ರಟ್ಟೀಹಳ್ಳಿ: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯ ನಂತರ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ನಡೆಸಿದ್ದ ಪ್ರಯತ್ನ ಯಶಸ್ವಿಯಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ನಿರ್ಣಾಯಕ ಪಾತ್ರ ವಹಿಸಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರನ್ನು ಪಕ್ಷಕ್ಕೆ ಸೆಳೆಯಲು ಪಕ್ಷ ಸಫಲರಾಗಿದೆ.
ಹಾವೇರಿ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಹೀಗಾಗಿ, ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯೂ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರಿಂದ ಮಾಹಿತಿ ಪಡೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಮಧ್ಯಪ್ರವೇಶಿಸಿ, ಪಕ್ಷೇತರ ಅಭ್ಯರ್ಥಿಯನ್ನು ತಮ್ಮತ್ತ ಸೆಳೆದಿದ್ದಾರೆ.
ಪಟ್ಟಣ ಪಂಚಾಯಿತಿಯ 15 ವಾರ್ಡ್‌ಗಳ ಪೈಕಿ 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಹಾಗೂ 6 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದರು. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸಹ ಗೆಲುವು ಸಾಧಿಸಿ, ನಿರ್ಣಾಯಕ ಸ್ಥಾನದಲ್ಲಿದ್ದರು.
ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ಗೆ ಒಂದು ಸ್ಥಾನದ ಅಗತ್ಯವಿತ್ತು. ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಅವರು ತಮ್ಮ ಕ್ಷೇತ್ರದಲ್ಲಿರುವ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯ ಅಧಿಕಾರ ಪಡೆಯಲು ಪ್ರಯತ್ನ ಆರಂಭಿಸಿದ್ದರು. ಅದರಂತೆ, 15ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಲಲಿತಾ ಚನ್ನಗೌಡ್ರ ಅವರ ಬೆಂಬಲ ಪಡೆಯಲು ಮುಂದಾಗಿದ್ದರು.
ಅಭ್ಯರ್ಥಿ ಲಲಿತಾ ಅವರ ಮಗ ಶಂಕರಗೌಡ ಜೊತೆ ಮಾತುಕತೆ ನಡೆಸಿದ್ದ ಶಾಸಕ, ‘ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಪಕ್ಷಕ್ಕೆ ಬೆಂಬಲ ನೀಡಿದರೆ, ರಟ್ಟೀಹಳ್ಳಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ’ ಎಂದಿದ್ದರು. ಇದಾದ ನಂತರ, ಸ್ವತಃ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸಹ ಶಂಕರಗೌಡ ಅವರನ್ನು ಭೇಟಿಯಾಗಲು ತೀರ್ಮಾನಿಸಿದ್ದರು.
ಶಂಕರಗೌಡ ಅವರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದ ಶಾಸಕ ಬಣಕಾರ ಹಾಗೂ ಕಾಂಗ್ರೆಸ್ ಮುಖಂಡರು, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕರಗೌಡ ಅವರನ್ನು ಅಭಿನಂದಿಸಿ, ಪಕ್ಷಕ್ಕೆ ಬೆಂಬಲ ನೀಡುವಂತೆ ಕೋರಿದರು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಶಂಕರಗೌಡ ಅವರನ್ನು ಮಾತನಾಡಿಸಿ, ಬೆಂಬಲ ಯಾಚಿಸಿದ್ದರು. ಇದಾದ ಬಳಿಕ, ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಶಂಕರಗೌಡ ಅವರು ಭರವಸೆ ನೀಡಿದ್ದಾಗಿ ಗೊತ್ತಾಗಿದೆ.
‘ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಖುದ್ದಾಗಿ ಪಕ್ಷೇತರ ಅಭ್ಯರ್ಥಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರಿಂದ ಪಕ್ಷೇತರ ಅಭ್ಯರ್ಥಿ ಬೆಂಬಲ ಸೂಚಿಸಿದ್ದಾರೆ. ಇಬ್ಬರೂ ಕಾಂಗ್ರೆಸ್ ಬಾವುಟ ಕೊಟ್ಟು ಪಕ್ಷೇತರ ಅಭ್ಯರ್ಥಿಯನ್ನು ಸ್ವಾಗತಿಸಿದ್ದಾರೆ. ಭವಿಷ್ಯದಲ್ಲಿ ಒಳ್ಳೆಯದಾಗುವುದಾಗಿಯೂ ಭರವಸೆ ಕೊಟ್ಟಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.
ಅಧಿಕಾರ ಹಿಡಿಯಲು ಪೈಪೋಟಿ | ಅಭ್ಯರ್ಥಿ ಮಗನಿಗೆ ಹೂಗುಚ್ಛ ಕೊಟ್ಟ ಸಿ.ಎಂ | ಪರ–ವಿರೋಧ ಚರ್ಚೆ
ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದು ಪ.ಪಂ ಅಧಿಕಾರ ಪಕ್ಕಕ್ಕೆ ಸಿಕ್ಕರೆ ಮತ್ತಷ್ಟು ಅನುಕೂಲವಾಗುತ್ತದೆ. ರಟ್ಟೀಹಳ್ಳಿಯೂ ಮಾದರಿಯಾಗಿ ರೂಪುಗೊಳ್ಳಲಿದೆಸಂಜೀವಕುಮಾರ ನೀರಲಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
‘ಅಧಿಕಾರ–ಹಣದ ಬಲ’
‘ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಬಹುಪಾಲು ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರ–ಹಣ ಬಲದಿಂದ ಪಕ್ಷೇತರ ಅಭ್ಯರ್ಥಿಯನ್ನು ತನ್ನತ್ತ ಸೆಳೆದಿದೆ’ ಎಂದು ಬಿಜೆಪಿ ಮುಖಂಡ ಬಿ.ಸಿ. ಪಾಟೀಲ ಆರೋಪಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಇಬ್ಬರೂ ಪಕ್ಷೇತರ ಅಭ್ಯರ್ಥಿಗಳು ನಮ್ಮ ಸಂಪರ್ಕದಲ್ಲಿದ್ದರು. ಆದರೆ ಗುರುವಾರ ಹೊಸ ಬೆಳವಣಿಗೆ ನಡೆದಿದೆ. ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಸಚಿವರು ಶಾಸಕರು ಹಾಗೂ ರಾಜ್ಯಮಟ್ಟದ ಮುಖಂಡರು ಪ್ರಚಾರ ಮಾಡಿದ್ದರು. ಈಗ ಅಧಿಕಾರ ಹಿಡಿಯುವ ಉದ್ದೇಶದಿಂದ ಪಕ್ಷೇತರ ಅಭ್ಯರ್ಥಿಗೆ ಹಣ–ಅಧಿಕಾರದ ಆಮಿಷವೊಡ್ಡಿರಬಹುದು’ ಎಂದು ಹೇಳಿದರು.
ಬಿಜೆಪಿಗೆ ಮುಖಭಂಗ
ಮಾಜಿ ಸಚಿವರೂ ಆಗಿರುವ ಬಿಜೆಪಿ ಮುಖಂಡ ಬಿ.ಸಿ.ಪಾಟೀಲ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷದ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದ್ದರು. ಆದರೆ 15ರಲ್ಲಿ 6 ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು ಸಹ ಬಿಜೆಪಿ ಪರವಾಗಿರುವ ಬಗ್ಗೆ ಪಕ್ಷದ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಈಗ ಒಬ್ಬ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಪರವಾಗಿದ್ದಾರೆ. ಇದರಿಂದಾಗಿ ಬಿಜೆಪಿಗೆ ಮುಖಭಂಗವಾಗಿದೆ. ಪಕ್ಷೇತರ ಅಭ್ಯರ್ಥಿಯ ಮಗ ಶಂಕರಗೌಡ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯನ್ನು ಭೇಟಿಯಾಗಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರ ಪರ–ವಿರೋಧ ಚರ್ಚೆಗಳೂ ಆರಂಭವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.