ADVERTISEMENT

ಪಡಿತರ ಕಾಳಸಂತೆ: ಶ್ರೀಮಂತರ ಮನೆ ದೋಸೆ–ಪಡ್ಡಿಗೆ ಬಡವರ ಅಕ್ಕಿ!

* ಕಾಳಸಂತೆಯಲ್ಲಿ ಪಡಿತರ: 5 ತಿಂಗಳಿನಲ್ಲಿ 95 ಕ್ವಿಂಟಲ್ ಅಕ್ಕಿ ಜಪ್ತಿ * ಪ್ರತಿ ಗ್ರಾಮದಲ್ಲೂ ‘ಅಕ್ಕಿ ಏಜೆಂಟ’ರ ಹಾವಳಿ

ಸಂತೋಷ ಜಿಗಳಿಕೊಪ್ಪ
Published 3 ಜೂನ್ 2025, 6:31 IST
Last Updated 3 ಜೂನ್ 2025, 6:31 IST
ಹಾವೇರಿ ಅಕ್ಕಿಪೇಟೆಯಲ್ಲಿರುವ ಮನೆಯೊಂದರ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಅಧಿಕಾರಿಗಗಳು ಅಕ್ಕಿ ಪರಿಶೀಲನೆ ನಡೆಸಿದರು
ಹಾವೇರಿ ಅಕ್ಕಿಪೇಟೆಯಲ್ಲಿರುವ ಮನೆಯೊಂದರ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಅಧಿಕಾರಿಗಗಳು ಅಕ್ಕಿ ಪರಿಶೀಲನೆ ನಡೆಸಿದರು   

ಹಾವೇರಿ: ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸರ್ಕಾರ ಅಕ್ಕಿ ವಿತರಣೆ ಮಾಡುತ್ತಿದ್ದು, ಇದೇ ಪಡಿತರವನ್ನು ಕಾಳಸಂತೆಯಲ್ಲಿ ಮಾರುತ್ತಿರುವ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಬಡವರ ಹೊಟ್ಟೆ ತುಂಬಿಸುವ ಅಕ್ಕಿ, ಶ್ರೀಮಂತರ ಮನೆಯ ದೋಸೆ–ಪಡ್ಡಿಗಾಗಿ ಮಾರಾಟವಾಗುತ್ತಿದೆ.

ದೇಶ ಹಾಗೂ ರಾಜ್ಯದಲ್ಲಿ ಯಾವುದೇ ವ್ಯಕ್ತಿಯೂ ಹಸಿವಿನಿಂದ ಬಳಲಬಾರದೆಂದು ರಾಜ್ಯ–ಕೇಂದ್ರ ಸರ್ಕಾರಗಳು, ಹಲವು ಯೋಜನೆಗಳ ಮೂಲಕ ದುಬಾರಿಗೆ ಬೆಲೆಗೆ ಪಡಿತರ ಅಕ್ಕಿಯನ್ನು ಖರೀದಿಸಿ ಉಚಿತವಾಗಿ ವಿತರಣೆ ಮಾಡುತ್ತಿವೆ. ಇದೇ ಉಚಿತ ವ್ಯವಸ್ಥೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಏಜೆಂಟರು, ಬಡವರಿಂದ ಅಕ್ಕಿಯನ್ನು ಖರೀದಿಸಿ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿವೆ.

ಸುಗಮ ರೀತಿಯಲ್ಲಿ ಪಡಿತರ ವಿತರಣೆ ಮಾಡಲು ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪನೆ ಮಾಡಲಾಗಿದೆ. ಇದೇ ಅಂಗಡಿಯಲ್ಲಿ ಅಕ್ಕಿ ಖರೀದಿಸುವ ಕೆಲವರು, ಅದರಲ್ಲಿ ಸ್ವಲ್ಪ ಪ್ರಮಾಣದ ಅಕ್ಕಿಯನ್ನು ಮಾತ್ರ ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದಾರೆ. ಹೆಚ್ಚಿನ ಪ್ರಮಾಣದ ಅಕ್ಕಿಯನ್ನು ಏಜೆಂಟರ ಮೂಲಕ ಮಾರಾಟ ಮಾಡುತ್ತಿದ್ದಾರೆ. ಅದರಿಂದ ಬಂದ ಹಣದಲ್ಲಿ, ಜೀವನ ನಿರ್ವಹಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ.

ADVERTISEMENT

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡುವ ಬಗ್ಗೆ ದೂರುಗಳು ಬಂದರಷ್ಟೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಆದರೆ, ನ್ಯಾಯಬೆಲೆ ಅಂಗಡಿಯಿಂದ ನೀಡಿದ ಅಕ್ಕಿಯನ್ನು ಮಾರುವ ಪಡಿತರದಾರರು ಹಾಗೂ ಅವರಿಂದ ಅಕ್ಕಿ ಖರೀದಿಸುವ ಏಜೆಂಟರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ, ‘ಸರ್ಕಾರಿ ನೌಕರರಿಗೆ ಸರ್ಕಾರದಿಂದ ಪ್ರತಿ ತಿಂಗಳು ವೇತನ ಬರುತ್ತದೆ. ನೌಕರರು ವೇತನವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಅದೇ ರೀತಿ, ಬಡವರಿಗೂ ಸರ್ಕಾರ ಅಕ್ಕಿ ನೀಡುತ್ತಿದೆ. ಅಕ್ಕಿ ಪಡೆದವರು, ಅಕ್ಕಿಯನ್ನು ಏನು ಮಾಡುತ್ತಾರೆ ? ಎಂಬುದರ ಬಗ್ಗೆಯೂ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಯಾರಾದರೂ ದೂರು ನೀಡಿದರೆ ಮಾತ್ರ ದಾಳಿ ಮಾಡಿ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚುವರಿ ಅಕ್ಕಿಯಿಂದ ದಂಧೆ ಹೆಚ್ಚಳ: ಜಿಲ್ಲೆಯ ಪ್ರತಿಯೊಬ್ಬ ಪಡಿತರದಾರರಿಗೆ ಈ ಹಿಂದೆ ತಲಾ ₹ 5 ಕೆ.ಜಿ. ಅಕ್ಕಿ ನೀಡಲಾಗುತ್ತಿತ್ತು. ಜೊತೆಗೆ, 5 ಕೆ.ಜಿ. ಅಕ್ಕಿಯ ಬದಲು ಹಣ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಅಕ್ಕಿ ಅಕ್ರಮ ಮಾರಾಟ ದಂಧೆಯ ಛಾಯೆ ಕಡಿಮೆಯಿತ್ತು. ತಲಾ 10 ಕೆ.ಜಿ. ಅಕ್ಕಿ ಕೊಡುವುದು ಪ್ರಾರಂಭವಾಗುತ್ತಿದ್ದಂತೆ, ಅಕ್ಕಿ ದಂಧೆಯೂ ಹೆಚ್ಚಾಗಿರುವುದಾಗಿ ಜನರು ದೂರುತ್ತಿದ್ದಾರೆ.

‘ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿಯೂ ಅಕ್ಕಿ ಖರೀದಿಸುವ ಏಜೆಂಟರು ಹುಟ್ಟಿಕೊಂಡಿದ್ದಾರೆ. ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ತರುತ್ತಿದ್ದಂತೆ, ಪಡಿತರದಾರರ ಮನೆಗೆ ಹೋಗಿ ಅಕ್ಕಿ ಪಡೆಯುತ್ತಿದ್ದಾರೆ. ಜೊತೆಗೆ, ಅದೇ ಅಕ್ಕಿಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘5 ಕೆ.ಜಿ ಅಕ್ಕಿ ಹಾಗೂ ಹಣ ನೀಡುತ್ತಿದ್ದ ಸಮಯದಲ್ಲಿ ಏಜೆಂಟರ ಸಂಖ್ಯೆ ಕಡಿಮೆಯಿತ್ತು. ಈಗ 10 ಕೆ.ಜಿ. ಅಕ್ಕಿ ನೀಡುತ್ತಿರುವುದರಿಂದ, ಏಜೆಂಟರು ಹೆಚ್ಚಾಗಿದ್ದಾರೆ. ಜನರು ಸಹ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಇಟ್ಟುಕೊಳ್ಳದೇ, ಅದನ್ನು ಮಾರಾಟ ಮಾಡಿ ಹಣ ಪಡೆದುಕೊಳ್ಳುತ್ತಿದ್ದಾರೆ. ಪಡಿತರದಾರರು ಹಾಗೂ ಖರೀದಿದಾರರು ಇಬ್ಬರೂ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಇದರಿಂದಾಗಿ ಸರ್ಕಾರದ ಉದ್ದೇಶಕ್ಕೆ ಧಕ್ಕೆ ಉಂಟಾಗುತ್ತಿದೆ’ ಎಂದು ತಿಳಿಸಿದರು.

₹13ರಿಂದ ₹ 15 ದರ: ‘ಪಂಜಾಬ್ ಹಾಗೂ ಇತರೆ ರಾಜ್ಯಗಳಲ್ಲಿ ಬೆಳೆದ ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿಸಿ, ಬೇಡಿಕೆಗೆ ತಕ್ಕಂತೆ ಅಕ್ಕಿ ಮಾಡಲಾಗುತ್ತದೆ. ಅದೇ ಅಕ್ಕಿಯನ್ನು ಕರ್ನಾಟಕ ಸರ್ಕಾರ ಕಾಲಕ್ಕೆ ತಕ್ಕಂತೆ ನಿಗದಿತ ಬೆಲೆಗೆ ಖರೀದಿ ಮಾಡಿ, ಪಡಿತರದಾರರಿಗೆ ಮಾರುತ್ತದೆ. ಇದೇ ಅಕ್ಕಿಯನ್ನು ಪಡಿತರದಾರರಿಂದ ಪ್ರತಿ ಕೆ.ಜಿ.ಗೆ ₹ 13ರಿಂದ ₹ 15 ಕೊಟ್ಟು ಖರೀದಿಸಲಾಗುತ್ತಿದೆ’ ಎಂದು ಜನರು ಮಾಹಿತಿ ನೀಡಿದರು.

‘ಪರಿತರದಾರರಿಂದ ಖರೀದಿಸಿದ ಅಕ್ಕಿಯನ್ನು, ಮಾರುಕಟ್ಟೆ ಹಾಗೂ ಅಂಗಡಿಗಳಲ್ಲಿ ಕೆ.ಜಿ.ಗೆ ₹ 25ರಿಂದ ₹ 30ಗೆ ಮಾರಲಾಗುತ್ತಿದೆ. ಸರ್ಕಾರ ನೀಡುವ ಅಕ್ಕಿ, ತಿನ್ನಲು ಯೋಗ್ಯವಲ್ಲವೆಂದು ಹಲವರು ಹೇಳುತ್ತಾರೆ. ಆದರೆ, ಅದೇ ಅಕ್ಕಿಯಲ್ಲಿ ದೋಸೆ–ಪಡ್ಡು ಹಾಗೂ ಇತರೆ ಆಹಾರ ಸಿದ್ಧಪಡಿಸುವುದು ಉತ್ತಮವೆಂಬ ಅಭಿಪ್ರಾಯವಿದೆ. ಇದೇ ಕಾರಣಕ್ಕೆ ಶ್ರೀಮಂತರು ಸಹ ಪಡಿತರ ಅಕ್ಕಿಯನ್ನೇ ಖರೀದಿಸಿ, ತಮ್ಮ ಮನೆಯಲ್ಲಿ ದೋಸೆ–ಪಡ್ಡು ಮಾಡುತ್ತಿದ್ದಾರೆ’ ಎಂದು ಹೇಳಿದರು.

ಪ್ರತ್ಯೇಕ ತಂಡ ರಚನೆಗೆ ಆಗ್ರಹ: ‘ಹಸಿವು ಮುಕ್ತ ರಾಜ್ಯ ನಿರ್ಮಿಸುವ ಉದ್ದೇಶದಿಂದ ಸರ್ಕಾರ, ಪಡಿತರ ವಿತರಣೆ ಮಾಡುತ್ತಿದೆ. ಈ ಉದ್ದೇಶಕ್ಕೆ ಧಕ್ಕೆ ತರುವ ಪಡಿತರದಾರರು ಹಾಗೂ ಕಾಳಸಂತೆಯ ಏಜೆಂಟರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದಕ್ಕಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಬೇಕು’ ಎಂದು ಹಾವೇರಿ ನಿವಾಸಿ ಶಂಕರ ಆಗ್ರಹಿಸಿದರು.

‘ಆಧಾರ್ ಮೂಲಕ ಹೆಬ್ಬೆಟ್ಟು ನೀಡಿದರಷ್ಟೇ ಪಡಿತರ ಹಂಚಿಕೆ ಮಾಡುವ ವ್ಯವಸ್ಥೆಯಿದೆ. ಇದರ ನಡುವೆಯೇ ನ್ಯಾಯಬೆಲೆ ಎದುರೇ ಅಕ್ಕಿಯನ್ನು ಮಾರಾಟ ಮಾಡುವ ದೃಶ್ಯಗಳನ್ನು ಕಾಣುತ್ತಿದ್ದೇವೆ. ಕೆಲ ಅಂಗಡಿಯವರು ಸಹ ಈ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಜಿಲ್ಲೆಯ ಸಮಸ್ಯೆಯಲ್ಲ, ಇಡೀ ರಾಜ್ಯದ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಗಮನಹರಿಸಬೇಕು’ ಎಂದರು.

5 ತಿಂಗಳಿನಲ್ಲಿ 95 ಕ್ವಿಂಟಲ್ ಅಕ್ಕಿ ಜಪ್ತಿ: ಕಾಳಸಂತೆಯಲ್ಲಿ ಪಡಿತರ ಮಾರಾಟ ಮಾಡುವ ದಂಧೆ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾನಗಲ್, ರಾಣೆಬೆನ್ನೂರು, ಬಂಕಾಪುರ, ಸವಣೂರು, ಹಾವೇರಿಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ದಂಧೆ ಬಗ್ಗೆ ನಿಖರ ಮಾಹಿತಿ ನೀಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ.

‘‘ಜಿಲ್ಲೆಗೆ ಪ‍್ರತಿ ತಿಂಗಳು ರಾಜ್ಯ ಸರ್ಕಾರದಿಂದ ₹ 66 ಸಾವಿರ ಕ್ವಿಂಟಲ್ ಹಾಗೂ ಕೇಂದ್ರ ಸರ್ಕಾರದಿಂದ 72 ಸಾವಿರ ಕ್ವಿಂಟಲ್ ಅಕ್ಕಿ ಬರುತ್ತದೆ. 2025ರ ಜನವರಿಯಿಂದ ಮೇವರೆಗೆ ಜಿಲ್ಲೆಯಲ್ಲಿ ಪಡಿತರ ಅಕ್ರಮಕ್ಕೆ ಸಂಬಂಧಪಟ್ಟಂತೆ 6 ಪ‍್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಮೂಲಕ 95 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ನೆರವಿನಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.