ADVERTISEMENT

ಬಂಜಾರ ಗುರುಪೀಠ ಸ್ವಾಮೀಜಿ ಕೈಗೊಂಡಿದ್ದ 62 ದಿನಗಳ ಮೌನವ್ರತ ಅನುಷ್ಠಾನ ಮುಕ್ತಾಯ

ಲೋಕ ಕಲ್ಯಾಣಾರ್ಥ ಮೌನವ್ರತ ಕೈಗೊಂಡಿದ್ದ ಬಂಜಾರ ಗುರುಪೀಠದ ಕುಮಾರ ಮಹಾರಾಜರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 12:01 IST
Last Updated 11 ಸೆಪ್ಟೆಂಬರ್ 2020, 12:01 IST
62 ದಿನಗಳ ಮೌನವ್ರತ ಕೈಗೊಂಡು ಗುರುವಾರ ಗುಹೆಯಿಂದ ಹೊರಬಂದ ಬಂಜಾರ ಗುರು ಪೀಠದ ಕುಮಾರ ಮಹಾರಾಜರು
62 ದಿನಗಳ ಮೌನವ್ರತ ಕೈಗೊಂಡು ಗುರುವಾರ ಗುಹೆಯಿಂದ ಹೊರಬಂದ ಬಂಜಾರ ಗುರು ಪೀಠದ ಕುಮಾರ ಮಹಾರಾಜರು   

ಸವಣೂರ:ಲೋಕ ಕಲ್ಯಾಣಕ್ಕಾಗಿ, ಯೋಧರ ಹಾಗೂ ರೈತರ ಒಳತಿಗಾಗಿ ತಾಲ್ಲೂಕಿನ ಕೃಷ್ಣಾಪುರದ ಬಂಜಾರ ಗುರುಪೀಠದ ಕುಮಾರ ಮಹಾರಾಜರು ಗಾಳಿ, ಬೆಳಕು ಬಾರದ ಗುಹೆಯಲ್ಲಿ ಕೈಗೊಂಡಿದ್ದ 62 ದಿನಗಳ ಮೌನವ್ರತ ಅನುಷ್ಠಾನ ಗುರುವಾರ ಮುಕ್ತಾಯಗೊಳಿಸಿದರು.

ಈ ಹಿನ್ನೆಲೆಯಲ್ಲಿ ಶ್ರೀಗುರು ಪೀಠದಲ್ಲಿ ಭಕ್ತರು ವಿವಿಧ ಧಾರ್ಮಿಕ ಕೈಂಕರ್ಯಗಳನ್ನು, ದಾಸೋಹ ನಡೆಸಿದರು.
ಮೌನವ್ರತ ಆರಂಭ ದಿನ ಸ್ವಾಮೀಜಿ ಗುಹೆ ಪ್ರವೇಶದ ನಂತರ ಇಟ್ಟಿಗೆಯಿಂದ ಗುಹೆಯ ಬಾಗಿಲನ್ನು ಬಂದ್ ಮಾಡಲಾಗಿತ್ತು.

ಮೌನವ್ರತ ಅನುಷ್ಠಾನ ಮುಕ್ತಾಯಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ ಮಹಾರಾಜರು, ‘ಜಗತ್ತಿನ ಕಲ್ಯಾಣಕ್ಕಾಗಿ ಕೈಗೊಂಡ ಮೌನವ್ರತ ಫಲಕೊಡಲಿದೆ. ಸಾಂಕ್ರಾಮಿಕ ರೋಗದಿಂದ ಪರದಾಟ ನಿಲ್ಲಲಿದೆ. ಮುಂದಿನ ದಿನಮಾನದಲ್ಲಿ ರೈತರಿಗೆ ಹಾಗೂ ಯೋಧರಿಗೆ ಒಳಿತಾಗಲಿದೆ’ ಎಂದರು.

ADVERTISEMENT

ಮೌನ ಅನುಷ್ಠಾನ ಮುಕ್ತಾಯದ ಸರಳ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ, ಯೋಗ ಮಾಡಿದವರು ಅಮರರಾಗುತ್ತಾರೆ. ಆದ್ದರಿಂದ, ಲೋಕ ಕಲ್ಯಾಣಕ್ಕಾಗಿ ಸಾಧು ಸಂತರ ಇಂಥ ಆಚರಣೆಯಿಂದ ರಾಷ್ಟ್ರ ಸುಭದ್ರವಾಗಿದೆ‘ ಎಂದರು.

ಶಿರಹಟ್ಟಿ ಜಗದ್ಗುರು ಪಕ್ಕೀರಸಿದ್ದರಾಮ ಸ್ವಾಮೀಜಿ, ಹತ್ತಿಮತ್ತೂರ ನಿಜಗುಣ ಶಿವಯೋಗಿ ಸ್ವಾಮೀಜಿ, ಬಹದ್ದೂರ ಭಂಡ ಕೊಪ್ಪಳ ಶ್ರೀಗೋಸಾಯಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೃಷ್ಣ ಸುಣಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.