ADVERTISEMENT

ಹಾವೇರಿ: ಹಂದಿ ವಿಲೇವಾರಿಗೆ ಸೆ.12ರ ಗಡುವು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 14:17 IST
Last Updated 2 ಸೆಪ್ಟೆಂಬರ್ 2021, 14:17 IST
ಹಾವೇರಿ ನಗರಸಭೆಯಲ್ಲಿ ಹಂದಿ ಕಾರ್ಯಾಚರಣೆ ಕುರಿತು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಯಿತು 
ಹಾವೇರಿ ನಗರಸಭೆಯಲ್ಲಿ ಹಂದಿ ಕಾರ್ಯಾಚರಣೆ ಕುರಿತು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಯಿತು    

ಹಾವೇರಿ: ನಗರದಲ್ಲಿರುವ ಹಂದಿಗಳನ್ನು ವಿಲೇವಾರಿ ಮಾಡಲು ಸೆ.12ರವರೆಗೆ ಕಾಲಾವಕಾಶ ಕೊಡಬೇಕು ಎಂದು ಮಾಲೀಕರು ಮನವಿ ಮಾಡಿದ ಮೇರೆಗೆ, ನಗರಸಭೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

ನಗರಸಭೆಯಲ್ಲಿ ಗುರುವಾರ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅಧ್ಯಕ್ಷತೆಯಲ್ಲಿ ಹಂದಿಗಳ ವಿಲೇವಾರಿ ಕುರಿತು ಮಾಲೀಕರೊಂದಿಗೆ ಸಭೆ ನಡೆಯಿತು.

ನಗರದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದೆ. ಚರಂಡಿಗಳ ಕೊಳಚೆಯನ್ನು ರಸ್ತೆಗೆ ಹರಡುವುದು, ಕಸ ಕೆದರುವುದು, ಕಿರುಚುವುದು ಮುಂತಾದ ಉಪಟಳದಿಂದ ನಾಗರಿಕರು ಬೇಸತ್ತಿದ್ದಾರೆ. ಹಂದಿಗಳು ಸಾರ್ವಜನಿಕರ ಸಂಚಾರಕ್ಕೂ ತೊಂದರೆ ಮಾಡಿ, ಜೀವಹಾನಿಗೂ ಕಾರಣವಾಗಿವೆ. ಹೀಗಾಗಿ ಹಂದಿ ಕಾರ್ಯಾಚರಣೆ ನಡೆಸಬೇಕು ಎಂದು ನಾಗರಿಕರು ಮನವಿ ಮಾಡಿದ್ದರು.

ADVERTISEMENT

ಈ ಹಿನ್ನೆಲೆಯಲ್ಲಿ ಹಾವೇರಿ ನಗರ ವ್ಯಾಪ್ತಿಯ ಹಂದಿ ಮತ್ತು ಬಿಡಾಡಿ ದನಕರುಗಳನ್ನು ಮಾಲೀಕರು ಆ.21ರೊಳಗಾಗಿ ತಮ್ಮ ಸುಪರ್ದಿಗೆ ಪಡೆದುಕೊಂಡು ತಮ್ಮದೇ ವ್ಯವಸ್ಥೆಯಲ್ಲಿ ಸಾಕಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷರು ಪ್ರಕಟಣೆ ನೀಡಿದ್ದರು.

ಹಂದಿಗಳ ಮಾಲೀಕರು ಸೆ.12ರವರೆಗೂ ಅವಕಾಶ ಕೋರಿದರು. ಸೆ.12ರೊಳಗೆ ಹಂದಿಗಳನ್ನು ಸುಪರ್ದಿಗೆ ಪಡೆಯದಿದ್ದರೆ, ನಗರಸಭೆಯಿಂದಲೇ ಕಾರ್ಯಾಚರಣೆ ನಡೆಸಿ, ಹಂದಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.

ಉಪಾಧ್ಯಕ್ಷೆ ಜಾಹೀದಾಬಾನು ಜಮಾದಾರ್, ಸದಸ್ಯರಾದ ಐ.ಯು. ಪಠಾಣ, ಸತೀಶ್ ಹಾವೇರಿ, ಮತ್ತು ಪೀರಸಾಬ ಚೋಪದಾರ, ವೆಂಕಟೇಶ್ ಬಿಜಾಪುರ ಮತ್ತು ನಾಗರಾಜ್ ತಳವಾರ ಇದ್ದರು.

ಅಧಿಕಾರಿಗಳ ಮೀನಮೇಷ:

ಆ.21ರೊಳಗೆ ಮಾಲೀಕರು ಹಂದಿಗಳನ್ನು ಸುಪರ್ದಿಗೆ ಪಡೆಯಲಿಲ್ಲ. ಇಷ್ಟಾದರೂ ನಗರಸಭೆ ಹಂದಿಗಳ ಕಾರ್ಯಾಚರಣೆಗೆ ಮೀನ ಮೇಷ ಎಣಿಸುತ್ತಿದೆ. ನಗರದ ಸ್ವಚ್ಛತೆ ಬಗ್ಗೆ ಕಾಳಜಿಯಿದ್ದರೆ ಕೂಡಲೇ ಹಂದಿಗಳನ್ನು ನಗರದಿಂದ ವಿಲೇವಾರಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.