ADVERTISEMENT

ಖಾಸಗೀಕರಣದ ಭೂತವನ್ನು ಹೊರದೂಡೋಣ: ವಿಜಯಕುಮಾರ ಮುದಕಣ್ಣನವರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 13:39 IST
Last Updated 17 ಫೆಬ್ರುವರಿ 2021, 13:39 IST
ಹಾವೇರಿಯ ಹೆಸ್ಕಾಂ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘಕ್ಕೆ ಆಯ್ಕೆಯಾದರನ್ನು ಸನ್ಮಾನಿಸಲಾಯಿತು 
ಹಾವೇರಿಯ ಹೆಸ್ಕಾಂ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘಕ್ಕೆ ಆಯ್ಕೆಯಾದರನ್ನು ಸನ್ಮಾನಿಸಲಾಯಿತು    

ಹಾವೇರಿ: ‘ನಾವೆಲ್ಲ ಕಾರ್ಮಿಕ ಚಳವಳಿಯನ್ನು ಇನ್ನಷ್ಟು ಗಟ್ಟಿಗೊಳಿಸಿ, ಮನೆ ಬಾಗಿಲಿಗೆ ಬಂದ ಖಾಸಗೀಕರಣದ ಭೂತವನ್ನು ಹೊರದೂಡಬೇಕಾಗಿದೆ. ಖಾಸಗೀಕರಣದಿಂದ ನೌಕರರಿಗೆ ಮತ್ತು ವಿಶೇಷವಾಗಿ ರೈತರು, ಗ್ರಾಹಕರಿಗೆ ತೊಂದರೆಯಾಗಲಿದೆ’ ಎಂದುಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಅಭಿಪ್ರಾಯಪಟ್ಟರು.

ನಗರದ ಹೆಸ್ಕಾಂ ಸಮುದಾಯ ಭವನದಲ್ಲಿಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ನಮ್ಮ ಇಲಾಖೆ ಉಳಿದರೆ ನೌಕರರ ಸಂಘವೂ ಉಳಿಯುತ್ತದೆ. ಶ್ರಮಜೀವಿಗಳ ಇಲಾಖೆಯಾದ ಕೆಇಬಿಯಲ್ಲಿ ನೌಕರರ ಶೋಷಣೆ ಆಗಬಾರದು. ಸಂಘವನ್ನು ಉಳಿಸಿ, ಇಲಾಖೆಯನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು.

ADVERTISEMENT

ಬೆಂಗಳೂರಿನಲ್ಲಿ ಜರುಗಿದ ಕ.ವಿ.ಪ್ರ.ನಿ ನೌಕರರ ಸಂಘದ 21ನೇ ತ್ರೈವಾರ್ಷಿಕ ಮಹಾ ಅಧಿವೇಶನದಲ್ಲಿ ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿಯಾಗಿ ರಾಣೆಬೆನ್ನೂರಿನ ಎಚ್.ಎಸ್. ಬಸವರಾಜಯ್ಯ ಮತ್ತು ಕೇಂದ್ರ ಸಮಿತಿ ಸದಸ್ಯರಾಗಿ ಹಾವೇರಿಯ ಎ.ಕೆ. ಯಮನೂರ ಕೂಡ ಆಯ್ಕೆಯಾದರು. ಹಾವೇರಿ ಮತ್ತು ರಾಣೇಬೆನ್ನೂರ ಸ್ಥಳೀಯ ಸಮಿತಿಗಳು ಜಂಟಿಯಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮೂವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಿಭಾಗಾಧಿಕಾರಿ ಎಸ್. ವೀರಣ್ಣ ವಹಿಸಿದ್ದರು.ಮಾಜಿ ಸಂಘಟನಾ ಕಾರ್ಯದರ್ಶಿಗಳಾದ ಸಿ.ಎನ್ ಬಡ್ನಿ, ಅಶೋಕ ಸಾಳುಂಕೆ, ಲೆಕ್ಕಾಧಿಕಾರಿ ಅಮಾನುಲ್ಲಾ, ಪುಷ್ಪಾ ಹೆಬ್ಬಾಳ, ಹಾನಗಲ್ಲ ರೈತ ಸಂಘದ ಮರಿಗೌಡಾ ಪಾಟೀಲ ಇದ್ದರು.ಎಸ್.ವಿ. ಕುಲಕರ್ಣಿ ಸ್ವಾಗತಿಸಿದರು. ಬಸವರಾಜ ಕೋಟಿ ಕಾರ್ಯಕ್ರಮ ನಡೆಸಿಕೊಟ್ಟರು. ಕೆ.ಎನ್. ಅಗಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.