ADVERTISEMENT

ಹಾವೇರಿ | ಬಸವ ಜಯಂತಿ: ಜಿಲ್ಲೆಯಾದ್ಯಂತ ಆಚರಣೆ

ವಿಶ್ವಗುರು ಬಸವಣ್ಣರ ಭಾವಚಿತ್ರಕ್ಕೆ ಪೂಜೆ, ಮೆರವಣಿಗೆ, ವಿವಿಧೆಡೆ ಸಾಮೂಹಿಕ ವಿವಾಹ– ರಥೋತ್ಸವ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 16:11 IST
Last Updated 30 ಏಪ್ರಿಲ್ 2025, 16:11 IST
ಹಾವೇರಿಯಲ್ಲಿ ಜಿಲ್ಲಾಡಳಿತ–ಹುಕ್ಕೇರಿ ಮಠದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ನಮಿಸಲಾಯಿತು
ಹಾವೇರಿಯಲ್ಲಿ ಜಿಲ್ಲಾಡಳಿತ–ಹುಕ್ಕೇರಿ ಮಠದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ನಮಿಸಲಾಯಿತು   

ಹಾವೇರಿ: ಬಸವ ಜಯಂತಿಯನ್ನು ಜಿಲ್ಲೆಯಾದ್ಯಂತ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಿದ ಜನರು, ವಿಶ್ವಗುರು ಬಸವಣ್ಣ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಜಿಲ್ಲಾ ಕೇಂದ್ರ ಹಾವೇರಿಯ ಹಲವು ಕಡೆಗಳಲ್ಲಿ ಬಸವ ಜಯಂತಿ ಕಾರ್ಯಕ್ರಮಗಳು ನಡೆದವು. ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು, ಹಿರೇಕೆರೂರು ಪಟ್ಟಣ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬಸವ ಜಯಂತಿ ಆಚರಿಸಲಾಯಿತು. ವಿವಿಧೆಡೆ ಸಾಮೂಹಿಕ ವಿವಾಹ ಹಾಗೂ ರಥೋತ್ಸವಗಳು ಜರುಗಿದವು.

ಜಿಲ್ಲಾಡಳಿತ–ಹುಕ್ಕೇರಿ ಮಠ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹುಕ್ಕೇರಿಮಠದ ಸಹಯೋಗದಲ್ಲಿ ‘ಜಗಜ್ಯೋತಿ ಬಸವೇಶ್ವರ ಜಯಂತಿ’ ಕಾರ್ಯಕ್ರಮ ನಡೆಯಿತು.

ADVERTISEMENT

ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ‘ಸಮಾಜ ಸುಧಾರಕ, ಕ್ರಾಂತಿಕಾರಿ, ಭಕ್ತಿಭಂಡಾರಿ, ವಚನಕಾರ, ಮಹಾನ್ ಮಾನವತಾವಾದಿ ಅಪರೂಪದ ವ್ಯಕ್ತಿತ್ವದ ಸಂಗಮ ಬಸವಣ್ಣ’ ಎಂದರು.

ಬೈಲಹೊಂಗಲದ ಫಕೀರನಾಯ್ಕ ದುಂಡಪ್ಪ ಗಡ್ಡಿಗೌಡರ ಅವರು ಉಪನ್ಯಾಸ ನೀಡಿದರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹಾಗೂ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಅಧ್ಯಕ್ಷತೆ ವಹಿಸಿದ್ದರು.

ಹಾವೇರಿ ನಗರಸಭೆ: ಹಾವೇರಿಯ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಮಾತನಾಡಿ, ‘ಬಸವಣ್ಣನವರು ಇಡೀ ವಿಶ್ವಕ್ಕೆ ಗುರುವಾಗಿದ್ದಾರೆ. ಬಸವಣ್ಣನವರು ನೀಡಿರುವ ವಚನಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ವರಿಗೂ ಒಳಿತು ಬಯಸಬೇಕು’ ಎಂದರು.

ಪೌರಾಯುಕ್ತ ಗಂಗಾಧರ, ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

ಕಾಂಗ್ರೆಸ್ ಕಚೇರಿ: ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಂ. ಮೈದೂರು, ರಾಘವೇಂದ್ರ ಬಾಸೂರ, ಪ್ರಸನ್ನ ಹಿರೇಮಠ, ಪ್ರಕಾಶ್ ಹಂದ್ರಾಳ, ಶಾಂತಾ ಶಿರೂರು ಇದ್ದರು.

ಎಸ್‌ಎಫ್‌ಐ: ಹಾವೇರಿಯ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಎಸ್ಎಫ್ಐ ರಾಷ್ಟ್ರೀಯ ಉಪಾಧ್ಯಕ್ಷ ನಿತೀಶ್ ನಾರಾಯಣ್, ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ.ಎಸ್., ಜಿಲ್ಲಾಧ್ಯಕ್ಷ ಬಸವರಾಜ ಎಸ್., ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ್ ಇದ್ದರು.

ಕಂಚಿನ ಪುತ್ಥಳಿ ಸ್ಥಾಪಿಸಲು ಪೂಜೆ: ಹಳೇ ಪಿ.ಬಿ. ರಸ್ತೆಯ ಇಜಾರಿ ಲಕಮಾಪುರ ಬಳಿ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಿಸಲಾಗುತ್ತಿದ್ದು, ಬಸವ ಜಯಂತಿ ದಿನದಂದು ಪೂಜೆ ಸಲ್ಲಿಸಲಾಯಿತು.

ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹಾಗೂ ಬಸವ ಶಾಂತಲಿಂಗ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸಾತೇನಹಳ್ಳಿ ಇದ್ದರು.

ಬಸವಭವನ: ಹಾವೇರಿಯ ಬಸವ ಭವನದಲ್ಲಿ ಹುಕ್ಕೇರಿ ಮಠ, ಬಸವ ಬಳಗ, ವೀರಶೈವ ತರುಣ ಸಂಘ, ಹಾವೇರಿ ಶಹರ ಬಣಜಿಗ ಸಂಘ ಮತ್ತು ಬಸವ ಅಭಿಮಾನಿಗಳ ಸಹಯೋಗದಲ್ಲಿ ಬಸವ ಜಯಂತಿ ಆಚರಿಸಲಾಯಿತು.

ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹಾಗೂ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಬಸವಣ್ಣನವರ ವಚನಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಮಾಂತಪ್ಪ ಮಾಸೂರು, ಶೋಭಾತಾಯಿ ಮಾಗಾವಿ, ಕಿರಣ ಕೊಳ್ಳಿ ಇದ್ದರು.

ಆದಿ ಜಾಂಬವ ಸಂಘ: ಜಿಲ್ಲಾ ಆದಿಜಾಂಬವ ಸಂಘದಿಂದ ಬಸವ ಜಯಂತಿ ಆಚರಿಸಲಾಯಿತು. ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ, ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ, ಅಶೋಕ ಮರೆಣ್ಣನವರ, ಮಲ್ಲೇಶ ಕಡಕೋಳ, ಶಿವಬಸಪ್ಪ ಚೌಶೆಟ್ಟಿ, ನಾಗರಾಜ ಮೇದಾರ ಇದ್ದರು.

ಕಲ್ಯಾಣ ಸಮಿತಿ: ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯಿಂದ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಸಮಿತಿ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ, ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ರೇಣುಕಾ ಬಡಕ್ಕಣ್ಣನವರ ಇದ್ದರು.

ಕಾಂಗ್ರೆಸ್ ಹಾವೇರಿ ಜಿಲ್ಲಾ ಘಟಕದ ಕಚೇರಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಹಾವೇರಿ ಪ್ರವಾಸಿ ಮಂದಿರದಲ್ಲಿ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯಿಂದ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಹಾವೇರಿಯ ಬಸವ ಭವನದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು
ಹಾವೇರಿಯ ಹಳೇ ಪಿ.ಬಿ. ರಸ್ತೆಯ ಇಜಾರಿ ಲಕಮಾಪುರ ಬಳಿ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಯಿತು
ಹಾವೇರಿ ನಗರಸಭೆಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಹಾವೇರಿಯಲ್ಲಿ ಎಸ್‌ಎಫ್‌ಐ ವತಿಯಿಂದ ಬಸವೇಶ್ವರ ಜಯಂತಿ ಆಚರಿಸಲಾಯಿತು
ಹಾವೇರಿಯಲ್ಲಿ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.