ADVERTISEMENT

ಹಾವೇರಿ: ದೊಡ್ಡಾಟಕ್ಕೆ ಜೀವ ತುಂಬಿದ ಕಲಾವಿದರು

ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಗೋವಿಂದಪ್ಪ, ಫಕ್ಕೀರೇಶ ಆಯ್ಕೆ

ಎಂ.ವಿ.ಗಡಾದ
Published 16 ಸೆಪ್ಟೆಂಬರ್ 2022, 19:30 IST
Last Updated 16 ಸೆಪ್ಟೆಂಬರ್ 2022, 19:30 IST
ಕುರುಕ್ಷೇತ್ರ ದೊಡ್ಡಾಟದಲ್ಲಿ ಭೀಮನ ಪಾತ್ರದಾರಿ ಫಕ್ಕೀರೇಶ ಬಿಶೆಟ್ಟಿ (ಎಡದಿಂದ ಮೊದಲಿಗೆ ನಿಂತಿರುವವರು)
ಕುರುಕ್ಷೇತ್ರ ದೊಡ್ಡಾಟದಲ್ಲಿ ಭೀಮನ ಪಾತ್ರದಾರಿ ಫಕ್ಕೀರೇಶ ಬಿಶೆಟ್ಟಿ (ಎಡದಿಂದ ಮೊದಲಿಗೆ ನಿಂತಿರುವವರು)   

ಶಿಗ್ಗಾವಿ:ತಾಲ್ಲೂಕಿನ ಕಬನೂರ ಗ್ರಾಮದಲ್ಲಿ ಜನಿಸಿದ ದೊಡ್ಡಾಟ ಕಥೆಗಾರ, ಪಾತ್ರಧಾರಿ ಗೋವಿಂದಪ್ಪ ತಳವಾರ ಅವರು ಬಾಗಲಕೋಟೆ ಕರ್ನಾಟಕ ಬಯಲಾಟ ಅಕಾಡೆಮಿ 2021ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

1983ರಲ್ಲಿ ಆದಿಶಕ್ತಿ ಮಹಾತ್ಮೆ ದೊಡ್ಡಾಟದಲ್ಲಿ ಶ್ರೀದೇವಿ ಪಾತ್ರ ಮಾಡುವ ಮೂಲಕ ದೊಡ್ಡಾಟಕ್ಕೆ ಪದಾರ್ಪಣೆ ಮಾಡಿದ ಅವರು ನೂರಾರು ದೊಡ್ಡಾಟಗಳಲ್ಲಿ ಪಾತ್ರಧಾರಿಯಾಗಿ ನಂತರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರದರ್ಶನಗೊಂಡ ನೂರಾರು ದೊಡ್ಡಾಟದ ಕಥೆಗಾರರಾಗಿ ಗುರುತಿಸಿಕೊಂಡಿದ್ದಾರೆ.

ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ದೊಡ್ಡಾಟ, ನೃತ್ಯ ತರಬೇತಿ ನೀಡಿದ್ದಾರೆ. ದೊಡ್ಡಾಟ ಜೀವಂತವಾಗಿಡುವಲ್ಲಿ ಗೋವಿಂದಪ್ಪನವರ ಶ್ರಮ ಶ್ಲಾಘನೀಯವಾಗಿದೆ.

ADVERTISEMENT

ದಿವಂಗತ ಡಾ.ಟಿ.ಬಿ. ಸೊಲಬಕ್ಕನವರ ದೊಡ್ಡಾಟಗಳ ತರಬೇತಿ ಶಿಬಿರದಲ್ಲಿ ಅನೇಕ ವರ್ಷ ದುಡಿದು, ಕಥೆಗಾರರಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ದೊಡ್ಡಾಟ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಆದಿಶಕ್ತಿ ಮಹಾತ್ಮೆ, ಕುರುಕ್ಷೇತ್ರ, ದ್ರೋಣಪರ್ವ, ಕರ್ಣಪರ್ವ, ಶ್ರೀ ರೇಣುಕಾ ಮಹಾತ್ಮೆ ಇನ್ನೂ ಮುಂತಾದ ದೊಡ್ಡಾಟಗಳಿಗೆ ಕಥೆಗಾರರಾಗಿ ಸೇವೆ ನೀಡುತ್ತಿದ್ದಾರೆ. ಇವರ ಸುದೀರ್ಘ ಸೇವೆ ಗಮನಿಸಿ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿ 2021ರ ಗೌರ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ.

‘30 ವರ್ಷಗಳ ದೊಡ್ಡಾಟ ಕಲಾ ಸೇವೆ ಗುರುತಿಸಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಕಬನೂರಿನ ದೊಡ್ಡಾಟ ಕಥೆಗಾರ ಗೋವಿಂದಪ್ಪ ತಳವಾರ ಹೇಳುತ್ತಾರೆ.

***

ಫಕ್ಕೀರೇಶಗೆ ವಾರ್ಷಿಕ ಪ್ರಶಸ್ತಿಯ ಗೌರವ

ಶಿಗ್ಗಾವಿ: ತಾಲ್ಲೂಕಿನ ಹುಲಸೋಗಿ ಗ್ರಾಮ ದೊಡ್ಡಾಟದ ಹಿರಿಯ ಕಲಾವಿದ ಫಕ್ಕೀರೇಶ ದುಂಡಪ್ಪ ಬಿಶೆಟ್ಟಿ ಅವರು ಕರ್ನಾಟಕ ಬಯಲಾಟ ಅಕಾಡೆಮಿ- 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ತಾಲ್ಲೂಕಿನ ಹುಲಸೋಗಿ ಗ್ರಾಮದಲ್ಲಿ ಜನಿಸಿದ ಅವರು 1983ರಲ್ಲಿ ಕುರುಕ್ಷೇತ್ರ ದೊಡ್ಡಾಟದಲ್ಲಿ ಭೀಮನ ಪಾತ್ರ ಮಾಡುವ ಮೂಲಕ ದೊಡ್ಡಾಟದ ಗೀಳು ಬೆಳೆಸಿಕೊಂಡವರು.

ದೊಡ್ಡಾಟ ತಜ್ಞ ದಿವಂಗತ ಡಾ.ಟಿ.ಬಿ.ಸೊಲಬಕ್ಕನವರ ಗರಡಿಯಲ್ಲಿ ತಯಾರಾದ ಫಕ್ಕೀರೇಶ ಕುರುಕ್ಷೇತ್ರ, ಏಕಲವ್ಯ, ಬಸವವಿಜಯ, ರೇಣುಕಾ ಯಲ್ಲಮ್ಮ, ಕಿತ್ತೂರ ಚನ್ನಮ್ಮ ಮುಂತಾದ ದೊಡ್ಡಾಟಗಳಲ್ಲದೆ, ಮಹಾಸತಿ ಅನಸೂಯಾ, ಸಂಗ್ಯಾಬಾಳ್ಯಾ ಸೇರಿದಂತೆ ಧಾರವಾಡ ಆಕಾಶವಾಣಿಯಲ್ಲಿ ಎರಡು ಬಾರಿ ಪ್ರಸ್ತುತಗೊಂಡ ಕುರುಕ್ಷೇತ್ರ ದೊಡ್ಡಾಟಗಳಲ್ಲಿ ಪಾತ್ರದಾರಿಯಾಗಿ ಅಭಿನಯಿಸಿದ್ದಾರೆ.

ಡಾ. ಸೋಲಬಕ್ಕನವರ ನಿರ್ದೇಶನದಲ್ಲಿ ರಾಜ್ಯದಾದ್ಯಂತ ಪ್ರದರ್ಶನಗೊಂಡ ದೊಡ್ಡಾಟಗಳ ಅಡ್ಡಾಟ ಕಾರ್ಯಕ್ರಮದ ವಿವಿಧ ಪ್ರಾತ್ರಗಳನ್ನು ಮಾಡಿ ಸೈ ಆನಿಸಿಕೊಂಡಿದ್ದಾರೆ. ಹಿಮ್ಮೇಳ ಗಾಯಕರಾಗಿ ದೊಡ್ಡಾಟ ಕ್ಷೇತ್ರಕ್ಕೆ ನೀಡಿದ ಅನುಪಮ ಸೇವೆ ಗುರುತಿಸಿದ ಅಕಾಡೆಮಿ ಪ್ರಶಸ್ತಿ ನೀಡಿರುವದು. ಶ್ರಮಕ್ಕೆ ಸಿಕ್ಕಿರುವ ಫಲವಾಗಿದೆ ಎಂದು ಇಡೀ ಕಲಾವಿದರು ಹೆಮ್ಮೆ ಪಡುವಂತಾಗಿದೆ.

***

ದೊಡ್ಡಾಟ ಕಲೆಗೆ ಗೋವಿಂದಪ್ಪ ತಳವಾರ, ಫಕ್ಕೀರೇಶ ಬಿಶೆಟ್ಟಿ ಅವರ ಕೊಡುಗೆ ಅಪಾರ. ಇವರಿಬ್ಬರಿಗೆ ಪ್ರಶಸ್ತಿ ಬಂದಿರುವುದು ಕಲಾಬಳಗಕ್ಕೆ ಸಂದ ಗೌರವವಾಗಿದೆ

– ಶಂಕರ ಕೆ. ಅರ್ಕಸಾಲಿ, ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.