ಹಾವೇರಿ: ‘ನಿಗದಿತ ಗುರಿಯಂತೆ 2022ನೇ ಮಾರ್ಚ್ ಅಂತ್ಯಕ್ಕೆ ಕಾಲೇಜು ಕಟ್ಟಡ ಪೂರ್ಣಗೊಳಿಸಬೇಕು. ನೂರಾರು ವಿದ್ಯಾರ್ಥಿಗಳು ವಸತಿಯೊಂದಿಗೆ ಕಾಲೇಜು ಶಿಕ್ಷಣ ಪಡೆಯುವುದರಿಂದ ಕಟ್ಟಡವು ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು’ ಎಂದು ಶಾಸಕ ನೆಹರು ಓಲೇಕಾರ ಸೂಚಿಸಿದರು.
ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ನಿರ್ಮಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಅವರು ಮಾತನಾಡಿದರು.
ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಸಾಕಷ್ಟು ಅನುದಾನ ಬಳಕೆ ಮಾಡುತ್ತಿದೆ. ಕಳ್ಳಿಹಾಳ ಬಳಿ 9.36 ಎಕರೆ ಜಾಗವನ್ನು ಸುಸಜ್ಜಿತವಾಗಿ ಎಲ್ಲ ಮೂಲಸೌಲಭ್ಯಗಳೊಂದಿಗೆ ಕಾಲೇಜು ಶಿಕ್ಷಣ ದೊರಕಿಸಲು ಸರ್ಕಾರ ₹23.75 ಕೋಟಿ ಬಿಡುಗಡೆಗೊಳಿಸಿದೆ. ಈ ಕಾಲೇಜು ರಾಜ್ಯದಲ್ಲಿಯೇ ಕಟ್ಟಡ ನಿರ್ಮಾಣ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಮಾದರಿಯಾಗಬೇಕು ಎಂದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕೆ.ಆರ್.ಇ.ಐ.ಎಸ್) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ. ನಟರಾಜ ಮಾತನಾಡಿ, ‘ಈ ಕಾಲೇಜು 3,797.81 ಚ.ಮೀ.ಗಳಲ್ಲಿ ನಿರ್ಮಾಣವಾಗುತ್ತಿದ್ದು, ಬೋಧನಾ ಕೊಠಡಿ, ಸೆಮಿನಾರ್ ಕೊಠಡಿ, ಪ್ರಾಂಶುಪಾಲರ ಕೊಠಡಿ, ಸಿಬ್ಬಂದಿ ಕೊಠಡಿ, ಪ್ರಯೋಗಾಲಯ, ಗಣಕಯಂತ್ರ ಕೊಠಡಿ, ದಾಖಲೆಗಳ ಕೊಠಡಿ, ಶೌಚಗೃಹ, ಎನ್‌ಎಸ್‌ಎಸ್ ಕೊಠಡಿ, ಆಟದ ವಸ್ತುಗಳ ಕೊಠಡಿ, ಉಸ್ತುವಾರಿ ಕೊಠಡಿಗಳನ್ನೊಂಡು ನಾಲ್ಕು ಬ್ಲಾಕ್‌ಗಳಲ್ಲಿ ನಿರ್ಮಾಣವಾಗುತ್ತಿದೆ’ ಎಂದರು.
ಪ್ರಾಚಾರ್ಯ ಡಾ.ರಮೇಶ ತೆವರಿ ಮಾತನಾಡಿ, ‘ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 234 ಬಾಲಕರು, 126 ಬಾಲಕಿಯರು ಸೇರಿ ಒಟ್ಟು 360 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುವುದು. ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ ವಸತಿ ಕೊಠಡಿಗಳು, ಮೇಲ್ವಿಚಾರಕರ ಕೊಠಡಿ, ಪ್ರಥಮ ಚಿಕಿತ್ಸಾ ಕೊಠಡಿ, ಸ್ನಾನಗೃಹಗಳು, ಬಟ್ಟೆ ತೊಳೆಯುವ ಸ್ಥಳ ಹಾಗೂ ವಿವಿಧೋದ್ದೇಶ ಕೊಠಡಿ ಸೌಲಭ್ಯಗಳಿರಲಿವೆ. ಈಗಾಗಲೇ ಕಾಲೇಜು ನಗರದ ಮುನ್ಸಿಪಲ್ ಹೈಸ್ಕೂಲ್ ಕಟ್ಟಡದಲ್ಲಿ ಆರಂಭಗೊಂಡಿದೆ’ ಎಂದರು.
ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದರ್ಶನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.