ADVERTISEMENT

ಸವಣೂರು | ಮನೆ ಕುಸಿತ: ಅವಳಿ ಮಕ್ಕಳು ಸೇರಿ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 21:55 IST
Last Updated 19 ಜುಲೈ 2024, 21:55 IST
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಮಾದಾಪುರದಲ್ಲಿ ಶುಕ್ರವಾರ ನಸುಕಿನಲ್ಲಿ ಕುಸಿದು ಬಿದ್ದ ಮನೆಯ ಅವಶೇಷ
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಮಾದಾಪುರದಲ್ಲಿ ಶುಕ್ರವಾರ ನಸುಕಿನಲ್ಲಿ ಕುಸಿದು ಬಿದ್ದ ಮನೆಯ ಅವಶೇಷ   

ಸವಣೂರು (ಹಾವೇರಿ ಜಿಲ್ಲೆ): ಜಿಲ್ಲೆಯ ಬಹುತೇಕ ಕಡೆ ನಿರಂತರ ಮಳೆಯಾಗುತ್ತಿದ್ದು, ಸವಣೂರು ತಾಲ್ಲೂಕಿನ ಕಾರಡಗಿ ಬಳಿ ಮಾದಾಪುರದಲ್ಲಿ ಮನೆ ಕುಸಿದು ಬಿದ್ದು ಅವಳಿ ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದಾರೆ.

‘ಗ್ರಾಮದ ಚನ್ನಮ್ಮ ದೊಡ್ಡಬಸಪ್ಪ ಹರಕುಣಿ (38), 18 ತಿಂಗಳ ಅವಳಿ ಮಕ್ಕಳಾದ ಅನನ್ಯಾ ಮುತ್ತಪ್ಪ‌ ಹರಕುಣಿ ಮತ್ತು ಅನುಶ್ರೀ ಮುತ್ತಪ್ಪ ಹರಕುಣಿ ಮೃತರು. ಚನ್ನಮ್ಮ ಅವರ ತಾಯಿ ಯಲ್ಲಮ್ಮ (70), ಅವಳಿ ಮಕ್ಕಳ ಪೋಷಕರಾದ ಮುತ್ತಪ್ಪ ಮತ್ತು ಸುನೀತಾ ಅವರಿಗೆ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೃಷಿಕ ಮುತ್ತಪ್ಪ ಅವರ ಅಕ್ಕ ಚನ್ನಮ್ಮ ಸೇರಿ ಕುಟುಂಬದ ಎಲ್ಲಾ ಸದಸ್ಯರು ಮನೆಯಲ್ಲಿ ಮಲಗಿದ್ದರು. ಶುಕ್ರವಾರ ನಸುಕಿನಲ್ಲಿ ಚಾವಣಿ ಸಮೇತ ಮನೆ ಕುಸಿದಿದೆ. ಮನೆಯ ಅವಶೇಷಗಳಡಿ ಸಿಲುಕಿ ಚನ್ನಮ್ಮ, ಅನನ್ಯಾ ಹಾಗೂ ಅನುಶ್ರೀ ಸ್ಥಳದಲ್ಲೇ ಮೃತಪಟ್ಟರು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಅವಶೇಷಗಳಡಿ ಸಿಲುಕಿದ ಯಲ್ಲಮ್ಮ ಅವರನ್ನು ರಕ್ಷಿಸಿದ ಸ್ಥಳೀಯರು, ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.