ಶಿವಾನಂದ ಪಾಟೀಲ
ಹಾವೇರಿ: ‘ರೈತ ಆತ್ಮಹತ್ಯೆ ಪ್ರಕರಣಗಳನ್ನು ವಿವಾದ ಮಾಡುವುದು ಬೇಡ. ರೈತ ಆತ್ಮಹತ್ಯೆಯ ವರದಿ ಮಾಡುವಲ್ಲಿ ಏನೆಲ್ಲ ತಪ್ಪುಗಳು ಆಗುತ್ತಿವೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ತಾಲ್ಲೂಕಿನ ರಾಣೆಬೆನ್ನೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರೈತ ಆತ್ಮಹತ್ಯೆ ಸಂಬಂಧ ಮುಖ್ಯಮಂತ್ರಿ ಅವರೂ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದರು.
‘ರೈತ ಆತ್ಮಹತ್ಯೆ ಪ್ರಕರಣಗಳ ವರದಿಯಲ್ಲಿ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಆತ್ಮಹತ್ಯೆ ತಡೆಗಟ್ಟಲು ಏನು ಕ್ರಮ ಕೈಗೊಂಡಿದ್ದೀರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ, ‘ಜಿಲ್ಲೆಯಲ್ಲಿ ಮೊದಲಿನಿಂದಲೂ ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ನನ್ನ ಉಸ್ತುವಾರಿಗೂ ಅದಕ್ಕೂ ಸಂಬಂಧ ಕಲ್ಪಿಸುವುದು ಬೇಡ. ವರದಿ ಮಾಡುವಂತೆ ಏನೆಲ್ಲ ತಪ್ಪುಗಳು ನಡೆಯುತ್ತಿವೆ ಎಂಬುದಕ್ಕೆ ಮೂರ್ನಾಲ್ಕು ಪ್ರಕರಣಗಳು ಕಣ್ಮುಂದಿವೆ. ಇದನ್ನು ಇಟ್ಟುಕೊಂಡೇ, ವರದಿ ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆ ಮಾಡುವ ಬಗ್ಗೆ ಪರಿಶೀಲನೆ ನಡೆದಿದೆ’ ಎಂದರು.
‘ಕಳಪೆ ಬೀಜ ಮಾರಾಟಕ್ಕೆ ಸಂಬಂಧಪಟ್ಟಂತೆ ನಾಲ್ಕು ಅಂಗಡಿಗಳ ಪರವಾನಗಿ ರದ್ದುಪಡಿಸಿ, ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಕಳಪೆ ಬೀಜದ ಬಗ್ಗೆ ತನಿಖೆ ನಡೆಸಲು ಆಯುಕ್ತರಿಗೆ ಸೂಚನೆ ನೀಡಿದ್ದು, ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.