ADVERTISEMENT

ಅಂಗವಿಕಲರನ್ನು ಗುರುತಿಸಿ, ಸೌಲಭ್ಯ ಕಲ್ಪಿಸಿ

ವಿಶೇಷ ಜನತಾ ದರ್ಶನ: ಶಾಸಕ ನೆಹರು ಓಲೇಕಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 14:17 IST
Last Updated 8 ಆಗಸ್ಟ್ 2022, 14:17 IST
ಹಾವೇರಿ ನಗರದಲ್ಲಿ ಸೋಮವಾರ ನಡೆದ ವಿಶೇಷ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ ಅವರು ಅಂಗವಿಕಲರಿಂದ ಅಹವಾಲು ಸ್ವೀಕರಿಸಿದರು  –ಪ್ರಜಾವಾಣಿ ಚಿತ್ರ 
ಹಾವೇರಿ ನಗರದಲ್ಲಿ ಸೋಮವಾರ ನಡೆದ ವಿಶೇಷ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ ಅವರು ಅಂಗವಿಕಲರಿಂದ ಅಹವಾಲು ಸ್ವೀಕರಿಸಿದರು  –ಪ್ರಜಾವಾಣಿ ಚಿತ್ರ    

ಹಾವೇರಿ: ‘ಸೌಲಭ್ಯ ವಂಚಿತ ಅರ್ಹ ಅಂಗವಿಕಲ ಹಾಗೂ ವಯೋವೃದ್ಧ ಫಲಾನುಭವಿಗಳನ್ನು ಗುರುತಿಸಿ, ಸರ್ಕಾರದ ವಿಶೇಷ ಸೌಲಭ್ಯಗಳನ್ನು ನೀಡಿ’ ಎಂದು ಶಾಸಕ ನೆಹರು ಓಲೇಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾವೇರಿ ನಗರಸಭೆ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅಂಗವಿಕಲರ ಹಾಗೂ ವಯೋವೃದ್ಧರ ವಿಶೇಷ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ದಿನ ಸಮಾಜದಲ್ಲಿರುವ ಅಂಗವಿಕಲ ಹಾಗೂ ವಯೋವೃದ್ಧರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿಶೇಷ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಮೂಹದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.

ADVERTISEMENT

ಅಂಗವಿಕಲ ಹಾಗೂ ವಯೋವೃದ್ಧರ ಮಾಸಿಕ ವೇತನ, ಯುಡಿಐಡಿ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇತರ ಸಮಸ್ಯೆಗಳನ್ನು ಸ್ಥಳದಲ್ಲೇ ನಿವಾರಿಸಲಾಗುವುದು. ಈ ಸಂಬಂಧ ಎಲ್ಲ ಇಲಾಖಾ ಅಧಿಕಾರಿಗಳು ಜನತಾ ದರ್ಶನದಲ್ಲಿ ಭಾಗವಹಿಸಿದ್ದಾರೆ. ಸ್ಥಳದಲ್ಲೇ ಅರ್ಜಿ ವಿಲೇವಾರಿ ಮಾಡಲಾಗುವುದು. ಜೊತೆಗೆ ಸರ್ಕಾರದ ಸೌಲಭ್ಯಗಳಾದ ಅಂಗವಿಕಲರ ತ್ರಿಚಕ್ರ ವಾಹನ, ಮಾಸಿಕ ವೇತನ ಹಾಗೂ ಮನೆ ಸೌಲಭ್ಯಕ್ಕೆ ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಅವರಿಗೆ ಮಂಜೂರಾತಿ ನೀಡುವ ಕಾರ್ಯ ಮಾಡಲಾಗುವುದು ಎಂದರು.

ಅಂಗವಿಕಲರ ಮುಖಂಡ ಹನುಮಂತ ದಾಸರ ಮಾತನಾಡಿ, ಶಾಸಕರು ತಮ್ಮ ಕ್ಷೇತ್ರದ ಅಂಗವಿಕಲರು ಮತ್ತು ವಯೋವೃದ್ಧರ ಸಮಸ್ಯೆಗಳನ್ನು ಅರಿತು ನಮಗಾಗಿಯೇ ವಿಶೇಷ ಜನತಾದರ್ಶನ ಆಯೋಜಿಸಿ, ನಮ್ಮ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ ಅವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಹೇಳಿದರು.

ಶೇ 70 ಅರ್ಜಿಗಳ ವಿಲೇವಾರಿ

ಜನತಾ ದರ್ಶನದಲ್ಲಿ ಪಾಲ್ಗೊಂಡ ಅಂಗವಿಕಲರು ಹಾಗೂ ವಯೋವೃದ್ಧರು ಕುಳಿತ ಸ್ಥಳಕ್ಕೆ ತೆರಳಿದ ಶಾಸಕ ನೆಹರು ಓಲೇಕಾರ ಅವರು ಸಮಸ್ಯೆ ಅಲಿಸಿ, ಅರ್ಜಿಗಳನ್ನು ಸ್ವೀಕರಿಸಿದರು. ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದರು. 90 ಜನರಿಂದ ಅರ್ಜಿ ಸ್ವೀಕರಿಸಿದರು. ಸ್ಥಳದಲ್ಲೇ ಶೇ 70ರಷ್ಟು ಅರ್ಜಿಗಳನ್ನು ವಿಲೇವಾರಿಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಉಪವಿಭಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್‌ ಗಿರೀಶ ಸ್ವಾದಿ, ನಗರಸಭೆ ಸದಸ್ಯ ಬಾಬು ಮುಜಿಂದಾರ್, ಸಿ.ಪಿ.ಐ ಸುರೇಶ ಸಗರಿ, ಕೆ.ಸಿ.ಕೋರಿ, ಅಂಗವಿಕಲರ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ಶ್ರೀಕಾಂತ ಪೂಜಾರ, ಆಶ್ರಯ ಕಮಿಟಿ ಸದಸ್ಯೆ ಲಲಿತಾ ಗುಂಡೇನಹಳ್ಳಿ, ಜಗದೀಶ ಸವಣೂರು, ಗಿರೀಶ ತುಪ್ಪದ, ಬಸವರಾಜ ಕಳಸೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.