ಹಾವೇರಿ: ‘ಇಂದಿನ ಯುಗದಲ್ಲಿ ಎಲ್ಲ ಉದ್ಯಮಗಳು ಖಾಸಗೀಕರಣದತ್ತ ವಾಲುತ್ತಿದ್ದು, ಕಾರ್ಮಿಕರು ತಮ್ಮ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆಯಲು ಸಂಘಟನೆಗಳ ಮೂಲಕ ಹೋರಾಟ ರೂಪಿಸಿಕೊಳ್ಳಬೇಕಾಗಿದೆ’ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಯಮಿತದ ನೌಕರರ ಸಂಘದ ಮಾಜಿ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಹೇಳಿದರು.
ನಗರದ ಹೆಸ್ಕಾಂ ಆವರಣದಲ್ಲಿರುವ ಕಾರ್ಮಿಕ ಸ್ಮಾರಕ ಬಳಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾರ್ಮಿಕರು ಸಂಘಟಿತರಾಗಬೇಕು. ಅವಾಗಲೇ ಕಾರ್ಮಿಕ ಚಳವಳಿಗಳು ಉಳಿಯಲು ಸಾಧ್ಯವಾಗುತ್ತದೆ’ ಎಂದರು.
ವಿಭಾಗೀಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಬಿ. ಹೊಸಮನಿ ಮಾತನಾಡಿ, ‘ಆಡಳಿತ ಮಂಡಳಿ ಮತ್ತು ನೌಕರರ ಸಂಘಗಳು, ಸರ್ಕಾರದ ಭಾಗಗಳು. ಸಂದರ್ಭಕ್ಕೆ ತಕ್ಕಂತೆ ಸಮನ್ವಯತೆಯಿಂದ ಕೂಡಿ ಸಾಗಬೇಕಾಗುತ್ತದೆ. ಅಂದಾಗ ಮಾತ್ರ ನೌಕರರ ಅಭಿವೃದ್ಧಿ ಸಾಧ್ಯ’ ಎಂದರು.
ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿ ಶಿವಾನಂದ ಹಾದಿಮನಿ ಮಾತನಾಡಿ, ‘ನೌಕರರು ಹಕ್ಕುಗಳಿಗಾಗಿ ಹೋರಾಟ ಮಾಡಬೇಕು. ಇಲ್ಲದಿದ್ದರೆ, ಆಡಳಿತ ವರ್ಗ ತನ್ನ ಹಿಡಿತವನ್ನು ಬಲಗೊಳಿಸುತ್ತದೆ. ಕೊನೆಗೆ ಸಂಬಳಕ್ಕೂ ಪರದಾಡುವ ಪರಿಸ್ಥಿತಿ ಬರಬಹುದು’ ಎಂದರು.
ಕೇಂದ್ರ ಸಮಿತಿಯ ಸದಸ್ಯ ಕೆ.ಎನ್. ಅಗಡಿ, ಸ್ಥಳೀಯ ಸಮಿತಿ ಅಧ್ಯಕ್ಷ ಶಂಕರ ಕಾಳಶೆಟ್ಟಿ, ಲೆಕ್ಕಾಧಿಕಾರ ಮಹ್ಮದ ಅಮಾನುಲ್ಲಾ, ರುದ್ರಪ್ಪ ಜಾಬಿನ, ಹನುಮಂತಪ್ಪ ಮರಿದ್ಯಾಮಣ್ಣನವರ, ಎಂ.ಎಸ್. ತರಿಕೇರಿ, ಜಯಣ್ಣ ಕೋಲಾರ, ಶಂಭಣ್ಣ ಹಾವೇರಿ, ಸಂತೋಷ ಕಲಾಲ, ಸುನೀಲ ದಾನಪ್ಪನವರ, ಎ.ಕೆ. ಯಮನೂರ, ಎಂ.ಎಸ್. ಕುಮ್ಮೂರ ಮತ್ತು ಎಂ.ಬಿ. ಮಿಶ್ರಿಕೋಟಿ, ರೇಣುಕಾ ಗುಡಿಮನಿ, ಶಂಕರ ತುಮ್ಮಣ್ಣನವರ, ವಿರೂಪಾಕ್ಷ ಹಾವನೂರ, ಜುಬೇದಾ ನಾಯಕ್, ರಾಜೇಂದ್ರ ಹೆಗಡೆ, ಶರಣಪ್ಪ ಸಂಗನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.