ಹಾವೇರಿ: ಮಕ್ಕಳ ದಾಖಲಾತಿಯ ಪ್ರಮಾಣ ಕುಸಿತದಿಂದ ಮುಚ್ಚುವ ಹಂತದಲ್ಲಿದ್ದ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿಸಲು ವೈದ್ಯ ಡಾ. ಮಹಾಂತೇಶ ಹುಚ್ಚಣ್ಣನವರ ಮತ್ತು ಗ್ರಾಮಸ್ಥರು ಪಣ ತೊಟ್ಟಿದ್ದು, ಇದಕ್ಕೆ ಪೂರಕವಾಗಿ ಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ.
2021ರಲ್ಲಿ ಮಾಕನೂರಿನ ಸರ್ಕಾರಿ ಶಾಲೆಯಲ್ಲಿ ಕೇವಲ 25 ವಿದ್ಯಾರ್ಥಿಗಳಿದ್ದರು. ವಿದ್ಯಾರ್ಥಿಗಳ ಪೋಷಕರು ಖಾಸಗಿ ಶಾಲೆಗಳತ್ತ ಆಸಕ್ತಿ ವಹಿಸುತ್ತಿರುವುದು ಕಂಡು, ಸರ್ಕಾರಿ ಶಾಲೆಯ ಶಿಕ್ಷಕರು ಆತಂಕಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಯೂ ಆಗಿರುವ ಡಾ. ಮಹಾಂತೇಶ ಹುಚ್ಚಣ್ಣನವರ ನೆರವಿಗೆ ಬಂದರು.
ವೈದ್ಯೆಯಾದ ಪತ್ನಿ ಜ್ಯೋತಿ ಜೊತೆ ‘ಆದರ್ಶ ಕ್ಲಿನಿಕ್’ ನಡೆಸುತ್ತಿರುವ ಮಹಾಂತೇಶ, ಶಾಲೆಗೆ 2021ರಲ್ಲಿ ಟಿವಿಯನ್ನು ದಾನ ಮಾಡಿದರು. ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ಆಗುತ್ತಿರುವುದು ಕಂಡು ಮರುಗಿದ ಅವರು, ಶಾಲೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಪಣ ತೊಟ್ಟರು. ದಾನದ ಮೊತ್ತವನ್ನು ಹೆಚ್ಚಿಸಿದರು.
ಮಳೆಯಾದಾಗ ಸೋರಿ, ಶಿಥಿಲಗೊಂಡ ಕಟ್ಟಡವನ್ನು ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆಗೂಡಿ ದುರಸ್ತಿಗೊಳಿಸಿದರು. ಗೋಡೆಗೆ ಬಣ್ಣ ಬಳಿದು, ಮಹನೀಯರ ಚಿತ್ರಗಳನ್ನು ಬಿಡಿಸಿ ಶಾಲೆಯ ಅಂದ ಹೆಚ್ಚಿಸಿದರು. ಗ್ರಾಮ ಮತ್ತು ತಾಲ್ಲೂಕು ಪಂಚಾಯಿತಿಯ ನೆರವು ಸಹ ಪಡೆದರು. ಹೊಸ ಟೈಲ್ಸ್, ಬೋರ್ಡ್, ಸುರಕ್ಷಿತ ಚಾವಣಿ ಮತ್ತು ಮೂಲಸೌಲಭ್ಯ ಎಲ್ಲವೂ ಶಾಲೆಗೆ ಲಭ್ಯವಾಯಿತು. ಮುಚ್ಚುವ ಹಂತದಲ್ಲಿದ್ದ ಶಾಲೆ, 2022ರಿಂದ ಹೊಸ ಕಳೆ ಪಡೆಯಿತು. ಪೋಷಕರ ಮನ ಗೆದ್ದಿತು.
‘ಎಲ್‌ಕೆಜಿಯಿಂದ 7ನೇ ತರಗತಿಯವರೆಗಿನ ಶಾಲೆಯಲ್ಲಿ ಇದ್ದ 25 ವಿದ್ಯಾರ್ಥಿಗಳ ಸಂಖ್ಯೆ ಈಗ 73ಕ್ಕೆ ಏರಿದೆ. ಸಂಖ್ಯೆ ಇನ್ನೂ ಹೆಚ್ಚಾಗಬಹುದು’ ಎಂದು ಶಾಲೆಯ ಪ್ರಭಾರ ಮುಖ್ಯಶಿಕ್ಷಕ ವಿಜಯಕುಮಾರ ಬಂಗಾರಿ ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಓದಿ ವೈದ್ಯನಾಗಿದ್ದೇನೆ. ಋಣ ತೀರಿಸುವೆ. ದುಡಿದ ಹಣದಲ್ಲಿ ಕೆಲ ಪಾಲನ್ನು ಶಾಲೆಗೆ ಮೀಸಲಿಟ್ಟಿದ್ದೇನೆಡಾ. ಮಹಾಂತೇಶ ಹುಚ್ಚಣ್ಣನವರ, ವೈದ್ಯ
‘ಶಾಲಾಭಿವೃದ್ಧಿ ಸಮಿತಿ ಮತ್ತು ದಾನಿಗಳ ನೆರವಿನಿಂದ ಎಲ್‌ಕೆಜಿ– ಯುಕೆಜಿ ಆರಂಭಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿತ್ತು. ಇದನ್ನು ಆಧರಿಸಿ ಮಹಾಂತೇಶ ಅವರು ಸರ್ಕಾರಿ ಶಾಲಾ ಕೊಠಡಿಯಲ್ಲಿ ತಮ್ಮದೇ ಹಣದಲ್ಲಿ 2023ರಿಂದ ಎಲ್‌ಕೆಜಿ,ಯುಕೆಜಿ ತರಗತಿ ಆರಂಭಿಸಿದ್ದಾರೆ. ಸದ್ಯ 25 ಮಕ್ಕಳು ಇದ್ದಾರೆ’ ಎಂದರು.
‘ಎಲ್‌ಕೆಜಿ, ಯುಕೆಜಿಯಲ್ಲಿ ಮಕ್ಕಳಿಗೆ ಪಾಠ ಮಾಡಲು ಅತಿಥಿ ಶಿಕ್ಷಕರೊಬ್ಬರಿಗೆ ವಾರ್ಷಿಕ ₹ 60 ಸಾವಿರ ವೇತನ, ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಪೆನ್, ಪೆನ್ಸಿಲ್ ಎಲ್ಲವನ್ನೂ ಮಹಾಂತೇಶ ಅವರೇ ಸ್ವಂತ ಹಣದಲ್ಲಿ ವ್ಯವಸ್ಥೆ ಮಾಡಿದ್ದಾರೆ. ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ಪ್ರೋತ್ಸಾಹ ನೀಡಲು ದತ್ತಿ ನಿಧಿ ಸ್ಥಾಪಿಸಿದ್ದಾರೆ. ಗ್ರಾಮದಲ್ಲಿರುವ ಪ್ರೌಢಶಾಲೆಗೂ ಅವರ ಕೊಡುಗೆಯಿದೆ’ ಎಂದು ಶಿಕ್ಷಕರು ಹಾಗೂ ಗ್ರಾಮಸ್ಥರು ತಿಳಿಸಿದರು.
ಡಾ. ಮಹಾಂತೇಶ ಹುಚ್ಚಣ್ಣನವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.