ADVERTISEMENT

₹10 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿ: ವಿರೂಪಾಕ್ಷಪ್ಪ ಬಳ್ಳಾರಿ

‘ನಮ್ಮೂರು ನಮ್ಮ ಕೆರೆ’ ಯೋಜನೆ: ಕಬ್ಬೂರ ಹೊಲಗಟ್ಟೆ ಕೆರೆ ಹಸ್ತಾಂತರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 14:55 IST
Last Updated 17 ಜೂನ್ 2022, 14:55 IST
ಹಾವೇರಿ ತಾಲ್ಲೂಕು ಕಬ್ಬೂರ ಗ್ರಾಮದಲ್ಲಿ ಜರುಗಿದ ಹೊಲಗಟ್ಟೆ ಕೆರೆ ಹಸ್ತಾಂತರ ಕಾರ್ಯಕ್ರಮದ ವೇಳೆ ಕೆರೆಯ ನಾಮಫಲಕ ಅನಾವರಣಗೊಳಿಸಲಾಯಿತು
ಹಾವೇರಿ ತಾಲ್ಲೂಕು ಕಬ್ಬೂರ ಗ್ರಾಮದಲ್ಲಿ ಜರುಗಿದ ಹೊಲಗಟ್ಟೆ ಕೆರೆ ಹಸ್ತಾಂತರ ಕಾರ್ಯಕ್ರಮದ ವೇಳೆ ಕೆರೆಯ ನಾಮಫಲಕ ಅನಾವರಣಗೊಳಿಸಲಾಯಿತು   

ಹಾವೇರಿ: ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ಕೆರೆಗಳನ್ನು ಮುಂಬರುವ ದಿನಗಳಲ್ಲಿ ಸುರಕ್ಷಿತ ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಗ್ರಾಮಸ್ಥರು ಹೆಚ್ಚು ಕಾಳಜಿ ವಹಿಸಬೇಕು ಎಂದು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ತಾಲೂಕಿನ ಕಬ್ಬೂರ ಗ್ರಾಮದ ಸಂತೆ ಮಾರುಕಟ್ಟೆ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಕಬ್ಬೂರ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಪುನಶ್ಚೇತನಗೊಳಿಸಲಾದ 443ನೇ ಕಬ್ಬೂರ ಹೊಲಗಟ್ಟೆ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆರೆ ಮಲಿನಗೊಳಿಸಬೇಡಿ: ಕೆರೆಯ ಪಕ್ಕದಲ್ಲಿಯೇ ವಾರದ ಸಂತೆ ಮಾರುಕಟ್ಟೆ ಇರುವುದರಿಂದ ವ್ಯಾಪಾರಸ್ಥರು ತ್ಯಾಜ್ಯವನ್ನು ಕೆರೆಗೆ ಎಸೆಯುವ ಸಾಧ್ಯತೆಗಳಿವೆ. ಆದ್ದರಿಂದ ಪವಿತ್ರ ಗಂಗೆಯನ್ನು ಮಲಿನ ಮಾಡದೇ ಶುದ್ಧವಾಗಿಟ್ಟುಕೊಳ್ಳುವಲ್ಲಿ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು.

ADVERTISEMENT

ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ಸರ್ಕಾರ ಮಾಡದೇ ಇರುವಂತಹ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ. ಕೆರೆಗಳನ್ನು ಸಂರಕ್ಷಣೆ ಮಾಡಿದರೆ ಅಂತರ್ಜಲಮಟ್ಟ ಹೆಚ್ಚಳವಾಗುತ್ತಿದ್ದು, ಗ್ರಾಮಸ್ಥರು ಮಗುವಿನಂತೆ ಜೋಪಾನ ಮಾಡಬೇಕೆಂದು ಸಲಹೆ ನೀಡಿದರು.

ಹೈನುಗಾರಿಕೆ ಪುನಃಶ್ಚೇತನ: ಕೆಎಂಎಫ್ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ ಮಾತನಾಡಿ, ವೀರೇಂದ್ರ ಹೆಗ್ಗಡೆ ಅವರು ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಹಾಲು ಉತ್ಪಾದಕರ ಸಂಘಕ್ಕೆ 100 ಸಂಘಕ್ಕೆ ₹10 ಕೋಟಿ ನೀಡಿ ಹೈನುಗಾರಿಕೆಯನ್ನು ಪುನಶ್ಚೇತನಗೊಳಿಸಿದ್ದಾರೆ. ಇದೀಗ ಪ್ರತಿದಿನ ಜಿಲ್ಲೆಯಲ್ಲಿ 1.40 ಲಕ್ಷ ಲೀ.ಹಾಲು ಶೇಖರಣೆಯಾಗುತ್ತಿದೆ ಎಂದರು.

‘70 ವರ್ಷಗಳಿಂದ ಹೂಳು ತೆಗೆಯದೇ ಹಾಗೆ ಇದ್ದ ಕೆರೆಯನ್ನು ಧರ್ಮಸ್ಥಳ ಯೋಜನೆ ವತಿಯಿಂದ ₹4.80 ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಳಿಸಿದ್ದೇವೆ. ಜತೆಗೆ ಗ್ರಾ.ಪಂ ಕೂಡ ಸಹಕಾರ ನೀಡಿದ್ದರಿಂದ ಒಟ್ಟು ₹10.80 ಲಕ್ಷಗಳಲ್ಲಿ ಕೆರೆ ಅಭಿವೃದ್ಧಿಗೊಳಿಸಲಾಗಿದೆ’ ಎಂದುಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಡಾ.ಎಲ್.ಎಚ್ ಮಂಜುನಾಥ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಮಾಳವ್ವ ಕರಿಗಾರ ನಾಮಫಲಕ ಅನಾವರಣಗೊಳಿಸಿದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕರಬಸಪ್ಪ ಹೊಸಳ್ಳಿ ಕೆರೆ ದಾಖಲೆಗಳನ್ನು ಸ್ವೀಕರಿಸಿದರು. ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಪುಟ್ಟಪ್ಪ ಗಿರೇಗೌಡ್ರ,ಗ್ರಾಪಂ ಪಿಡಿಒ ಮೌಲಾಸಾಬ್ ಯಲವಿಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.