ಹಾವೇರಿ: ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ತಾಯಿ–ಮಗಳನ್ನು ಉಪ ನೋಂದಣಾಧಿಕಾರಿ ಕಚೇರಿಗೆ ಕರೆದೊಯ್ದು ಆಸ್ತಿ ನೋಂದಣಿ ಮಾಡಿಕೊಂಡು ವಂಚಿಸಿರುವ ಆರೋಪದಡಿ ಹಾವೇರಿ ಶಹರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಸವಣೂರು ತಾಲ್ಲೂಕಿನ ಜಲ್ಲಾಪುರದ ಜಯಶೀಲವ್ವ ಪರಸಪ್ಪ ಗೌಳಿ (63) ಎಂಬುವವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅವರ ಸಂಬಂಧಿಕರಾದ ಫಕ್ಕೀರೇಶ ದುಂಡಪ್ಪ ಗೌಳಿ, ಶಿವನಗೌಡ ನಿಂಗನಗೌಡ ಶಿವನಗೌಡ್ರ, ವೀರೇಶ ಆರ್. ಬೆಳಗಲಿ ಹಾಗೂ ಪುಟ್ಟಪ್ಪ ರಾಯಪ್ಪ ಕಿತ್ತೂರ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಜಯಶೀಲವ್ವ ಅವರ ಮಗಳು ಮಧು ಹೆಸರಿನಲ್ಲಿ ಜಲ್ಲಾಪುರದಲ್ಲಿ 1 ಎಕರೆ 20 ಗುಂಟೆ ಜಮೀನಿದೆ. ಮಗಳು ಮಾನಸಿಕ ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಜಮೀನು ಕಬಳಿಸಲು ಸಂಬಂಧಿಕರು ಪ್ರಯತ್ನ ನಡೆಸುತ್ತಿದ್ದರು.’
‘ಜಯಶೀಲವ್ವ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಾವಣಗೆರೆಯ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದ್ದ ಆರೋಪಿಗಳು, ಜಯಶೀಲವ್ವ ಹಾಗೂ ಮಗಳು ಮಧು ಅವರನ್ನು ಹಾವೇರಿಯ ಉಪ ನೋಂದಣಾಧಿಕಾರಿ ಕಚೇರಿಗೆ ಕರೆತಂದಿದ್ದರು. ‘ಪಡಿತರ ಚೀಟಿ ಹಾಗೂ ಆಧಾರ್ ಅಪ್‌ಡೇಟ್ ಮಾಡಿಸಬೇಕು. ಇಲ್ಲದಿದ್ದರೆ, ಸರ್ಕಾರದ ಗ್ಯಾರಂಟಿ ಸೇರಿದಂತೆ ಎಲ್ಲ ಸೌಲಭ್ಯಗಳು ಹೋಗುತ್ತವೆ’ ಎಂದು ತಾಯಿ–ಮಗಳಿಗೆ ಹೇಳಿದ್ದರು’ ಎಂದು ಪೊಲೀಸರು ವಿವರಿಸಿದರು.
‘ಆರೋಪಿಗಳ ಮಾತು ನಂಬಿದ್ದ ಜಯಶೀಲವ್ವ ಹಾಗೂ ಮಧು, ತಮಗೆ ಅರಿವಿಲ್ಲದಂತೆ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಆರೋಪಿಗಳು, ಇಬ್ಬರನ್ನೂ ಜಲ್ಲಾಪುರದಲ್ಲಿ ಬಿಟ್ಟು ಹೋಗಿದ್ದರು. ಇತ್ತೀಚೆಗೆ ನೋಂದಣಿ ಸಂಗತಿ ಗಮನಕ್ಕೆ ಬಂದಿದೆ. ಪರಿಚಯಸ್ಥರ ಮೂಲಕ ವೃದ್ಧೆ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ನಂತರ, ಠಾಣೆಗೆ ದೂರು ಕೊಟ್ಟಿದ್ದರು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.