ADVERTISEMENT

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಪಾರದರ್ಶಕ ಪರೀಕ್ಷೆ ನಡೆಸಲು ಸೂಚನೆ

ಜಿಲ್ಲೆಯಲ್ಲಿ 14,335 ವಿದ್ಯಾರ್ಥಿಗಳ ನೋಂದಣಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 16:03 IST
Last Updated 11 ಏಪ್ರಿಲ್ 2022, 16:03 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧ್ಯಕ್ಷತೆಯಲ್ಲಿ ನಡೆಯಿತು 
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧ್ಯಕ್ಷತೆಯಲ್ಲಿ ನಡೆಯಿತು    

ಹಾವೇರಿ: ಏಪ್ರಿಲ್ 22ರಿಂದ ಮೇ 18ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಬೇಕು. ನಕಲಿಗೆ ಅವಕಾಶ ಮಾಡಿಕೊಡಬಾರದು, ಅತ್ಯಂತ ಪಾರದರ್ಶಕವಾಗಿ ನಿಸಪಕ್ಷಪಾತವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು, ಶಿಕ್ಷಕರು, ಪರೀಕ್ಷಾ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ 14,335 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 24 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದೆ. ಪ್ರಶ್ನೆ ಪತ್ರಿಕೆಗಳ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸೇರಿದಂತೆ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ತೆಗೆದುಕೊಂಡುಹೋಗಲು ಅವಕಾಶ ಕಲ್ಪಿಸಬೇಡಿ ಎಂದು ಸೂಚಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಮಾತನಾಡಿ, ಪರೀಕ್ಷೆ ನಡೆಯುವ ವಿಷಯದ ಉಪನ್ಯಾಸಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಕ ಮಾಡಬಾರದು. ಪರೀಕ್ಷಾ ಕೇಂದ್ರದ ಆವರಣದೊಳಗೆ ಆ ಉಪನ್ಯಾಸಕರು ಪ್ರವೇಶಿಸಲು ಅವಕಾಶ ಮಾಡಿಕೊಡಬಾರದು. ಲಾಟರಿ ಮೂಲಕ ಕೊಠಡಿ ಮೇಲ್ವಿಚಾರಕರ ನೇಮಕ ಮಾಡಬೇಕು. ಪ್ರಶ್ನೆಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆ ಬಂಡಲ್ ಮಾಡುವಾಗ ಸಿಸಿಟಿವಿ ವೀಕ್ಷಣಾ ಅಡಿಯಲ್ಲೇ ಕೈಗೊಳ್ಳುವಂತೆ ಸೂಚನೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಉಮೇಶಪ್ಪ, ಖಜಾನೆಯಿಂದ ಪ್ರಶ್ನೆಪತ್ರಿಕೆ ಕೊಂಡೊಯ್ಯಲು ತ್ರಿಸದಸ್ಯರ ಸಮಿತಿ ರಚಿಸಲಾಗಿದೆ. ಇವರ ಉಸ್ತುವಾರಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಪೊಲೀಸ್ ಬೆಂಗಾವಲಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗುವುದು. ಜಿಲ್ಲಾ ಖಜಾನೆಯಲ್ಲಿ ಪರೀಕ್ಷಾ ಕರ್ತತ್ಯಕ್ಕೆ ನಿಯೋಜಿಸುವ ಎಲ್ಲ ಅಧಿಕಾರಿ ಸಿಬ್ಬಂದಿ ಬಯೋಮೆಟ್ರಿಕ್ ಮಾಡಿಸಬೇಕು. ಏಪ್ರಿಲ್ 20ರಂದು ಪರೀಕ್ಷೆಗೆ ನಿಯೋಜಿತ ಎಲ್ಲ ವಾಹನಗಳನ್ನು ಜಿಪಿಎಸ್ ಅಳವಡಿಕೆಗೆ ಕ್ರಮವಹಿಸಬೇಕು ಎಂದು ತಿಳಿಸಿದರು.

24 ಪರೀಕ್ಷಾ ಕೇಂದ್ರಗಳು:ಸವಣೂರ ಹಾಗೂ ರಟ್ಟಿಹಳ್ಳಿ ತಾಲ್ಲೂಕಿನಲ್ಲಿ ತಲಾ ಒಂದು, ಶಿಗ್ಗಾವಿ ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ತಲಾ ಎರಡು, ಹಾನಗಲ್ ಹಾಗೂ ಹಿರೇಕೆರೂರು ತಾಲ್ಲೂಕಿನಲ್ಲಿ ತಲಾ ಮೂರು, ಹಾವೇರಿ ತಾಲ್ಲೂಕಿನಲ್ಲಿ ಐದು, ರಾಣೇಬೆನ್ನೂರ ತಾಲ್ಲೂಕಿನಲ್ಲಿ ಏಳು ಒಳಗೊಂಡಂತೆ 24 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದುಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಉಮೇಶಪ್ಪ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಪ್ರಾಚಾರ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.