ADVERTISEMENT

ಚುನಾವಣೆ: 5.40 ಲಕ್ಷ ವಶ

ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 16:03 IST
Last Updated 10 ಏಪ್ರಿಲ್ 2019, 16:03 IST
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ 
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ    

ಹಾವೇರಿ: ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ₹4.06 ಲಕ್ಷ ಮೌಲ್ಯದ 1,236 ಲೀಟರ್‌ ಮದ್ಯ, ₹3 ಲಕ್ಷದ ಮಾದಕ ವಸ್ತು ಹಾಗೂ ₹33.32 ಲಕ್ಷದ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ₹5.40 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಹಾಗೂ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ಜಿಲ್ಲೆಯಲ್ಲಿ 187 ಸೆಕ್ಟರ್ ಅಧಿಕಾರಿಗಳ ತಂಡ, 46 ಎಫ್.ಎಸ್.ಟಿ. ತಂಡ, 18 ಎಸ್.ಎಸ್.ಟಿ. ತಂಡ, 24 ವಿ.ಎಸ್.ಟಿ. ತಂಡ, 29 ವಿವಿಟಿ ತಂಡ, ಎಂಟು ಲೆಕ್ಕ ಪರಿಶೋಧನಾ ತಂಡ, ಎಂಟು ಜನ ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಿ–ವಿಜಿಲ್‌ ಮೂಲಕ 51 ದೂರುಗಳು ಬಂದಿದ್ದು, 29 ದೂರುಗಳು ಖಚಿತವಾಗಿವೆ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿಇಎಲ್ ಎಂಜಿನಿಯರ್‌ಗಳ ಸಹಕಾರದ ಮೂಲಕ ಏ.13ರಂದು ಮತ ಯಂತ್ರಗಳಿಗೆ ಮತಪತ್ರ ಅಳವಡಿಕೆ ಕಾರ್ಯ ನಡೆಯಲಿದೆ ಎಂದರು.

ADVERTISEMENT

ಕಣದಲ್ಲಿ 10 ಅಭ್ಯರ್ಥಿಗಳಿದ್ದು, ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ. ಚುನಾವಣಾ ವೆಚ್ಚ, ಮಾದರಿ ನೀತಿ ಸಂಹಿತೆ ಕುರಿತಂತೆ ಮಾಹಿತಿ ನೀಡಲಾಗಿದೆ. ಕೇಂದ್ರ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಇವಿಎಂಗಳ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಹಾಗೂ ವಿ.ವಿ.ಪ್ಯಾಟ್‌ಗಳ ಎರಡನೇ ಹಂತದ ರ‍್ಯಾಂಡಮೈಜೇಶನ್ ಕಾರ್ಯ ಪೂರ್ಣಗೊಳಿಸಲಾಗಿದೆ. ಮತಗಟ್ಟೆ ಸಿಬ್ಬಂದಿ ರ‍್ಯಾಂಡಮೈಜೇಶನ್ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು, ಎರಡನೇ ಹಂತದ ತರಬೇತಿಯನ್ನು ಏ.13 ಮತ್ತು 14ರಂದು ತಾಲ್ಲೂಕು ಕೇಂದ್ರಗಳಲ್ಲಿ ನಡೆಸಲಾಗುವುದು ಎಂದರು.

ಮಸ್ಟರಿಂಗ್ ಕೇಂದ್ರದಿಂದ ಸಿಬ್ಬಂದಿ ಹಾಗೂ ಪರಿಕರ ಸಾಗಾಣಿಕೆಗಾಗಿ 286 ಮಾರ್ಗಗಳನ್ನು ರೂಪಿಸಲಾಗಿದೆ. 224 ಕೆ.ಎಸ್.ಆರ್.ಟಿ.ಸಿ. ಬಸ್, ಏಳು ಮಿನಿ ಬಸ್, 33 ಮ್ಯಾಕ್ಸಿ ಕ್ಯಾಬ್ ಹಾಗೂ ಟೆಂಪೊ, 29 ಕ್ರೂಜರ್ ಹಾಗೂ ಜೀಪ್‌ಗಳನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.