ರಾಣೆಬೆನ್ನೂರು: ‘ಸೇವಂತಿಗೆ ನಾಡು’ ಎಂದೇ ಪ್ರಖ್ಯಾತಿ ಪಡೆದಿರುವ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಬಳಿ ಕುಮಧ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜು, ಪ್ರತಿ ವರ್ಷ ಮಳೆಗಾಲದಲ್ಲಿ ನಾಲ್ಕೈದು ಬಾರಿ ಸಂಪರ್ಕ ಕಡಿತಗೊಳ್ಳುತ್ತದೆ.
ಸೇತುವೆ ಎತ್ತರ ಕಡಿಮೆ ಇದ್ದು, ಎದುರುಗಡೆ ವಾಹನಗಳು ಬಂದರೆ, ಬದಿಗೆ ಸರಿಯಲು ಆಗುವುದಿಲ್ಲ. ಮಳೆಗಾಲದಲ್ಲಿ ಪದೇ ಪದೇ ಸೇತುವೆ ಮುಳುಗಡೆಯಾಗುತ್ತದೆ. ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ನೀರಿನ ರಭಸಕ್ಕೆ ಬೈಕ್ ಸವಾರರು ಕೊಚ್ಚಿಹೋದ ಘಟನೆಗಳೂ ನಡೆದಿವೆ.
ಲಿಂಗದಹಳ್ಳಿಯು ರಾಣೆಬೆನ್ನೂರಿನಿಂದ 16 ಕಿ.ಮೀ., ಹಾವೇರಿ ಜಿಲ್ಲಾ ಕೇಂದ್ರದಿಂದ 52 ಕಿ.ಮೀ. ದೂರದಲ್ಲಿದೆ. ಮಳೆಗಾಲದಲ್ಲಿ ಸೇತುವೆ ಮುಳುಗಡೆ ಆಗುವುದರಿಂದ ಹೊಳೆಆನ್ವೇರಿ, ಕೋಟಿಹಾಳ ಮಾರ್ಗವಾಗಿ 32 ಕಿ.ಮೀ. ಸುತ್ತುವರಿದು ಜನರು ಪ್ರಯಾಣಿಸಬೇಕಿದೆ.
‘ರೈತರು ನೂರಾರು ಎಕರೆಯಲ್ಲಿ ಬೆಳೆದ ತರಕಾರಿ, ಸೇವಂತಿಗೆ ಹೂಗಳನ್ನು ಮಾರಾಟ ಮಾಡಲು ವಾಹನಗಳ ಸಂಪರ್ಕವಿಲ್ಲದಾಗ ನಷ್ಟ ಅನುಭವಿಸಿದ್ದೇವೆ. ದಾವಣಗೆರೆ, ಬೆಂಗಳೂರು, ಮೈಸೂರು, ಕೃಷ್ಣಗಿರಿ, ಬೆಳಗಾವಿ, ಹಾವೇರಿ ಜಿಲ್ಲೆಗಳಿಗೆ ಸಾಗಿಸಲು, ಸುತ್ತುವರಿದು ಹೋಗಬೇಕಿದೆ. ರಸ್ತೆಯೂ ಸರಿ ಇಲ್ಲ. ವಾಹನದವರು ಹೆಚ್ಚು ಬಾಡಿಗೆ ಕೇಳುತ್ತಾರೆ. ಸೇತುವೆ ಎತ್ತರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ’ ಎಂದು ರೇವಣೆಪ್ಪ ಚಾಕ್ರಿ ಹೇಳಿದರು.
‘ಸೇತುವೆ ಎತ್ತರಗೊಳಿಸಲು ಆಗ್ರಹಿಸಿ ಅನೇಕ ಬಾರಿ ಶಾಸಕರು, ಸಂಸದರಿಗೆ ಮನವಿ ಮಾಡಿದ್ದೇವೆ. ಸೇತುವೆ ಸಂಪರ್ಕ ಕಡಿತಗೊಂಡಾಗ ಚುನಾಯಿತು ಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಾರೆ. ಆದರೆ, ಏನೂ ಕ್ರಮಕೈಗೊಂಡಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಪೂಜಾರ ತಿಳಿಸಿದರು.
‘ಸೇತುವೆ ಮುಳುಗಡೆಯಾದಾಗ ಶವ ಸಂಸ್ಕಾರಕ್ಕೂ ಪರದಾಡುವಂತಾಗಿದೆ. ನದಿ ಸಮೀಪದ ಜಮೀನುಗಳಿಗೆ ನೀರು ನುಗ್ಗಿ, ಬೆಳೆಗಳು ಜಲಾವೃತಗೊಳ್ಳುವುದರಿಂದ ರೈತರು ಸಾಕಷ್ಟು ಹಾನಿ ಅನುಭವಿಸುವಂತಾಗಿದೆ. ಸೊಪ್ಪು, ಸೇವಂತಿಗೆ, ಬೆಳ್ಳುಳ್ಳಿ, ಈರುಳ್ಳಿ ಬೆಳೆಗಳು ಕೊಳೆತು ಹೋಗುತ್ತವೆ’ ಎಂದು ನಿಂಗಪ್ಪ ಬೈರಣ್ಣನವರ ಹೇಳಿದರು.
‘ದಕ್ಷಿಣ ಭಾರತದ ಅತಿ ದೊಡ್ಡ ಹಾಗೂ ಏಕೈಕ ಸ್ಪಟಿಕ ಲಿಂಗ ದೇವಸ್ಥಾನ ಇಲ್ಲಿದೆ. ಮಳೆಗಾಲದಲ್ಲಿ ಬಸ್ ಸೌಲಭ್ಯ ಇಲ್ಲದಾಗ ಇಲ್ಲಿಗೆ ಭಕ್ತರು ಭೇಟಿ ನೀಡಲು ತೊಂದರೆಯಾಗುತ್ತದೆ’ ಮಲ್ಲೇಶಪ್ಪ ಜಾಧವ ತಿಳಿಸಿದರು.
ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಸೇತುವೆ ಎತ್ತರಗೊಳಿಸಲು ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಮಾಡಿದ್ದೇವೆ. ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಶೀಲಾ ಸುರೇಶ ಉಜ್ಜಪ್ಪನವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಹಳೇ ಸೇತುವೆಯಾದ್ದರಿಂದ ದುರಸ್ತಿ ಇದ್ದೇ ಇರುತ್ತದೆ. ಅನುದಾನ ನೋಡಿಕೊಂಡು ದುರಸ್ತಿಗೆ ಕ್ರಮ ವಹಿಸಲಾಗುವುದು. ಬ್ಯಾರೇಜ್ ಎತ್ತರಗೊಳಿಸುವ ಸಂಬಂಧ ಈವರೆಗೆ ಅರ್ಜಿ ಸಲ್ಲಿಕೆಯಾಗಿಲ್ಲ.
ಮಣಿಕಂಠ ನಾಯಕ ಸೆಕ್ಷನ್ ಅಧಿಕಾರಿ ಸಣ್ಣ ನೀರಾವರಿ ಇಲಾಖೆ
‘ಶಿಕ್ಷಣ ಚಿಕಿತ್ಸೆಗೂ ತೊಂದರೆ’
‘ಲಿಂಗದಹಳ್ಳಿಯಿಂದ ರಾಣೆಬೆನ್ನೂರು ಹಾವೇರಿ ಹಲಗೇರಿಯ ಶಾಲಾ–ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ನಿತ್ಯ ಹೋಗುತ್ತಾರೆ. ನದಿ ನೀರಿನ ಹರಿವು ಹೆಚ್ಚಾಗಿ ಸೇತುವೆ ಜಲಾವೃತ ಆದಾಗ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ಆರೋಗ್ಯದಲ್ಲಿ ವ್ಯತ್ಯಯ ಆದಾಗ ಆಂಬುಲೆನ್ಸ್ ಕೂಡ ಬರಲು ಆಗುವುದಿಲ್ಲ’ ಎಂದು ರೈತ ಅರುಣಕುಮಾರ ಬಿಷ್ಟಣ್ಣನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.