ADVERTISEMENT

ಪೌರಕಾರ್ಮಿಕ ಆತ್ಮಹತ್ಯೆ: ಏಳು ಮಂದಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:40 IST
Last Updated 24 ಜೂನ್ 2025, 16:40 IST
ಹಾವೇರಿ ನಗರಸಭೆ ಎದುರು ಪೌರಕಾರ್ಮಿಕ ರಂಗಪ್ಪ ಹೆರಕಲ್‌ ಅವರಿಗೆ ಮಂಗಳವಾರ ಅಂತಿಮ ನಮನ ಸಲ್ಲಿಸಲಾಯಿತು 
ಹಾವೇರಿ ನಗರಸಭೆ ಎದುರು ಪೌರಕಾರ್ಮಿಕ ರಂಗಪ್ಪ ಹೆರಕಲ್‌ ಅವರಿಗೆ ಮಂಗಳವಾರ ಅಂತಿಮ ನಮನ ಸಲ್ಲಿಸಲಾಯಿತು    

ಹಾವೇರಿ: ಇಲ್ಲಿಯ ನಗರಸಭೆಯ ಪೌರಕಾರ್ಮಿಕ ರಂಗಪ್ಪ ಹೆರಕಲ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಆರೋಪಿಗಳ ವಿರುದ್ಧ ಹಾವೇರಿ ಶಹರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ರಂಗಪ್ಪ ಅವರ ಆತ್ಮಹತ್ಯೆ ಬಗ್ಗೆ ಮಗ ದೂರು ನೀಡಿದ್ದಾರೆ. ಆರೋಪಿಗಳಾದ ಅಕ್ಷತಾ ಕೆ.ಸಿ., ಶಾಂತಪ್ಪ ಅರುಣ ಕೊರವರ, ಸುಬ್ಬು, ಅರ್ಜುನ ಅರುಣ ಕೊರವರ, ಜಗದೀಶ ಮಾನೇಗಾರ, ಶಿವರಾಜ ಕರೇಗೌಡ್ರ, ನಿಹಾಲ್ ಮಣ್ಣೂರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೊರವರ ಓಣಿ ಬಳಿ ವ್ಯಕ್ತಿಯೊಬ್ಬರ ಜನ್ಮದಿನದ ಶುಭಾಷಯ ಕೋರುವ ಬ್ಯಾನರ್ ಹಾಕಲಾಗಿತ್ತು. ನಗರಸಭೆಯ ಪೌರಾಯುಕ್ತರ ಆದೇಶದಂತೆ ಜೂನ್ 5ರಂದು ಬ್ಯಾನರ್ ತೆರವುಗೊಳಿಸಲು ರಂಗಪ್ಪ ಅವರು ಸ್ಥಳಕ್ಕೆ ಹೋಗಿದ್ದರು. ಆರೋಪಿಗಳು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ’ ಎಂದರು.

ADVERTISEMENT

‘ನಗರಸಭೆಗೂ ನುಗ್ಗಿದ್ದ ಆರೋಪಿಗಳು, ರಂಗಪ್ಪ ಅವರನ್ನು ಪುನಃ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಜಾತಿ ನಿಂದನೆ ಮಾಡಿ, ಜೀವ ಬೆದರಿಕೆಯೊಡ್ಡಿದ್ದರು. ಇದರಿಂದ ನೊಂದ ರಂಗಪ್ಪ, ಜೂನ್ 19ರಂದು ನಾಗೇಂದ್ರನಮಟ್ಟಿಯಿಂದ ಕರಡಿಗುಡ್ಡಕ್ಕೆ ಹೋಗುವ ರಸ್ತೆ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ತೀರಿಕೊಂಡಿರುವುದಾಗಿ ಮಗ ಹೇಳಿದ್ದಾರೇ’ ಎಂದು ಪೊಲೀಸರು ಮಾಹಿತಿ ನೀಡಿದರು.

ಅಂತಿಮ ನಮನ: ರಂಗಪ್ಪ ಅವರ ಪಾರ್ಥೀವ ಶರೀರವನ್ನು ಮಂಗಳವಾರ ನಗರಸಭೆ ಬಳಿ ತರಲಾಗಿತ್ತು. ಸಹೋದ್ಯೋಗಿಗಳು ಹಾಗೂ ಸ್ನೇಹಿತರು, ರಂಗಪ್ಪ ಅವರ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.

‘ಆರೋಪಿಗಳ ಬೆದರಿಯಿಂದ ನೊಂದು ರಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ಪೌರ ಕಾರ್ಮಿಕರು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯ ಸಂಜೀವಕುಮಾರ ನೀರಲಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.