ADVERTISEMENT

ತಿಳವಳ್ಳಿ ಹೊರ ಠಾಣೆ ಮೇಲ್ದರ್ಜೆಗೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 2:39 IST
Last Updated 19 ಜುಲೈ 2025, 2:39 IST
ತಿಳವಳ್ಳಿಯಲ್ಲಿ ಈಗಿರುವ ಹೊರ ಪೊಲೀಸ್ ಠಾಣೆ ಚಿತ್ರ.
ತಿಳವಳ್ಳಿಯಲ್ಲಿ ಈಗಿರುವ ಹೊರ ಪೊಲೀಸ್ ಠಾಣೆ ಚಿತ್ರ.   

ತಿಳವಳ್ಳಿ: ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಹಾನಗಲ್ ತಾಲೂಕಿನ ತಿಳವಳ್ಳಿ ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಹಲವು ದಶಕಗಳ ಕನಸು ನನಸಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.

ಗುರುವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಹಾನಗಲ್ ತಾಲ್ಲೂಕು ಹೆಚ್ಚು ಗ್ರಾಮಗಳನ್ನು ಒಳಗೊಂಡಿರುವ ದೊಡ್ಡ ತಾಲೂಕುಗಳಲ್ಲಿ ಒಂದಾಗಿದೆ. ತಾಲ್ಲೂಕು ದೊಡ್ಡದಾಗಿದ್ದರೂ ಹಾನಗಲ್ ಮತ್ತು ಆಡೂರಿನಲ್ಲಿ ಮಾತ್ರ ಪೊಲೀಸ್ ಠಾಣೆಗಳಿದ್ದವು. ಇದರಿಂದ ಪೊಲೀಸ್ ಇಲಾಖೆಯ ಮೇಲೆ ಹೊರೆ ಹೆಚ್ಚಿತ್ತು.

ಕಾನೂನು ಸುವ್ಯವಸ್ಥೆ ಕಾಪಾಡುವ ಸವಾಲು ಎದುರಿಸಬೇಕಿತ್ತು. ಈ ಕಾರಣದಿಂದ ತಿಳವಳ್ಳಿಯ ಹೊರ ನಠಾಣೆಯನ್ನು ಮೇಲ್ದರ್ಜೆಗೇರಿಸಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಮಾಡುವ ಬೇಡಿಕೆ 20-30 ವರ್ಷಗಳಿಂದ ಇತ್ತು. ಆದರೆ ತಾಂತ್ರಿಕ ಕಾರಣಗಳಿಂದ ಬೇಡಿಕೆ ಈಡೇರಿರಲಿಲ್ಲ. ಗೃಹ ಸಚಿವರಿಗೆ ಮನವರಿಕೆ ಮಾಡಿದ್ದರಿಂದ ಕೊನೆಗೂ ಬೇಡಿಕೆ ಈಡೇರಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಸ್ತುತ ಆಡೂರು ಪೊಲೀಸ್ ಠಾಣೆ 71 ಗ್ರಾಮಗಳನ್ನು ಒಳಗೊಂಡಿದ್ದು, ಅತಿಯಾದ ವಿಸ್ತೀರ್ಣ ಹೊಂದಿದೆ. ಅದೇ ರೀತಿ ಹಾನಗಲ್ ಪೊಲೀಸ್ ಠಾಣೆ 84 ಗ್ರಾಮಗಳ ವ್ಯಾಪ್ತಿ ಹೊಂದಿದೆ. ಎರಡೂ ಠಾಣೆಗಳಿಂದ ದೂರದಲ್ಲಿರುವ 45 ಗ್ರಾಮಗಳನ್ನು ಒಳಗೊಂಡಂತೆ ತಿಳವಳ್ಳಿ ಹೊಸ ಪೊಲೀಸ್ ಠಾಣೆ ಅಸ್ತಿತ್ವಕ್ಕೆ ಬರಲಿದೆ.

ಸರ್ಕಾರ ಹೊರಠಾಣೆಯನ್ನು ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿ ಕೈ ತೊಳೆದುಕೊಳ್ಳದೇ ದೈನಂದಿನ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪಿಎಸ್‌ಐ, ಎಎಸ್‌ಐ, ಸಿಎಚ್‌ಸಿ, ಸಿಪಿಸಿ, ಚಾಲಕ ಸೇರಿದಂತೆ ಅಗತ್ಯ ಹುದ್ದೆಗಳಿಗೂ ಮಂಜೂರಾತಿ ನೀಡಿದೆ ಎಂದು ತಿಳಿಸಿರುವ ಶ್ರೀನಿವಾಸ ಮಾನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರನ್ನು ಅಭಿನಂದಿಸಿದ್ದಾರೆ.

ತಿಳವಳ್ಳಿ ಹೊರಠಾಣೆಯನ್ನು ಮೇಲ್ದರ್ಜೆಗೇರಿಸಿ ಪೊಲೀಸ್ ಠಾಣೆಯನ್ನಾಗಿಸಬೇಕೆನ್ನುವ ಸುದೀರ್ಘ ವರ್ಷಗಳ ಬೇಡಿಕೆ ಆ ಭಾಗದ ಗ್ರಾಮಸ್ಥರ ಒತ್ತಾಸೆಗೆ ನಮ್ಮ ಸರ್ಕಾರ ಸ್ಪಂದಿಸಿದೆ. ಅಗತ್ಯ ಹುದ್ದೆಗಳಿಗೂ ಮಂಜೂರಾತಿ ನೀಡಿದೆ.

- ಶ್ರೀನಿವಾಸ ಮಾನೆ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.