ADVERTISEMENT

ಜೋರು ಮಳೆ: ಹೊಳೆಯಂತೆ ಹರಿದ ನೀರು

ವರುಣನ ಆರ್ಭಟ; ಮಳಿಗೆಗಳಿಗೆ ನುಗ್ಗಿದ ನೀರು, ನಗರಸಭೆ ವಿರುದ್ಧ ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಮೇ 2025, 19:30 IST
Last Updated 17 ಮೇ 2025, 19:30 IST
ಹಾವೇರಿಯ ಹಳೇ ಪಿ.ಬಿ. ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿಯೇ ಪಾದಚಾರಿಗಳು ನಡೆದುಕೊಂಡು ಹೋದರು – ಪ್ರಜಾವಾಣಿ ಚಿತ್ರಗಳು / ಮಾಲತೇಶ ಇಚ್ಚಂಗಿ
ಹಾವೇರಿಯ ಹಳೇ ಪಿ.ಬಿ. ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿಯೇ ಪಾದಚಾರಿಗಳು ನಡೆದುಕೊಂಡು ಹೋದರು – ಪ್ರಜಾವಾಣಿ ಚಿತ್ರಗಳು / ಮಾಲತೇಶ ಇಚ್ಚಂಗಿ   

ಹಾವೇರಿ: ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳುತ್ತಿದ್ದು, ಸಂಜೆಯಿಂದ ರಾತ್ರಿಯವರೆಗೂ ಬಿಡುವು ನೀಡುತ್ತಲೇ ಮಳೆ ಸುರಿಯುತ್ತಿದೆ. ಶನಿವಾರವೂ ಹಲವು ಕಡೆಗಳಲ್ಲಿ ಜೋರು ಮಳೆ ಸುರಿಯಿತು.

ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಶುಕ್ರವಾರ ಸಂಜೆಯೂ ಅರ್ಧ ಗಂಟೆ ಮಳೆಯಾಗಿತ್ತು. ಶನಿವಾರ ಬೆಳಿಗ್ಗೆಯಿಂದಲೇ ಪುನಃ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಜೋರು ಗಾಳಿ ಬೀಸಿದ್ದರಿಂದ, ಮಳೆ ಬರುವ ಮುನ್ಸೂಚನೆಯಿತ್ತು. ಸಂಜೆ 5 ಗಂಟೆಗೆ ಜೋರಾಗಿ ಶುರುವಾದ ಮಳೆ, ರಾತ್ರಿಯವರೆಗೂ ಮುಂದುವರಿಯಿತು.

ಮಳೆಯಿಂದ ಸಂಗ್ರಹವಾದ ನೀರು ರಸ್ತೆ ಮೇಲೆಯೇ ಹರಿಯಿತು. ನಗರದ ಹಲವು ಕಾಲುಗಳಲ್ಲಿ ಹೂಳು ತುಂಬಿಕೊಂಡಿದ್ದು, ಅದನ್ನು ಸ್ವಚ್ಛಗೊಳಿಸುವ ಕೆಲಸವಾಗಿಲ್ಲ. ಇದರಿಂದಾಗಿ ಕಾಲುವೆಯಲ್ಲಿ ಹರಿಬೇಕಿದ್ದ ನೀರು, ರಸ್ತೆ ಮೇಲೆಯೇ ಹರಿಯಿತು.

ADVERTISEMENT

ಬಸ್‌ ನಿಲ್ದಾಣ ಎದುರಿನ ರಸ್ತೆಯಲ್ಲಿಯೂ ನೀರು ಧಾರಾಕಾರವಾಗಿ ಹರಿಯಿತು. ಜಿಲ್ಲಾ ಕ್ರೀಡಾಂಗಣ ಎದುರಿನ ರಸ್ತೆಯೂ ಜಲಾವೃತಗೊಂಡಿತ್ತು. ಹರಿಯುತ್ತಿದ್ದ ನೀರಿನಲ್ಲಿಯೇ ವಾಹನಗಳು ಸಂಚರಿಸಿದವು. ಪಾದಚಾರಿಗಳು ಓಡಾಡಿದರು.

ನಗರದ ಹಳೇ ಪಿ.ಬಿ.ರಸ್ತೆ, ಎಂ.ಜಿ.ರಸ್ತೆ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ರಸ್ತೆ ಮೇಲೆಯೇ ನೀರು ಹರಿಯಿತು. ಕೆಲ ಮಳಿಗೆಗಳ ಒಳಗೆಯೇ ನೀರು ನುಗ್ಗಿತ್ತು. ವ್ಯಾಪಾರಿಗಳು, ನೀರನ್ನು ಹೊರ ಹಾಕುವುದರಲ್ಲಿ ನಿರತರಾಗಿದ್ದ ದೃಶ್ಯಗಳು ಕಂಡುಬಂದವು.

ಮಳೆಯ ಜೊತೆಯಲ್ಲಿ ಗುಡುಗು–ಸಿಡಿಲಿನ ಅಬ್ಬರವೂ ಜೋರಾಗಿತ್ತು. ಅಬ್ಬರದ ಮಳೆ ನಡುವೆಯೇ ಗುಡುಗಿನ ಸದ್ದು ಹೆಚ್ಚಾಗಿತ್ತು. ಜೋರು ಗಾಳಿ ಬೀಸಿದ್ದರಿಂದ ಜನರು ಕೆಲ ಹೊತ್ತು ಆತಂಕಕ್ಕೆ ಒಳಗಾಗಿದ್ದರು.

ಹಳೇ ಪಿ.ಬಿ.ರಸ್ತೆ ಹಾಗೂ ಇತರೆ ಕಡೆಗಳಲ್ಲಿ ಎರಡು ಅಡಿಯಷ್ಟು ನೀರು ರಸ್ತೆ ಮೇಲೆ ಹರಿಯುತ್ತಿದ್ದ ದೃಶ್ಯಗಳು ಕಂಡುಬಂದವು.

‌ಶಿವಾಜಿನಗರ, ಬಸವೇಶ್ವರನಗರ, ದಾನೇಶ್ವರಿನಗರ, ಮಂಜುನಾಥ ನಗರ, ಅಶ್ವಿನಿನಗರ, ಮೈಲಾರ ಮಹದೇವಪ್ಪ ವೃತ್ತ, ವಿದ್ಯಾನಗರ, ಉಜಾರಿ ಲಕಮಾಪುರ, ಹಾನಗಲ್ ರಸ್ತೆ, ಗುತ್ತಲ ರಸ್ತೆ, ಹಳೇ ಪಿ.ಬಿ.ರಸ್ತೆ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಜೋರು ಮಳೆ ಸುರಿಯಿತು.

ಮಳೆಯಿಂದಾಗಿ ಸಂಜೆಯಿಂದಲೇ ಹಲವು ಕಡೆಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿತ್ತು. ಇದರಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಗಾಳಿ ಬೀಸಿದ್ದರಿಂದ ಕೆಲ ಕಡೆಗಳಲ್ಲಿ ಅಂಗಡಿ, ಮಳಿಗೆಗಳ ಫಲಕಗಳು ಹಾರಿ ಹೋದವು.

ಹಾವೇರಿ ಮಾರುಕಟ್ಟೆ ಪ್ರದೇಶದಲ್ಲಿಯೂ ಹಲವು ಕಡೆ ನೀರು ಹರಿಯಿತು. ಮಾರುಕಟ್ಟೆಯ ಹಲವು ಕಾಲುವೆಗಳು ಹೂಳು ತುಂಬಿಕೊಂಡಿದ್ದು, ಅದರಲ್ಲಿಯ ನೀರು ರಸ್ತೆ ಮೇಲೆ ಹರಿದು ಮಳಿಗೆಗಳಿಗೆ ನುಗ್ಗಿತ್ತು. ಬೀದಿಬದಿ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಪರದಾಡಿದರು.

ನಾಗೇಂದ್ರನಮಟ್ಟಿಯ ರೈಲ್ವೆ ಕೆಳಸೇತುವೆಯಲ್ಲಿಯೂ ನೀರು ಧಾರಾಕಾರವಾಗಿ ಹರಿಯಿತು. ರೈಲ್ವೆ ಹಳಿಗೆ ಹೊಂದಿಕೊಂಡಿರುವ ರಾಜಕಾಲುವೆಯ ನೀರು, ಅಕ್ಕ–ಪಕ್ಕದ ಪ್ರದೇಶಗಳಿಗೆ ನುಗ್ಗಿತ್ತು.

ನಗರಸಭೆ ವಿರುದ್ಧ ಆಕ್ರೋಶ: ಪ್ರತಿ ಬಾರಿ ಮಳೆಯಾದ ಸಂದರ್ಭದಲ್ಲಿ ರಸ್ತೆ ಮೇಲೆಯೇ ನೀರು ಹರಿಯುತ್ತಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳದ ನಗರಸಭೆಯ ವಿರುದ್ಧ ಜನರು ಆಕ್ರೋಶ ಹೊರಹಾಕಿದರು.

‘ಮಳೆಯಾದ ಸಂದರ್ಭದಲ್ಲಿ ಅತಿಥಿ ಗೃಹದ ಎದುರಿನ ಹಳೇ ಪಿ.ಬಿ.ರಸ್ತೆಯಲ್ಲಿ ನೀರು ಹರಿಯುತ್ತದೆ. ರಸ್ತೆಯ ಅಕ್ಕ–ಪಕ್ಕದ ಕಾಲುವೆಗಳು ಅವೈಜ್ಞಾನಿಕವಾಗಿರುವುದೇ ಇದಕ್ಕೆ ಕಾರಣ. ಕಾಲುವೆ ದುರಸ್ತಿ ಮಾಡಿಸಲು ನಗರಸಭೆ ನಿರ್ಲಕ್ಷ್ಯ ವಹಿಸುತ್ತಿದೆ’ ಎಂದು ಸ್ಥಳೀಯರು ದೂರಿದರು.

ರಾಣೆಬೆನ್ನೂರು ನಗರ ಹಾಗೂ ತಾಲ್ಲೂಕಿನಲ್ಲಿಯೂ ಶನಿವಾರ ಸಂಜೆ ಗುಡುಗು–ಸಿಡಿಲು ಸಹಿತ ಜೋರು ಮಳೆಯಾಯಿತು. ನಗರದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆಯೇ ನೀರು ಹರಿಯಿತು.

ಹಾವೇರಿಯಲ್ಲಿ ಶನಿವಾರ ಜೋರು ಮಳೆಯಾಗಿದ್ದರಿಂದ ಮಳಿಗೆಗಳಿಗೆ ನೀರು ನುಗ್ಗಿರುವುದು
ಹಾವೇರಿಯಲ್ಲಿ ಶನಿವಾರ ಸುರಿದ ಮಳೆಯಿಂದ ಸಂಗ್ರಹವಾದ ನೀರು ಮುಂದಕ್ಕೆ ಹರಿದುಹೋಗಲು ಸ್ಥಳೀಯರು ದಾರಿ ಮಾಡಿದರು
ಹಾವೇರಿ ಹಳೇ ಪಿ.ಬಿ.ರಸ್ತೆಯಲ್ಲಿ ಶನಿವಾರ ಹರಿಯುತ್ತಿದ್ದ ನೀರಿನಲ್ಲಿಯೇ ವಾಹನಗಳು ಸಂಚರಿಸಿದವು
ಹಾವೇರಿಯ ಜಿಲ್ಲಾ ಕ್ರೀಡಾಂಗಣ ಎದುರು ಶನಿವಾರ ಹರಿಯುತ್ತಿದ್ದ ನೀರಿನಲ್ಲಿಯೇ ಜನರು ಸಂಚರಿಸಿದರು 

ಸಂಜೆಯಿಂದ ರಾತ್ರಿಯವರೆಗೂ ಮಳೆ ಕಾಲುವೆಗಳಲ್ಲಿ ಹೂಳು ವ್ಯಾಪಾರಸ್ಥರ ಪರದಾಟ

‘ಮಳೆಗಾಲ ಮುನ್ನವೇ ಜಲಾವೃತ’

‘ಮುಂಗಾರು ಪೂರ್ವ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿಯೇ ಹಾವೇರಿಯ ಹಲವು ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಜಲಾವೃತ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾದರೆ ಇಡೀ ಹಾವೇರಿ ಮತ್ತಷ್ಟು ಜಲಾವೃತಗೊಳ್ಳುವ ಭಯವಿದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು. ‘ಮಳೆಗಾಲ ಎದುರಿಸಲು ನಗರಸಭೆಯವರು ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕಾಲುವೆ ರಸ್ತೆ ಸೇರಿ ಹಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಇದರಿಂದಾಗಿ ಜನರು ಸಮಸ್ಯೆ ಎದುರಿಸುವಂತಾಗಿದೆ. ತೆರಿಗೆ ಕಟ್ಟಿಸಿಕೊಳ್ಳುವ ನಗರಸಭೆಯವರು ಮೂಲ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ದೂರಿದರು. ‘ನೀರು ಬರುವ ಪ್ರದೇಶಗಳ ಬಗ್ಗೆ ಅಧ್ಯಯನ ನಡೆಸಿ ಶಾಶ್ವತ ಪರಿಹಾರ ಸೂಚಿಸಬೇಕು. ಜನರು ನೆಮ್ಮದಿಯಿಂದ ವಾಸ ಮಾಡುವ ಪರಿಸರ ನಿರ್ಮಿಸಬೇಕು’ ಎಂದು ಸ್ಥಳೀಯರು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.