ADVERTISEMENT

Ind vs Pak Tensions: 28 ಚೆಕ್‌ಪೋಸ್ಟ್‌ ನಿರ್ಮಾಣ

ಭಾರತ–ಪಾಕಿಸ್ತಾನ್ ನಡುವೆ ಯುದ್ಧದ ಸ್ಥಿತಿ, ಜಿಲ್ಲೆಯ ಸೂಕ್ಷ್ಮ–ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 11 ಮೇ 2025, 16:36 IST
Last Updated 11 ಮೇ 2025, 16:36 IST
ಹಾವೇರಿ ಜಿಲ್ಲೆಯಲ್ಲಿ ಪೊಲೀಸರು ವಾಹನಗಳನ್ನು ತಡೆದು ಭಾನುವಾರ ತಪಾಸಣೆ ನಡೆಸಿದರು
ಹಾವೇರಿ ಜಿಲ್ಲೆಯಲ್ಲಿ ಪೊಲೀಸರು ವಾಹನಗಳನ್ನು ತಡೆದು ಭಾನುವಾರ ತಪಾಸಣೆ ನಡೆಸಿದರು   

ಹಾವೇರಿ: ಭಾರತ ಹಾಗೂ ಪಾಕಿಸ್ತಾನ್ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚಿನ ನಿಗಾ ವಹಿಸಿರುವ ಪೊಲೀಸರು, 28 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಕಾವಲು ಕಾಯುತ್ತಿದ್ದಾರೆ.

ದಿನದ 24 ಗಂಟೆಯೂ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯನ್ನು ಪ್ರವೇಶಿಸುವ ಹಾಗೂ ಅಪರಿಚಿತ ವ್ಯಕ್ತಿಗಳನ್ನು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

‘ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಜನರಿಗೆ ಸೂಕ್ತ ಭದ್ರತೆ ನೀಡಬೇಕು. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರದ ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದೆ. ಅದೇ ಸೂಚನೆ ಆಧರಿಸಿ ಜಿಲ್ಲಾ ಪೊಲೀಸರು ಸಹ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ADVERTISEMENT

‘ಭಾರತ ಹಾಗೂ ಪಾಕಿಸ್ತಾನ್ ನಡುವೆ ಯುದ್ಧದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಜಿಲ್ಲೆಯಾದ್ಯಂತ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಗಸ್ತು ಹೆಚ್ಚಿಸಲಾಗಿದೆ’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ ತಿಳಿಸಿದರು.

‘ಜಿಲ್ಲೆಯಲ್ಲಿರುವ ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಜನಸಂದಣಿ ಸ್ಥಳಗಳು, ದೇವಸ್ಥಾನ, ಮಸೀದಿ, ಚರ್ಚ್, ವಿದ್ಯುತ್ ಸರಬರಾಜು ಘಟಕ, ಪವನ ಶಕ್ತಿ ಘಟಕ, ಪ್ರವಾಸಿ ತಾಣಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದೆ.’

‘ತುರ್ತು ಸಂದರ್ಭಗಳಲ್ಲಿ ಭದ್ರತೆಗೆ ನಾಗರಿಕರ ಸಹಕಾರವೂ ಅಗತ್ಯವಿರುತ್ತದೆ. ಈಗಾಗಲೇ ಜಿಲ್ಲೆಯ 186 ನಾಗರಿಕರಿಗೆ ಸ್ವರಕ್ಷಣೆಗಾಗಿ ಬಂದೂಕು ತರಬೇತಿಯನ್ನೂ ನೀಡಲಾಗಿದೆ. ಜಿಲ್ಲೆಯಲ್ಲಿರುವ ರೌಡಿಗಳ ಮನೆಗೂ ಹೋಗಿ ತಪಾಸಣೆ ನಡೆಸಲಾಗಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದು ಹೇಳಿದರು.

ಸುಳ್ಳು ಸುದ್ದಿ ಹರಡಿದರೆ ಕ್ರಮ: ‘ಯುದ್ಧ ಹಾಗೂ ಇತರೆ ವಿಷಯಗಳಿಗೆ ಸಂಬಂಧಪಟ್ಟಂತೆ ಕೆಲವರು ಸುಳ್ಳು ಸುದ್ದಿ ಹರಿಬಿಡುತ್ತಿದ್ದಾರೆ. ಇಂಥವರನ್ನು ಪತ್ತೆ ಮಾಡಲು ವಿಶೇಷ ಘಟಕವನ್ನು ತೆರೆಯಲಾಗಿದೆ’ ಎಂದು ಅಂಶುಕುಮಾರ ತಿಳಿಸಿದರು.

‘ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯ ಪೋಸ್ಟ್‌ಗಳನ್ನು ಹರಿಬಿಡಲಾಗುತ್ತಿದೆ. ಜಿಲ್ಲಾ ಮಟ್ಟ ಹಾಗೂ ಪೊಲೀಸ್ ಠಾಣೆಗಳ ಮಟ್ಟದಲ್ಲಿ, ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ತಂಡಗಳು ಕೆಲಸ ಮಾಡುತ್ತಿವೆ. ಯಾವುದಾದರೂ ಪ್ರಕರಣಗಳು ಕಂಡುಬಂದರೆ, ತ್ವರಿತವಾಗಿ ಸ್ಪಂದಿಸಲಿವೆ’ ಎಂದು ಹೇಳಿದರು.

ಭದ್ರತೆಗೆ 1,295 ಸಿಬ್ಬಂದಿ: ‘ಜಿಲ್ಲೆಯಲ್ಲಿ ಭದ್ರತೆ ಕೆಲಸಕ್ಕಾಗಿ ಸುಮಾರು 1,295 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಗ್ನಿಶಾಮಕ ದಳದ 124 ಅಧಿಕಾರಿಗಳು/ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ 543 ಸಿಬ್ಬಂದಿ ಭದ್ರತೆಗೆ ಕೈಜೋಡಿಸಿದ್ದಾರೆ’ ಎಂದು ಅಂಶುಕುಮಾರ ತಿಳಿಸಿದರು.

‘ಜಿಲ್ಲೆಯ 28 ಚೆಕ್‌ಪೋಸ್ಟ್‌ಗಳಲ್ಲಿ ಕಾವಲು ಕಾಯಲು ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚೆಕ್‌ಪೋಸ್ಟ್ ಮಾರ್ಗವಾಗಿ ಸಾಗುವ ಎಲ್ಲ ವಾಹನಗಳನ್ನು ತಪಾಸಣೆ ನಡೆಸಲು ಪ್ರತ್ಯೇಕ ಸಿಬ್ಬಂದಿ ಇದ್ದಾರೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.