ADVERTISEMENT

ಗಂಗಾಪುರ | ಪೂರ್ಣಗೊಳ್ಳದ ಅಂಗನವಾಡಿ ಕಟ್ಟಡ

ಗಂಗಾಪುರ: ರಸ್ತೆಯ ಮೇಲೆ ಹರಿಯುವ ಕೊಳಚೆ ನೀರು

ರಾಜೇಂದ್ರ ನಾಯಕ
Published 13 ಡಿಸೆಂಬರ್ 2023, 5:08 IST
Last Updated 13 ಡಿಸೆಂಬರ್ 2023, 5:08 IST
ಗಂಗಾಪುರ ಗ್ರಾಮದಲ್ಲಿ ಚರಂಡಿಗಳು ಹೂಳು ತುಂಬಿಕೊಂಡಿದ್ದು, ಕೊಳಚೆ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿವೆ
ಗಂಗಾಪುರ ಗ್ರಾಮದಲ್ಲಿ ಚರಂಡಿಗಳು ಹೂಳು ತುಂಬಿಕೊಂಡಿದ್ದು, ಕೊಳಚೆ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿವೆ   

ಗಂಗಾಪುರ (ಹಂಸಭಾವಿ): ಹಿರೇಕೆರೂರ ತಾಲ್ಲೂಕಿನ ಗಂಗಾಪುರ ಗ್ರಾಮದ ಅಂಗನವಾಡಿ ಕಟ್ಟಡವು ಕಟ್ಟಲು ಪ್ರಾರಂಭ ಮಾಡಿ ಎಂಟು ವರ್ಷಗಳೇ ಕಳೆದರೂ ಗ್ರಾಮ ಪಂಚಾಯ್ತಿಯವರ ಬೇಜವಾಬ್ದಾರಿಯಿಂದ ಇನ್ನೂ ಪೂರ್ಣವಾಗಿಲ್ಲ. ಮಕ್ಕಳು ಶಿಥಿಲಗೊಂಡಿರುವ ಕಟ್ಟಡದಲ್ಲೇ ದಿನ ಕಳೆಯುವಂತಾಗಿದೆ.

‘ಈ ಗ್ರಾಮಕ್ಕೆ 2015ರಲ್ಲಿ ನರೇಗಾ ಯೋಜನೆಯಿಂದ ₹5 ಲಕ್ಷ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ₹3 ಲಕ್ಷ ಅನುದಾನದಿಂದ ಹೊಸ ಅಂಗನವಾಡಿ ಮಂಜೂರಾಗಿ ಅಡಿಪಾಯ ಹಾಕಲಾಗಿತ್ತು. ಆದರೆ ಕಟ್ಟಡದ ಜಾಗಕ್ಕೆ ಸಮಸ್ಯೆಗಳು ಎದುರಾಗಿ ಅಲ್ಲಿಗೇ ಸ್ಥಗಿತಗೊಂಡಿತ್ತು. 2022ರಲ್ಲಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಕಟ್ಟಡ ಪ್ರಾರಂಭಗೊಂಡಿತು. ಆದರೆ ಗ್ರಾಮ ಪಂಚಾಯ್ತಿಯಲ್ಲಿ ಈ ಕಾಮಗಾರಿಗೆ ಸಂಬಂಧಿಸಿದ ಕಡತ ಕಳೆದಿದ್ದು, ಈ ಕಟ್ಟಡ ಪೂರ್ಣಗೊಳ್ಳದೇ ನಿಂತಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಮರಿಗೌಡ ಪಾಟೀಲ ತಿಳಿಸಿದರು.

‘ಎಂಟು ವರ್ಷವಾದರೂ ನಮಗೆ ಹೊಸ ಕಟ್ಟಡ ಪೂರ್ಣಗೊಳಿಸಿ ಕೊಟ್ಟಿಲ್ಲ, ಈಗ ಇರುವ ಕಟ್ಟಡ ಹಳೆಯದಾಗಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸುತ್ತಲೂ ಚರಂಡಿ ನೀರು ನಿಂತಿದ್ದು, ದುರ್ನಾತ ಬೀರುತ್ತಿದೆ. ಶೌಚಾಲಯ ವ್ಯವಸ್ಥೆಯೂ ಇಲ್ಲ. ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ’ ಎಂದು ಅಂಗನವಾಡಿ ಕಾರ್ಯಕರ್ತೆ ಅಳಲು ತೋಡಿಕೊಂಡರು.

ADVERTISEMENT

ಅಕ್ರಮ ಚಟುವಟಿಕೆಗಳ ತಾಣ: ಇನ್ನೂ ಅರ್ಧಕ್ಕೆ ನಿಂತಿರುವ ಈ ಅಂಗನವಾಡಿ ಕಟ್ಟದ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಮದ್ಯವ್ಯಸನಿಗಳು ನಿತ್ಯ ಇಲ್ಲಿ ತ್ಯಾಜ್ಯ ಎಸೆಯುತ್ತಾರೆ. ಪಕ್ಕದ ಕುಲುಮೆಯ ಕಚ್ಚಾ ವಸ್ತುಗಳನ್ನು ಇಲ್ಲಿ ಇರಿಸಲಾಗಿದೆ. ಕೆಲವರಿಗೆ ಮೂತ್ರ ವಿಸರ್ಜನೆ ಮಾಡುವ ಸ್ಥಳವೂ ಆಗಿದೆ ಎಂದು ಗ್ರಾಮಸ್ಥರು ದೂರಿದರು.

ಗ್ರಾಮದಲ್ಲಿನ ಚರಂಡಿಗಳು ಹೂಳು ತುಂಬಿಕೊಂಡಿದ್ದು, ಕೊಳಚೆ ನೀರೆಲ್ಲ ರಸ್ತೆ ಮೇಲೆ ಹರಿದು ಬರುತ್ತದೆ. ಇನ್ನೂ ಕೆಲವು ಕಡೆ ಚರಂಡಿ ನಿರ್ಮಾಣವೇ ಆಗಿಲ್ಲ. ಗಂಗಾಪುರದಿಂದ ಕೋಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಹಲವಾರು ವರ್ಷಗಳಿಂದ ಹಾಳಾಗಿದ್ದು, ಈ ರಸ್ತೆಗೆ ಹೊಂದಿಕೊಂಡೇ ತಿಪ್ಪೆಗಳಿವೆ. ಗ್ರಾಮದಲ್ಲಿ ಕೊಳಚೆ ಪ್ರದೇಶ ಎದ್ದು ಕಾಣುತ್ತಿದೆ. ಇಲ್ಲಿನ ಅವ್ಯವಸ್ಥೆಯನ್ನು ಶೀಘ್ರ ಸರಿಪಡಿಸಬೇಕು ಎಂದು ಗ್ರಾಮಸ್ಥ ಬಸವರಾಜ ಒತ್ತಾಯಿಸಿದರು.

ನಿರ್ಮಾಣ ಕಾರ್ಯ ಸ್ಥಗಿತಗೊಂಡ ಅಂಗನವಾಡಿ ಕಟ್ಟಡದಲ್ಲಿ ಬಿಸಾಡಿರುವ ಮದ್ಯದ ಪ್ಯಾಕೆಟ್‌ಗಳು
ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿಯ ದಾಖಲೆ ಕಂಪ್ಯೂಟರ್‌ನಲ್ಲಿ ಡಿಲಿಟ್‌ ಆಗಿದೆ. ಸರಿಪಡಿಸಿ ಕೊಡುವಂತೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸಮಸ್ಯೆ ಇತ್ಯರ್ಥವಾದ ಕೂಡಲೇ ಕಟ್ಟಡ ಪೂರ್ಣಗೊಳಿಸಲಾಗುವುದು
ಶಿಲ್ಪಾ ತುಮರಿಕೊಪ್ಪ ಗ್ರಾ.ಪಂ ಅಧ್ಯಕ್ಷೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡಬೇಕಿದ್ದ ₹3 ಲಕ್ಷ ಅನುದಾನ ಕೊಡಲಾಗಿದೆ. ತಾಂತ್ರಿಕ ಕಾರಣದಿಂದ ನರೇಗಾ ಯೋಜನೆಯ ₹5 ಲಕ್ಷ ಅನುದಾನ ಬಳಕೆಯ ದಾಖಲಾತಿ ಸಮಸ್ಯೆಯಾಗಿದ್ದು ಸರಿಪಡಿಸಿಕೊಳ್ಳಲು ತಿಳಿಸಲಾಗಿದೆ
ಜಯಶ್ರೀ ಪಾಟೀಲ ಸಿಡಿಪಿಒ ಹಿರೇಕೆರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.