ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಬಳಿ ರಸ್ತೆಯ ಗುಂಡಿಯಿಂದ ಅಪಘಾತ ಸಂಭವಿಸಿದ್ದು, ಬೈಕ್‌ನ ಹಿಂಬದಿ ಕುಳಿತಿದ್ದ ಅನ್ನಪೂರ್ಣಾ ಕರೆಗೌಡ್ರ (45) ಎಂಬುವವರು ಮೃತಪಟ್ಟಿದ್ದಾರೆ.
ಹಾನಗಲ್ ತಾಲ್ಲೂಕಿನ ವರ್ದಿ ಗ್ರಾಮದ ಅನ್ನಪೂರ್ಣಾ ಅವರು ಪತಿ ಕರೆಗೌಡ (55) ಜೊತೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಈ ಬಗ್ಗೆ ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಅನ್ನಪೂರ್ಣಾ ಹಾಗೂ ಕರೆಗೌಡ ಅವರು ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಶ್ರಾವಣ ಮಾಸದ ಪ್ರಯುಕ್ತ ಚಂದಾಪುರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಮಂಗಳವಾರ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಪಾಲ್ಗೊಳ್ಳಲೆಂದು ಕರೆಗೌಡ ಹಾಗೂ ಅನ್ನಪೂರ್ಣಾ ಅವರು ಬೈಕ್‌ನಲ್ಲಿ ಚಂದಾಪುರಕ್ಕೆ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.
‘ಪೂಜೆ ಮುಗಿದ ನಂತರ ಇಬ್ಬರೂ ಬೈಕ್‌ನಲ್ಲಿ ವಾಪಸು ವರ್ದಿ ಗ್ರಾಮಕ್ಕೆ ಹೊರಟಿದ್ದರು. ಬಂಕಾಪುರಕ್ಕೆ ಬಂದು ಅಲ್ಲಿಂದ ರಾಜ್ಯ ಹೆದ್ದಾರಿಯಲ್ಲಿ ಹೊರಟಿದ್ದರು’ ಎಂದು ತಿಳಿಸಿದರು.
ಗುಂಡಿಯಿಂದ ಹಾರಿಬಿದ್ದ ಅನ್ನಪೂರ್ಣಾ: ‘ಬಂಕಾಪುರ ಹಾಗೂ ಗುಡ್ಡದ ಚನ್ನಾಪುರದ ನಡುವಿನ ರಸ್ತೆಯಲ್ಲಿ ಬೃಹತ್ ಗುಂಡಿ ಬಿದ್ದಿದೆ. ಇದರಲ್ಲಿ ನೀರು ನಿಂತುಕೊಂಡಿತ್ತು. ಅದನ್ನು ಸವಾರ ಕರೆಗೌಡ ಗಮನಿಸಿರಲಿಲ್ಲ. ಅತೀ ವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಹೊರಟಿದ್ದರು’ ಎಂದು ಪೊಲೀಸರು ಹೇಳಿದರು.
‘ಅತೀ ವೇಗದಲ್ಲಿದ್ದ ಬೈಕ್‌ನ ಚಕ್ರಗಳು ಗುಂಡಿಯಲ್ಲಿ ಇಳಿಯುತ್ತಿದ್ದಂತೆ, ಬೈಕ್ ಮೇಲಕ್ಕೆ ಹಾರಿ ಅಲುಗಾಡಿ ಮುಂದಕ್ಕೆ ಹೋಗಿ ಬಿದ್ದಿತ್ತು. ಬೈಕ್‌ನ ಹಿಂಬದಿಯಲ್ಲಿದ್ದ ಅನ್ನಪೂರ್ಣ ಸಹ ಸಿನಿಮೀಯ ರೀತಿಯಲ್ಲಿ ಮೇಲಕ್ಕೆ ಹಾರಿ ರಸ್ತೆ ಮೇಲೆ ಬಿದ್ದಿದ್ದರು. ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಕಿವಿ, ಮೂಗಿನಲ್ಲಿ ರಕ್ತ ಸೋರುತ್ತಿತ್ತು.’
‘ಸ್ಥಳದಲ್ಲಿ ಬಿದ್ದು ನರಳುತ್ತಿದ್ದ ಅನ್ನಪೂರ್ಣಾ ಅವರನ್ನು ಬಂಕಾಪುರ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಹುಬ್ಬಳ್ಳಿ ಕಿಮ್ಸ್‌ಗೆ ಸ್ಥಳಾಂತರಿಸಲಾಗಿತ್ತು. ತಪಾಸಣೆ ನಡೆಸಿದ್ದ ವೈದ್ಯರು, ಅನ್ನಪೂರ್ಣ ಮೃತಪಟ್ಟಿದ್ದಾಗಿ ತಿಳಿಸಿದರು’ ಎಂದು ಪೊಲೀಸರು ವಿವರಿಸಿದರು.
ಲೋಕೋಪಯೋಗಿ ಇಲಾಖೆ
ನಿರ್ಲಕ್ಷ್ಯ ‘ಬಂಕಾಪುರದಿಂದ ಹಾನಗಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಇದರ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇವರ ನಿರ್ಲಕ್ಷ್ಯದಿಂದ ಇಂದು ಮಹಿಳೆ ಮೃತಪಟ್ಟಿದ್ದಾರೆ. ಜೊತೆಗೆ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ’ ಎಂದು ಸ್ಥಳೀಯರು ದೂರಿದರು. ‘ಅಪಘಾತ ಸಂಬಂಧ ಬೈಕ್ ಸವಾರರಾದ ಕರೆಗೌಡ ಅವರ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ಗುಂಡಿ ಬೀಳಲು ನಿರ್ಲಕ್ಷ್ಯ ವಹಿಸಿದ್ದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಾಗಬೇಕು. ಮುಂಬರುವ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.