ADVERTISEMENT

ಜಂಗಮರ ಋಣ ನನ್ನ ಮೇಲೆ ಇದೆ: ಶಾಸಕ ಯಾಸೀರಅಹ್ಮದ ಖಾನ್ ಪಠಾಣ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 3:12 IST
Last Updated 21 ಜುಲೈ 2025, 3:12 IST
ಸವಣೂರು ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಭಾನುವಾರ ನಡೆದ ಬೇಡ ಜಂಗಮ ಸಮಾಜದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಂಗಮ ಸಮಾಜ ಭಾಂದವರನ್ನು ಸನ್ಮಾನಿಸಲಾಯಿತು
ಸವಣೂರು ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಭಾನುವಾರ ನಡೆದ ಬೇಡ ಜಂಗಮ ಸಮಾಜದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಂಗಮ ಸಮಾಜ ಭಾಂದವರನ್ನು ಸನ್ಮಾನಿಸಲಾಯಿತು   

ಸವಣೂರು: 'ಕ್ಷೇತ್ರದ ಜಂಗಮರ ಋಣ ನನ್ನ ಮೇಲೆ ಇದೆ. ಅದನ್ನು ತೀರಿಸಲು ಕ್ಷೇತ್ರದ ಎಲ್ಲ ಮಠ ಮಾನ್ಯಗಳ ಅಭಿವೃದ್ಧಿಗೆ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ ಮೂಲಕ ಋಣ ತೀರಿಸುತ್ತೇನೆ’ ಎಂದು ಶಾಸಕ ಯಾಸೀರಅಹ್ಮದ ಖಾನ್ ಪಠಾಣ ಭರವಸೆ ನೀಡಿದರು.

ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಭಾನುವಾರ ಜರುಗಿದ ಬೇಡ ಜಂಗಮ ಸಮಾಜದ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಂಗಮ ಸಮಾಜದವರು ಹೆಚ್ಚಿನ ಮತ ನೀಡುವ ಮೂಲಕ ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ಮಠಗಳ ಪರಂಪರೆಯ ನೆರಳಿನಲ್ಲಿ ಬೆಳೆದು ಸೇವೆ ಮಾಡಿಕೊಂಡು ಬಂದಂತ ವ್ಯಕ್ತಿ ನಾನು. ಜಂಗಮರ ಜನಸಂಖ್ಯೆ ಹೆಚ್ಚಾದಂತೆ ದೈವಭಕ್ತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ. ಆದ್ದರಿಂದ, ಜಂಗಮರ ಜನಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಬೇಕಿದೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ‘ಜಂಗಮ ಶಿವಸ್ವರೂಪಿ. ಸಮಾಜದ ಕೆಟ್ಟದ್ದನ್ನ ಹಾಕಿಸಿಕೊಳ್ಳಲು ಶಿವ ಜೋಳಿಗೆ ಹಾಕಿಸಿದ್ದಾನೆ. ಸಮಾಜದಲ್ಲಿರುವ ಕೆಟ್ಟದ್ದನ್ನು ಹೊಡೆದೋಡಿಸಲು ಶಿವನು ಬೆತ್ತ ನೀಡಿದ್ದಾನೆ. ಹೀಗಾಗಿ ಜಂಗಮರನ್ನು ಎದುರು ಹಾಕಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ’ ಎಂದರು.

ಜಂಗಮ ಸಮಾಜದ ಕಾರ್ಯದರ್ಶಿ ಶಂಕ್ರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ರಾಜ್ಯ ಎ.ಪಿ.ಎಂ.ಸಿ ಮಾರುಕಟ್ಟೆ ಕಾನೂನು ಸಲಹೆಗಾರ, ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಎಸ್.ಬಿ.ವಸ್ತ್ರದಮಠ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬೇಡ ಜಂಗಮ ಸಮಾಜ ಸೇವಾ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರಯ್ಯ ಗುಂಡೂರಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೀದರ್‌ ಜಿಲ್ಲೆಯ ಸರಿಗಮಪ ಸೀಸನ್ 21 ವಿಜೇತೆ ಶಿವಾನಿ ಶಿವದಾಸಸ್ವಾಮಿ ಹಾಗೂ ಕುಟುಂಬಸ್ಥರಿಂದ ಸಂಗೀತ ಸೇವೆ ಜರುಗಿತು.

ಗುರುಶಾಂತಯ್ಯ ಹಿರೇಮಠ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ನಂದೀಶ ಕಂಬಾಳಿಮಠ, ಉಮೇಶ ಕಲ್ಮಠ, ಶಿವಕುಮಾರಸ್ವಾಮಿ ಅಡವಿಸ್ವಾಮಿಮಠ ಮುಂತಾದವರು ಪಾಲ್ಗೊಂಡಿದ್ದರು.

ಜಂಗಮ ಶಿವಸ್ವರೂಪಿ. ಸಮಾಜದ ಕೊಳೆ ಹಾಕಿಸಿಕೊಳ್ಳಲು ನಮಗೆ ಜೋಳಿಗೆ ನೀಡಿದ್ದಾನೆ. ಕೆಟ್ಟದನ್ನು ಹೊಡೆದೋಡಿಸಲು ದಂಡವನ್ನು ಶಿವ ನಮಗೆ ನೀಡಿದ್ದಾನೆ
ಎಂ.ಎಂ.ಹಿರೇಮ ಕಾಂಗ್ರೆಸ್ ಮುಖಂಡ
‘ಆಂಜನೇಯ ವಿರೋಧ ಸರಿಯಲ್ಲ’
‘2017ರಲ್ಲಿ ಎಚ್.ಆಂಜನೇಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಸಂದರ್ಭದಲ್ಲಿ ಜಂಗಮ ಸಮಾಜದ ಚೇತನ ಹಿರೇಮಠ ಎಂಬ ವಿದ್ಯಾರ್ಥಿಗೆ ಬೇಡ ಜಂಗಮ ಪ್ರಮಾಣಪತ್ರ ನೀಡಿ ವಿದೇಶದಲ್ಲಿ ಶಿಕ್ಷಣಕ್ಕೆ ₹48 ಲಕ್ಷ ಶಿಷ್ಯವೇತನ ನೀಡಿದ್ದರು. ಈಗ ಅದೇ ಆಂಜನೇಯ ಅವರು ಯಾವ ಮಾನದಂಡದ ಆಧಾರದ ಮೇಲೆ ಬೇಡ ಜಂಗಮರನ್ನು ಎಸ್‌ಸಿ ಪಟ್ಟಿಗೆ ಸೇರಿಸುತ್ತಿರಿ ಎಂದು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಬೇಡ ಜಂಗಮರ ವಿರುದ್ಧ ಹೋರಾಟ ಮಾಡುತ್ತಿರುವುದು’ ಏಕೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ ಪ್ರಶ್ನಿಸಿದರು. ‘ನಾವು ಬೇಡ ಜಂಗಮರು ಅಲ್ಲ ಎಂದು ಮಾಜಿ ಸಚಿವರು ಸಾಬೀತು ಮಾಡಲಿ’ ಎಂದು ಸವಾಲು ಹಾಕಿದರು. ‘ನಮ್ಮ ಸಮಾಜ ಎದುರು ಹಾಕಿಕೊಂಡರೆ ಏನಾಗುತ್ತದೆ’ ಎಂದು ನೋಡಿದ್ದೀರಿ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.