ಹಾವೇರಿ: ‘ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣ ಬಯಲಿಗೆ ಬಂದ ಮೇಲೆ ಸಾಕಷ್ಟು ಊಹಾಪೋಹಗಳು, ಸಂಶಯಾಸ್ಪದ ಷಡ್ಯಂತ್ರ, ಹನಿಟ್ರ್ಯಾಪ್ ವಿಚಾರಗಳು ಮುನ್ನೆಲೆಗೆ ಬಂದಿವೆ. ಕೆಲವು ಸಚಿವರು ಮತ್ತು ಶಾಸಕರ ತೇಜೋವಧೆ ಆಗೋ ಸಾಧ್ಯತೆಗಳು ಹೆಚ್ಚಿವೆ. ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ, ರಾಜಕೀಯದಲ್ಲಿ ಅಸ್ಥಿರತೆ ಉಂಟು ಮಾಡುವ ಹಿನ್ನೆಲೆಯಲ್ಲಿ ಕೆಲವರು ನ್ಯಾಯಾಂಗದ ಮೊರೆ ಹೋಗಿದ್ದಾರೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ರಮೇಶ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ. ಸಂತ್ರಸ್ತೆ ಐದು ದಿನ ಕಳೆದರೂ ಬಂದು ಹೇಳಿಕೆ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಷಡ್ಯಂತ್ರದ ಸಂಶಯ ಬಂದಿದೆ. ಕೆಲವರು ಕಾನೂನು ರಕ್ಷಣೆ ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಕೆಲವರು 19 ಜನ ಇದ್ದಾರೆ ಅಂತಿದ್ದಾರೆ. ಎಲ್ಲ ವಿಚಾರಗಳನ್ನು ಗಮನಿಸಲಾಗಿದೆ. ಎಲ್ಲೆಲ್ಲಿ ತನಿಖೆ ಅಗತ್ಯವಿದೆಯೇ ಅಲ್ಲೆಲ್ಲ ತನಿಖೆ ನಡೆಸುತ್ತೇವೆ’ ಎಂದರು.
ದಿನೇಶ ಕಲ್ಲಹಳ್ಳಿ ಬಿಜೆಪಿ ಜೊತೆ ಗುರುತಿಸಿಕೊಂಡಿರೋ ವಿಚಾರಕ್ಕೆ ಸಂಬಂಧಪಟ್ಟಂತೆ, ‘ಯಾರು ಯಾವ್ಯಾವ ಪಕ್ಷದಲ್ಲಿ ಇದ್ದಾರೆ ಯಾರಿಗೆ ಗೊತ್ತು. ಅವರು ದೂರು ಕೊಟ್ಟ ಆಧಾರದ ಮೇಲೆ ತನಿಖೆ ನಡೆಯುತ್ತದೆ. ಅವರು ಯಾರ ಜೊತೆ ಗುರುತಿಸಿಕೊಂಡಿದ್ದಾರೋ ಅದಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.