ADVERTISEMENT

ಬ್ಯಾಡಗಿ | ಮೇಲ್ಸೇತುವೆ ಸಂಚಾರ ಮುಕ್ತ: ಬಸ್‌ಗಳ ಸಂಖ್ಯೆ ಇಳಿಮುಖ, ಕಾದು ಜನ ಸುಸ್ತು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 4:40 IST
Last Updated 17 ಆಗಸ್ಟ್ 2025, 4:40 IST
<div class="paragraphs"><p>ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆ ಬಳಿ ಬಸ್‌ಗಾಗಿ ಕಾದು ನಿಂತಿದ್ದ&nbsp; ಪ್ರಯಾಣಿಕರು</p></div>

ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆ ಬಳಿ ಬಸ್‌ಗಾಗಿ ಕಾದು ನಿಂತಿದ್ದ  ಪ್ರಯಾಣಿಕರು

   

ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಲಾಗಿದ್ದು, ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮೇಲ್ಸೇತುವೆ ಸಿದ್ಧವಾದ ನಂತರ ಸಾರಿಗೆ ಸಂಸ್ಥೆ ಬಸ್‌ಗಳು, ಅದೇ ಮೇಲ್ಸೇತುವೆಯಲ್ಲಿ ಸಂಚರಿಸುತ್ತಿವೆ. ಕೆಳ ಸೇತುವೆಯಲ್ಲಿರುವ ಮೋಟೆಬೆನ್ನೂರಿಗೆ ಬಾರದಿದ್ದರಿಂದ, ಜನರು ಬಸ್‌ಗಾಗಿ ಕಾದು ಕಾದು ಸುಸ್ತಾಗುತ್ತಿದ್ದಾರೆ.

ಮೋಟೆಬೆನ್ನೂರಿಗೆ ಹೊಂದಿಕೊಂಡು ಹೆದ್ದಾರಿಯಿತ್ತು. ಈ ಭಾಗದಲ್ಲಿ ಪದೇ ಪದೇ ಅಪಘಾತಗಳು ಆಗುತ್ತಿದ್ದವು. ಇದೇ ಕಾರಣಕ್ಕೆ ಈ ಸ್ಥಳದಲ್ಲಿ ಸುಸಜ್ಜಿತ ಮೇಲ್ಸೇತುವೆ ನಿರ್ಮಿಸಲಾಗಿದೆ. ಕೆಳ ಭಾಗದಲ್ಲಿ ಮೋಟೆಬೆನ್ನೂರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಎಲ್ಲ ವಾಹನಗಳು, ಕೆಳಸೇತುವೆ ಮೂಲಕ ಹಾದು ಹೋಗುತ್ತಿದ್ದವು. ರಸ್ತೆ ಪಕ್ಕದಲ್ಲೇ ನಿಂತುಕೊಂಡು ಜನರು, ಬಸ್‌ ಹತ್ತುತ್ತಿದ್ದರು. ಆದರೀಗ, ಮೇಲ್ಸೇತುವೆ ಸಿದ್ಧವಾಗಿದೆ. ಕೆಳಸೇತುವೆಗೆ ಬರಬೇಕಾದ ಬಸ್‌ಗಳು, ಮೇಲ್ಸೇತುವೆ ಮೂಲಕವೇ ನೇರವಾಗಿ ಹೊರಟು ಹೋಗುತ್ತಿವೆ. ಇದರಿಂದಾಗಿ ಜನರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

‘ಹಾವೇರಿಯಿಂದ ರಾಣೆಬೆನ್ನೂರು ಕಡೆ ಹೋಗುವ ಹಾಗೂ ರಾಣೆಬೆನ್ನೂರಿನಿಂದ ಹಾವೇರಿ ಕಡೆಗೆ ಹೋಗುವ ಎಲ್ಲ ಬಸ್‌ಗಳು, ಮೇಲ್ಸೇತುವೆಯಿಂದ ಕೆಳಗೆ ಇಳಿದು ಹೋಗಬೇಕಿತ್ತು. ಆದರೆ, ಈಗ ಎಲ್ಲ ಬಸ್‌ಗಳು ಮೇಲ್ಸೇತುವೆಯಲ್ಲಿ ಹೊರಟಿವೆ. ಬ್ಯಾಡಗಿ ಹಾಗೂ ಸ್ಥಳೀಯ ಬಸ್‌ಗಳು ಮಾತ್ರ ಕೆಳಸೇತುವೆಯಲ್ಲಿ ಬರುತ್ತಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ, ಎಲ್ಲ ಬಸ್‌ಗಳು ಭರ್ತಿಯಾಗುತ್ತಿವೆ’ ಎಂದು ಸ್ಥಳೀಯರು ಹೇಳಿದರು.

‘ಉದ್ಯೋಗ, ವಿದ್ಯಾಭ್ಯಾಸ, ಕೂಲಿ, ಆಸ್ಪತ್ರೆ ಹಾಗೂ ಇತರೆ ಕೆಲಸಕ್ಕಾಗಿ ನಿತ್ಯವೂ ಸಾವಿರಾರೂ ಮಂದಿ ದೂರದ ಊರುಗಳಿಗೆ ಹೋಗಿ ಬರುತ್ತಾರೆ. ಅವರೆಲ್ಲರೂ ಬಸ್‌ಗಳನ್ನು ಅವಲಂಬಿಸಿದ್ದಾರೆ. ಈಗ ಬಸ್‌ಗಳು ಬರುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ’ ಎಂದು ತಿಳಿಸಿದರು.

ಮಳೆ–ಬಿಸಿಲಲ್ಲಿ ಕಾದರೂ ಬಸ್ಸಿಲ್ಲ: ‘ಹೆದ್ದಾರಿ ಹಾದು ಹೋಗಿದ್ದ ಸಂದರ್ಭದಲ್ಲಿ, ದಟ್ಟಣೆ ಹಾಗೂ ಅಪಘಾತದ ಭಯವಿತ್ತು. ಈಗ ಮೇಲ್ಸೇತುವೆ ಆಗಿದ್ದು, ದೊಡ್ಡ ವಾಹನಗಳೆಲ್ಲವೂ ನೇರವಾಗಿ ಹೋಗುತ್ತಿರುವುದಕ್ಕೆ ಖುಷಿಯಿದೆ. ಆದರೆ, ಬಸ್‌ಗಳು ಸಹ ನೇರವಾಗಿ ಹೊರಟಿದ್ದರಿಂದ ತೊಂದರೆಯಾಗುತ್ತಿದೆ’ ಎಂದು ಪ್ರಯಾಣಿಕರು ದೂರಿದರು.

‘ಕೆಳಸೇತುವೆ ರಸ್ತೆಯ ಅಕ್ಕ–ಪಕ್ಕದಲ್ಲಿ ನಿಂತುಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ. ಮಳೆ–ಬಿಸಿಲಿನಲ್ಲಿ ನಿಂತು ಬಸ್‌ಗಾಗಿ ಕಾಯುತ್ತಿದ್ದೇವೆ. ಆದರೆ, ಬಸ್‌ಗಳೇ ಬರುತ್ತಿಲ್ಲ’ ಎಂದರು.

‘ಮೇಲ್ಸೇತುವೆಯಿಂದ ಇಳಿಯುವ ಬಸ್‌ಗಳು, ಮೋಟೆಬೆನ್ನೂರಿನ ಒಳಗೆ ಹೋಗಲು ಹಾಗೂ ವಾಪಸು ತೆರಳು ಅವಕಾಶವಿದೆ. ಊರಿನೊಳಗೆ ನಿಲ್ದಾಣವಿದ್ದು, ಅಲ್ಲೀಗೆ ಬಸ್‌ಗಳೇ ಬರುತ್ತಿಲ್ಲ. ರಸ್ತೆಯಲ್ಲಿಯೇ ನಿಲ್ಲಿಸಿ ಮುಂದಕ್ಕೆ ಹೋಗುತ್ತಿದ್ದವು. ಈಗ ಆ ಬಸ್‌ಗಳು ಇಲ್ಲ’ ಎಂದರು.

ದುರಸ್ತಿ ಕಾಣದ ಸರ್ವಿಸ್‌ ರಸ್ತೆ: ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗುವುದಕ್ಕೂ ಮೊದಲು ಭಾರಿ ಹಾಹನಗಳ ಓಡಾಟದಿಂದ ಸರ್ವಿಸ್‌ ರಸ್ತೆ ಹಾಳಾಗಿದೆ. ಮೇಲ್ಸೇತುವೆ ಆರಂಭವಾದರೂ ಸರ್ವೀಸ್ ರಸ್ತೆ ದುರಸ್ತಿಯಾಗಿಲ್ಲ. ಕೂಡಲೇ, ದುರಸ್ತಿ ಕೆಲಸ ಮಾಡಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. 

ರಾಣೆಬೆನ್ನೂರಿಗೆ ಹೋಗಲು ಬೆಳಿಗ್ಗೆ 8 ಗಂಟೆಯಿಂದ ಎರಡು ತಾಸು ಕಾದರೂ ಬಸ್ಸಿಲ್ಲ. ಮೇಲ್ಸೇತುವೆಯಲ್ಲಿಯೇ ಬಸ್‌ಗಳು ಹೋಗುತ್ತಿದ್ದು ಇದರಿಂದ ಶಾಲೆ–ಕಾಲೇಜಿಗೆ ಹೋಗಲು ತಡವಾಗುತ್ತಿದೆ
ನವೀನ , ವಿದ್ಯಾರ್ಥಿ
ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳು ಮೋಟೆಬೆನ್ನೂರು ಮೂಲಕ ಹಾದು ಹೋಗುವಂತೆ ನೋಡಿಕೊಳ್ಳಬೇಕೆಂದು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ವಿರೂಪಾಕ್ಷಪ್ಪ, ಬಳ್ಳಾರಿ ಬಿಜೆಪಿ ಮುಖಂಡ 

‘ವಿಭಾಗೀಯ ನಿಯಂತ್ರಣಾಧಿಕಾರಿಗೆ ಪತ್ರ’

‘ಮೇಲ್ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಿದ ಬಳಿಕ ಕೆಲ ಬಸ್‌ಗಳು ಮಾತ್ರ ಮೋಟೆಬೆನ್ನೂರು ನಿಲ್ದಾಣಕ್ಕೆ ಬರುತ್ತಿವೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಎಲ್ಲ ಬಸ್‌ಗಳನ್ನು ಮೋಟೆಬೆನ್ನೂರಿನ ಮೂಲಕ ಕೊಂಡೊಯ್ಯುವಂತೆ ಚಾಲಕರು–ನಿರ್ವಾಹಕರಿಗೆ ಸೂಚನೆ ನೀಡಲು ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಪತ್ರ ಬರೆಯಲಾಗಿದೆ’ ಎಂದು ಬ್ಯಾಡಗಿ ಡಿಪೊ ವ್ಯವಸ್ಥಾಪಕ ಗುರುಬಸಪ್ಪ ಅಡರಕಟ್ಟಿ ತಿಳಿಸಿದರು.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು ‘ಬಸ್‌ಗಳು ಮೋಟೆಬೆನ್ನೂರಿನೊಳಗೆ ಹೋಗುವಂತೆ ಹೆದ್ದಾರಿಯ ಎರಡೂ ಬದಿಯೂ ಫಲಕ ಹಾಕಬೇಕು’ ಎಂದು ಪತ್ರದಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.