ADVERTISEMENT

ಅಧಿಕಾರಕ್ಕೆ ಬಂದ್ರೆ, ಬಿಜೆಪಿ ಹಗರಣಗಳ ತನಿಖೆ: ಸಲೀಂ ಅಹಮದ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2023, 15:41 IST
Last Updated 9 ಏಪ್ರಿಲ್ 2023, 15:41 IST
ಸಲೀಂ ಅಹಮದ್‌ 
ಸಲೀಂ ಅಹಮದ್‌    

ಹಾವೇರಿ: ಭ್ರಷ್ಟಾಚಾರದಿಂದ ಜನ ಮನ್ನಣೆ ಕಳೆದುಕೊಂಡಿರುವ ಬಿಜೆಪಿ ಈ ಬಾರಿ 60 ಸ್ಥಾನಗಳನ್ನು ಗೆಲ್ಲಬಹುದು ಅಷ್ಟೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಿಜೆಪಿ ಸರ್ಕಾರದ ಎಲ್ಲಾ ಭ್ರಷ್ಟಾಚಾರದ ಹಗರಣಗಳನ್ನು ತನಿಖೆ ಮಾಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ವಿಧಾನ ಪರಿಷತ್‌ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೊದಲ ಅಧಿವೇಶನದಲ್ಲಿ ನಮ್ಮ ಪಕ್ಷ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

ಕೋಲಾರದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದ್ದಕ್ಕೆ ಪ್ರಕರಣ ದಾಖಲಿಸಿ ಅವರನ್ನು ಈಗ ಅನರ್ಹಗೊಳಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಮಾಡುವುದು ಸಹಜ ಆದರೆ, ಈ ರೀತಿ ಅನರ್ಹಗೊಳಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಈಗ ಅದೇ ನೆಲದಲ್ಲಿ ಏ.16ರಂದು ಆಯೋಜಿಸಿರುವ ‘ಜೈ ಭಾರತ ಸಮಾವೇಶ’ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ADVERTISEMENT

ಓಲೇಕಾರರನ್ನು ಏಕೆ ಅನರ್ಹಗೊಳಿಸಲಿಲ್ಲ: ರಾಹುಲ್‍ಗಾಂಧಿ ವಿರುದ್ಧ ಷಡ್ಯಂತ್ರ ರೂಪಿಸಿ ಅನರ್ಹಗೊಳಿಸಲಾಗಿದೆ. ಬಿಜೆಪಿಯವರು ರಾಹುಲ್‍ಗಾಂಧಿಗೆ ಹೆದರಿ ಇಂತಹ ರಣಹೇಡಿ ಕೆಲಸ ಮಾಡುತ್ತಿದೆ. ಆದರೆ, ಇಲ್ಲಿಯ ಬಿಜೆಪಿ ಶಾಸಕ ನೆಹರು ಓಲೇಕಾರಗೂ ಕೋರ್ಟ್ ಶಿಕ್ಷೆ ವಿಧಿಸಿದ್ದರೂ ಅವರನ್ನೇಕೆ ಅನರ್ಹಗೊಳಿಸಲಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಈಗಾಗಲೇ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕೆಲ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾಗಿವೆ. ಅವುಗಳನ್ನು ಸರಿಪಡಿಸುತ್ತೇವೆ. ಆದರೆ, ಬಿಜೆಪಿಗೆ ಇನ್ನೂ ಒಂದೂ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಕುಟುಕಿದರು.

ಸಿಎಂ ಮಾತು ಶೋಭೆ ತರುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿಯ ಕಾರ್ಯಕರ್ತರ ಸಮಾವೇಶದಲ್ಲಿ ಕುಸ್ತಿ ಆಡಲು ಯಾರು ಬರ್ತೀರಿ ಬರ್ರಿ ಎಂದಿದ್ದಾರೆ. ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಬೊಮ್ಮಾಯಿ ಅವರು ಒಮ್ಮೆ ಹಾನಗಲ್‌ ಕ್ಷೇತ್ರದ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆಯನ್ನು ನೆನಪಿಸಿಕೊಳ್ಳಬೇಕು. ನೀವು ಅಭಿವೃದ್ಧಿ ಮಾಡಿದ್ದರೆ ನಿಮಗೆ ಚಿತ್ರನಟ ಸುದೀಪ್ ಬೆಂಬಲ ಏಕೆ ಬೇಕಿತ್ತು. 23 ಸಾವಿರ ರೌಡಿಶೀಟರ್‌ಗಳ ಮೇಲಿದ್ದ ಪ್ರಕರಣ ಹಿಂಪಡೆದು ಇದನ್ನು ರೌಡಿ ರಾಜ್ಯ ಮಾಡಲು ಹೊರಟಿದ್ದೀರಾ ಎಂದು ಕಿಡಿಕಾರಿದರು.

ಬಂಡಾಯ ಶಮನಕ್ಕೆ ಮಾತುಕತೆ: ಟಿಕೆಟ್ ಘೋಷಣೆಯಾಗಿರುವ ಕ್ಷೇತ್ರಗಳಲ್ಲಿ ಬಂಡಾಯ ಎದ್ದಿರುವ ಅತೃಪ್ತರ ಜತೆ ಪಕ್ಷದ ವರಿಷ್ಠರು ಚರ್ಚೆ ನಡೆಸಿದ್ದಾರೆ. ಮಾಜಿ ಸಚಿವ ಮನೋಹರ ತಹಸೀಲ್ದಾರ್‌ ಅವರಿಗೆ ಪಕ್ಷದಲ್ಲೇ ಇರುವಂತೆ ಮನವಿ ಮಾಡಿದ್ದೆವು. ಅವರಿಗೆ ಪಕ್ಷ ಎಲ್ಲಾ ಅವಕಾಶ ಕಲ್ಪಿಸಿದೆ. ಸಮೀಕ್ಷೆ ವರದಿ ಆಧರಿಸಿ ಶ್ರೀನಿವಾಸ ಮಾನೆ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ತಹಶೀಲ್ದಾರ್ ನಮ್ಮ ನಿರ್ಧಾರ ಬದಲಿಸಿ ಕಾಂಗ್ರೆಸ್ಸಿಗೆ ಮರಳುವ ವಿಶ್ವಾಸವಿದೆ ಎಂದರು.

‘ಪಕ್ಷ ಸೂಚಿಸಿದರೆ ಪಲಾಯನ ಮಾಡುವುದಿಲ್ಲ’
‘ನಾನು ಶಿಗ್ಗಾವಿ–ಸವಣೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಲ್ಲ. ನನ್ನ ವಿಧಾನ ಪರಿಷತ್‌ ಸದಸ್ಯತ್ವ ಸ್ಥಾನಕ್ಕೆ ಇನ್ನೂ 5 ವರ್ಷ ಕಾಲಾವಕಾಶ ಇದೆ. ಸ್ಥಳೀಯರಿಗೆ ಟಿಕೆಟ್ ಕೊಡಬೇಕೆಂಬ ಚಿಂತನೆ ನಡೆದಿದೆ. ಪಕ್ಷದ ಆದೇಶವೇ ಅಂತಿಮ. ಒಂದು ವೇಳೆ ಪಕ್ಷ ನಿಲ್ಲುವಂತೆ ಸೂಚಿಸಿದರೆ, ನಾನು ಪಲಾಯನವಾದ ಮಾಡುವುದಿಲ್ಲ’ ಎಂದು ಸಲೀಂ ಅಹಮದ್‌ ತಿಳಿಸಿದರು.

ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಲು 14 ಜನ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಸೇರಿ 8 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಿ ಕೊಟ್ಟಿದ್ದೇವೆ. ಅಲ್ಲಿ ಯಾರು ಸೂಕ್ತ ಅಭ್ಯರ್ಥಿ ಎಂಬುದು ಚರ್ಚೆ ಆಗುತ್ತದೆ. 8 ಅಭ್ಯರ್ಥಿಗಳಿಗೂ ಸಿಎಂ ಅವರನ್ನು ಸೋಲಿಸುವ ಶಕ್ತಿ ಇದೆ ಎಂದರು.

ಪಟ್ಟಿಯಲ್ಲಿ ನನ್ನ ಹೆಸರಿಲ್ಲ: ಖಾದ್ರಿ
ಸ್ಕ್ರಿನಿಂಗ್ ಕಮೀಟಗೆ ಕಳುಹಿಸಿರುವ 8 ಆಕಾಂಕ್ಷಿಗಳ ಹೆಸರಿನ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ಆ ಪಟ್ಟಿಯಲ್ಲಿ ಕೇವಲ 4 ಹೆಸರುಗಳಿದ್ದು, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ಷಣ್ಮುಖ ಶಿವಳ್ಳಿ, ಯಾಸೀರ್‌ ಖಾನ್‌ ಪಠಾಣ ಅವರ ಹೆಸರು ಮಾತ್ರ ಇವೆ ಎಂದು ಸುದ್ದಿಗೋಷ್ಠಿ ಬಳಿಕ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿ.ಪಂ. ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಎಸ್.ವಿ.ಪಾಟೀಲ, ಎಂ.ಎಂ.ಮೈದೂರ, ಡಾ.ಸಂಜಯ ಡಾಂಗೆ, ಪ್ರಕಾಶ ಹಾದಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.