ಹಾವೇರಿ: ‘ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಂಚಾರಗಟ್ಟಿ ಬಳಿಯ ಹರಿಯುತ್ತಿರುವ ತುಂಗಭದ್ರಾ ನದಿಗೆ ಬಾಂದಾರ ನಿರ್ಮಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಂದಾರ ಕಾಮಗಾರಿಗಾಗಿ ಸರ್ಕಾರ ₹ 150 ಕೋಟಿ ಮಂಜೂರಾಗಿದೆ. ಇದರಲ್ಲಿ ಈಗಾಗಲೇ ₹ 50 ಕೋಟಿ ಬಿಡುಗಡೆ ಸಹ ಆಗಿದೆ’ ಎಂದರು.
‘ಹಾವೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರಬಾರದು. ಬಾಂದಾರ ನಿರ್ಮಿಸಿದರೆ, ನೀರು ಸಂಗ್ರಹವಾಗಿ ಕುಡಿಯಲು ಲಭ್ಯವಾಗಲಿದೆ. ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದೇನೆ’ ಎಂದರು.
907 ಕುಟುಂಬಕ್ಕೆ ಹಕ್ಕುಪತ್ರ: ‘ಹೊಸಪೇಟೆಯಲ್ಲಿ ನಡೆಯುವ ಸಮರ್ಪಣೆ ಸಂಕಲ್ಪ ಸಮಾರಂಭದಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 907 ಕುಟುಂಬಕ್ಕೆ ಹಕ್ಕು ಪತ್ರ ನೀಡಲಾಗುತ್ತಿದೆ’ ಎಂದು ರುದ್ರಪ್ಪ ಲಮಾಣಿ ತಿಳಿಸಿದರು.
ಗ್ರಾಮೀಣ ರಸ್ತೆ ಅಭಿವೃದ್ಧಿ: ‘ಕ್ಷೇತ್ರದಲ್ಲಿ ಹಾಳಾಗಿರುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹ 10 ಕೋಟಿ ಮಂಜೂರಾಗಿದೆ’ ಎಂದರು.
‘ಬರಡಿಯಿಂದ ಕಲ್ಲೇದೇವರು, ಅಗಡಿಯಿಂದ ಯಲಗಚ್ಛ, ಕರ್ಜಗಿಯಿಂದ ಯಲಗಚ್ಛ, ಅಗಡಿಯಿಂದ ತಿಮ್ಮೇನಹಳ್ಳಿ, ಹಿರೇಮುಗದೂರಿನಿಂದ ಡೊಂಬರಮತ್ತೂರ, ಕಳಸೂರಿನಿಂದ ಕೋಳೂರು, ಕೆ.ಬಿ. ತಿಮ್ಮಾಪುರ–ಡೊಂಬರಮತ್ತೂರು ರಸ್ತೆ, ಇಚ್ಚಂಗಿಯಿಂದ ಯಲ್ಲಾಪುರ, ಸಿದ್ದಾಪೂರದಿಂದ ಯಲ್ಲಾಪುರ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಶುರುವಾಗಲಿದೆ’ ಎಂದು ಹೇಳಿದರು.
‘ಕರ್ಜಗಿ ಗ್ರಾಮದಲ್ಲಿ ₹ 1 ಕೋಟಿ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಿಸಲಾಗಿದೆ. ಹಾವೇರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 3 ಹೊಸ ವಿದ್ಯಾರ್ಥಿ ನಿಲಯ ಮಂಜೂರಾಗಿದ್ದು, ಕಟ್ಟಡ ಕಾಮಗಾರಿ ಆರಂಭವಾಗಬೇಕಿದೆ’ ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.