮಿ ತತ್ವರೂಪಾನಂದ, ಸ್ವಾಮಿ ನಿರ್ಭಯನಂದ, ಸ್ವಾಮಿ ವೀರೇಶಾನಂದ ಇದ್ದಾರೆ   

ರಾಣೆಬೆನ್ನೂರು: ‘ಸಹಿಷ್ಣುತೆ ಇದ್ದಲ್ಲಿ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ’ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು.

ನಗರದ ಹೆದ್ದಾರಿ ಸಮೀಪದ ಲಲಿತ ಭವನದಲ್ಲಿ ಶುಕ್ರವಾರ ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ಏರ್ಪಡಿಸಿದ್ದ ರಾಮಕೃಷ್ಣ-ವಿವೇಕಾನಂದ ಭಾವ ಪ್ರಚಾರ ಪರಿಷತ್‌ನ ವಾರ್ಷಿಕ ಸಮ್ಮೇಳನವನ್ನು ಶಾಸಕ ಎಚ್. ಕೆ.ಪಾಟೀಲ ಉದ್ಘಾಟಿಸಿ ಮಾತನಾಡಿದರು.

‘ಯುವಕರು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು. ಇತರರ ಜೊತೆ ಪ್ರೀತಿ ಶಾಂತಿಯಿಂದ ವರ್ತಿಸಬೇಕು.ಯುವಕರನ್ನು ಶಕ್ತಿವಂತರನ್ನಾಗಿಸಿ ಅವರಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಿದರೆ ಸಕಾರಾತ್ಮಕ ಬದಲಾವಣೆ ಸಾಧ್ಯ’ ಎಂದರು.

ADVERTISEMENT

ಕೋಲ್ಕತ್ತ ರಾಮಕೃಷ್ಣ ಮಠ ಮತ್ತು ಮಿಷನ್, ಬೇಲೂರು ಮಠದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದ್‌ ಮಹಾರಾಜ ಮಾತನಾಡಿ, ‘ಹಿಂದೂ, ಕ್ರಿಶ್ಚಿಯನ್‌, ಇಸ್ಲಾಂ, ಬೌದ್ಧ ಧರ್ಮದ ಸಾರವೆಲ್ಲವೂ ಒಂದೇ. ಜ್ಞಾನಿಗಳ ನಿರಾಕಾರ ಬ್ರಹ್ಮವೂ ಭಕ್ತರ ಸಾಕಾರ ಬ್ರಹ್ಮವೂ ಒಂದೇ. ಅದನ್ನು ಮರೆತು ನಾವು ಆಚರಣೆಗಳ ವಿಚಾರದಲ್ಲಿ ಜಗಳವಾಡುತ್ತಿದ್ದೇವೆ’ ಎಂದು ಹೇಳಿದರು.

‘ಮನುಷ್ಯನ ಆಂತರ್ಯದಲ್ಲಿ ಹುದುಗಿರುವ ದೈವತ್ವವನ್ನು ಪ್ರಕಟಗೊಳಿಸುವುದೇ ಸನಾತನ ಧರ್ಮ. ರಾಮಕೃಷ್ಣರು ನಮ್ಮ ಸನಾತನ ಧರ್ಮವನ್ನು ಅತ್ಯಂತ ಸರಳ ರೀತಿಯಲ್ಲಿ ವಿವರಿಸಿದ್ದಾರೆ’ ಎಂದು ಹೇಳಿದರು.

‘ರಾಮಕೃಷ್ಣರ ಚಿಂತನೆಗಳ ಅಧ್ಯಯನ ಮಾಡಬೇಕು. ರಾಮಕೃಷ್ಣರು ಎಲ್ಲ ಧರ್ಮಗಳ ಮೂಲತತ್ವಗಳನ್ನು ಬೋಧಿಸಿದ್ದರಿಂದ ಎಲ್ಲ ಧರ್ಮದವರೂ ಅವರನ್ನು ಪೂಜಿಸುತ್ತಾರೆ. ರಾಷ್ಟ್ರದ ಪ್ರತಿಯೊಬ್ಬರಿಗೂ ಶ್ರೀರಾಮಕೃಷ್ಣರ ಸಂದೇಶವನ್ನು ತಲುಪಿಸುವುದಕ್ಕಾಗಿ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ ಸ್ಥಾಪಿತವಾಯಿತು’ ಎಂದರು.

ಕರ್ನಾಟಕ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್‌ನ ಅಧ್ಯಕ್ಷ ಹಾಗೂ ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ್‌ ಮಹಾರಾಜ್‌ ಮಾತನಾಡಿ, ‘ಪರಸ್ಪರ ಸಹಕಾರದಿಂದ ಪ್ರತಿಯೊಬ್ಬರೂ ಬದುಕುತ್ತಿರುವುದರಿಂದ ಎಲ್ಲರ ಋಣ ನಮ್ಮ ಮೇಲಿದೆ’ ಎಂದರು.

ಬೇಲೂರು ಮಠದ ಟ್ರಸ್ಟಿಗಳಾದ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಮಾತನಾಡಿ, ‘ಯುವಜನರಿಗೆ ಭಾರತೀಯ ಸಂಸ್ಕೃತಿ, ಸೇವೆ ಮತ್ತು ಅಧ್ಯಾತ್ಮದ ಆದರ್ಶ ತಿಳಿಸಬೇಕು. ಗೃಹಸ್ಥರಲ್ಲಿ ಅಧ್ಯಾತ್ಮ ಪ್ರವೇಶವಾದರೆ ’ವಸುದೈವ ಕುಟುಂಬಕಂ’ ಆದರ್ಶ ಸಮಾಜದಲ್ಲಿ ಅರಳುತ್ತದೆ. ವಿಶ್ವಮಾನ್ಯ ಭಾರತೀಯ ಸಂಸ್ಕೃತಿಯ ಸಾರವನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು’ ಎಂದರು.

ಗದಗ- ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮಗಳ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ್‌ ಮಾತನಾಡಿ, ಆಚರಣೆಗೂ ಮೊದಲು ಸತ್ಯವನ್ನು ಸರಿಯಾಗಿ ಶ್ರವಣ ಮಾಡಬೇಕು. ಶ್ರೇಷ್ಠ ವಿಚಾರಗಳ ಮಂಥನ ಜಗತ್ತಿನಲ್ಲಿ ಕ್ರಾಂತಿಯನ್ನೇ ಉಂಟು ಮಾಡುತ್ತದೆ. ಸ್ವಾಮಿ ವಿವೇಕಾನಂದರು ಹೇಳುವಂತೆ ಭಾರತ ತನ್ನ ಉದ್ದಾರಕ್ಕೆ ರಾಮಕೃಷ್ಣರ ಚಿಂತನೆ ಅನುಸರಿಸಬೇಕು. ಬೇಲೂರು ಮಠದಿಂದ ಹೊರಟ ಬೆಳಕು ಇಡೀ ಪ್ರಪಂಚಕ್ಕೆ ಹೊಸ ಬೆಳಕನ್ನು ನೀಡುತ್ತದೆ. ಭಾರತವನ್ನು ಅರಿಯಬೇಕೆಂದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಬೇಕು’ ಎಂದು ರವೀಂದ್ರನಾಥ ಟ್ಯಾಗೋರ್‌ಹೇಳುತ್ತಾರೆ. ಕೇವಲ ಶ್ರೇಷ್ಠ ಚಿಂತನೆಗಳಿಂದ ಮಾತ್ರ ಎಲ್ಲ ಸಮಸ್ಯೆಗಳ ಪರಿಹಾರ ಸಾಧ್ಯ’ ಎಂದರು.


ದೇಶದ ವಿವಿಧೆಡೆಗಳಿಂದ ನೂರಾರು ಸ್ವಾಮೀಜಿ ಹಾಗೂ ಮಾತಾಜಿ ಆಗಮಿಸಿದ್ದರು. ಸ್ವಾಮಿ ರಘುವೀರಾನಂದ್‌, ಸ್ವಾಮಿ ಸುಮೇಧಾನಂದ್‌, ಸ್ವಾಮಿ ಸದಾನಂದ್‌ ಭಜನೆ ನೆರವೇರಿಸಿದರು. ಸ್ವಾಮಿ ಪ್ರಕಾಶಾನಂದ್‌, ಎಚ್.ವಿ.ಶಂಕರ, ಪ್ರೊ.ಬಿ.ಬಿ.ನಂದ್ಯಾಲ, ನಿರ್ಮಲಾ ಮಾನೆ, ಡಾ.ಚಂದ್ರಶೇಖರ ಕೇಲಗಾರ ಹಾಗೂ ಚಂದ್ರಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.