ADVERTISEMENT

ಸುಪ್ರೀಂ ತೀರ್ಪು: ಲೈಂಗಿಕ ಅಲ್ಪಸಂಖ್ಯಾತರರಿಗೆ ‘ಸ್ವಾತಂತ್ರ್ಯ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 14:31 IST
Last Updated 22 ಅಕ್ಟೋಬರ್ 2018, 14:31 IST
ಹಾವೇರಿಯ ಕೆರಿಮತ್ತಿಹಳ್ಳಿಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಭಾರತೀಯ ದಂಡ ಸಂಹಿತೆ– 377 ಕುರಿತ ಸುಪ್ರೀಂ ಕೋರ್ಟ್‌ ತೀರ್ಪಿನ ಸಂಭ್ರಮಾಚರಣೆ, ಅರಿವು ಮತ್ತು ಸಂವಾದ ಕಾರ್ಯಕ್ರಮ ನಡೆಯಿತು
ಹಾವೇರಿಯ ಕೆರಿಮತ್ತಿಹಳ್ಳಿಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಭಾರತೀಯ ದಂಡ ಸಂಹಿತೆ– 377 ಕುರಿತ ಸುಪ್ರೀಂ ಕೋರ್ಟ್‌ ತೀರ್ಪಿನ ಸಂಭ್ರಮಾಚರಣೆ, ಅರಿವು ಮತ್ತು ಸಂವಾದ ಕಾರ್ಯಕ್ರಮ ನಡೆಯಿತು   

ಹಾವೇರಿ:ಭಾರತೀಯ ದಂಡ ಸಂಹಿತೆ– 377 ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದ ದಿನವು ಲೈಂಗಿಕ ಅಲ್ಪಸಂಖ್ಯಾತರಿಗೆ ‘ಸ್ವಾತಂತ್ರ್ಯದ ಹಬ್ಬ’ವಾಗಿತ್ತು ಎಂದು ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಬಣ್ಣಿಸಿದರು.

ತಾಲ್ಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ನಡೆದ ಭಾರತೀಯ ದಂಡ ಸಂಹಿತೆ– 377 ಕುರಿತ ಸುಪ್ರೀಂ ಕೋರ್ಟ್‌ ತೀರ್ಪಿನ ಸಂಭ್ರಮಾಚರಣೆ, ಅರಿವು ಮತ್ತು ಸಂವಾದ ಕಾರ್ಯಕ್ರಮವನನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದ ವಿವಿಧೆಡೆ ಅನಾದಿ ಕಾಲದಿಂದಲೂ ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. ಈ ಬಗ್ಗೆ ಧಾರ್ಮಿಕ ಪುರಾಣಗಳಲ್ಲಿಯೂ ಉಲ್ಲೇಖವಿದ್ದು, ದೇವರೂ ಒಂದೊಂದು ರೂಪದಲ್ಲಿ ಕಂಡುಬಂದಿರುವ ಕುರಿತು ವಿಶ್ಲೇಷಣೆಗಳಿವೆ ಎಂದರು.

ADVERTISEMENT

ಹೋರಾಟಕ್ಕೆ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಬೆನ್ನೆಲುಬಾಗಿ ನಿಂತಿವೆ. ಸ್ವಾತಂತ್ರ್ಯ ಬಂದ ಬಳಿಕ 48 ಲಕ್ಷಕ್ಕೂ ಹೆಚ್ಚು ಜನ ಲೈಂಗಿಕ ಅಲ್ಪಸಂಖ್ಯಾತರೆಂದು ಘೋಷಿಸಿಕೊಂಡಿದ್ದಾರೆ. ಈ ಕಾಯ್ದೆಯನ್ನು ಭಾರತೀಯ ದಂಡ ಸಂಹಿತೆ (ಐಪಿಸಿ)ಯಿಂದ ದೂರ ಇಡಲಾಗಿದ್ದು, ನಿಜವಾದ ಸಮಸ್ಯೆ ಈಗ ಎದುರಾಗುತ್ತಿದೆ. ಲೈಂಗಿಕ ಅಲ್ಪಸಂಖ್ಯಾತರನ್ನು ಸಹಾನುಭೂತಿ ಮತ್ತು ಕಾನೂನು ಬದ್ಧವಾಗಿ ಕಾಣಬೇಕಾಗಿದೆ ಎಂದರು.

ಜೀವಾ ಸಂಸ್ಥೆಯ ಉಮಾ ಮಾತನಾಡಿ, ಸಮಾಜದಲ್ಲಿ ಹೆಣ್ಣೆಂದರೆ ಮಕ್ಕಳನ್ನು ಹೆರುವುದು, ನಾಲ್ಕು ಗೋಡೆಗಳ ಮಧ್ಯೆ ಇರುವುದು, ಪುರುಷರ ಆಸೆ ಪೂರೈಸುವುದು ಎಂಬುದಕ್ಕೆ ಸೀಮಿತಗೊಳಿಸಲು ಯತ್ನಿಸಲಾಗುತ್ತಿದೆ. ಆದರೆ, ಆಕೆಯನ್ನೂ ಸಮಾನವಾಗಿ ಕಾಣಬೇಕು. ಹೆಣ್ಣಾಗಿ ಪರಿವರ್ತನೆಗೊಂಡ ಗಂಡನ್ನೂ ಕಳಂಕ ಭಾವೆನೆಯಿಂದ ನೋಡುವುದನ್ನು ಬಿಡಬೇಕು ಎಂದರು.

ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ. ಮಾತನಾಡಿ, ಡಾ. ಬಿ.ಆರ್‌. ಅಂಬೇಡ್ಕರ್‌ ಬರೆದ ಸಂವಿಧಾನದ ಪರಿಣಾಮ ಮಹಿಳೆಯರು ಉನ್ನತ ಹುದ್ದೆ, ರಾಜಕೀಯ ಸ್ಥಾನಮಾನ ಪಡೆದಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಪುರಾಣಗಳಲ್ಲೇ ಉಲ್ಲೇಖವಿದೆ ಎಂದರು.

ವಕೀಲ ವಿ.ಎಫ್‌.ಕಟ್ಟೆಗೌಡ್ರು ಮಾತನಾಡಿ, ಐಪಿಸಿ–377 ಕಾಯ್ದೆಯು ಬ್ರಿಟೀಷರ ಕಾಲದ್ದಾಗಿದೆ. ಲೈಂಗಿಕ ಅಲ್ಪಸಂಖ್ಯಾತರನ್ನೂ ಹೆಣ್ಣು–ಗಂಡಿನಂತೆ ಸಮಾನತೆಯಿಂದ ಕಾಣಬೇಕು ಎಂದರು.

ಸಾಮಾಜಿಕ ಹೋರಾಟಗಾರ್ತಿ ಪರಿಮಳಾ ಜೈನ್‌ ಮಾತನಾಡಿ, ಸಮಾನತೆ, ಸ್ವಾತಂತ್ರ್ಯ, ಹಕ್ಕು–ಕರ್ತವ್ಯಗಳ ಕುರಿತ ಕಾಯ್ದೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಸ್ನಾತಕೋತ್ತರ ಕೇಂದ್ರದ ಪ್ರಭಾರ ಆಡಳಿತಾಧಿಕಾರಿ ಪ್ರಶಾಂತ.ಎಚ್‌.ವೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೊನ್ನಪ್ಪ ತಗಡಿನಮನಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಎಚ್‌.ಹೆಬ್ಬಾಳ, ಮಲ್ಲಪ್ಪ ಕುಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.