ADVERTISEMENT

ಪದವೀಧರರೇ ಸಂಸತ್ತು ಪ್ರವೇಶಿಸಲಿ!

ಲೋಕಸಭೆ ಸ್ಪರ್ಧೆಗೆ ನಿರಾಕರಿಸಿದ್ದ ಶಾಸಕ ಸಿ.ಎಂ. ಉದಾಸಿ

ಹರ್ಷವರ್ಧನ ಪಿ.ಆರ್.
Published 16 ಮಾರ್ಚ್ 2019, 20:00 IST
Last Updated 16 ಮಾರ್ಚ್ 2019, 20:00 IST
ಹಾವೇರಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂಸದ ಶಿವಕುಮಾರ್‌ ಉದಾಸಿ ಹಾಗೂ ಶಾಸಕ ಸಿ.ಎಂ.ಉದಾಸಿ-ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ 
ಹಾವೇರಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂಸದ ಶಿವಕುಮಾರ್‌ ಉದಾಸಿ ಹಾಗೂ ಶಾಸಕ ಸಿ.ಎಂ.ಉದಾಸಿ-ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ    

ಹಾವೇರಿ:ಇಲ್ಲಿನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಶಾಸಕ ಸಿ.ಎಂ. ಉದಾಸಿ ಅವರಿಗೆ 1991ರಲ್ಲೇ ಆಹ್ವಾನ ಬಂದಿದ್ದರೂ, ನಿರಾಕರಿಸಿದ್ದರು. ಆದರೆ, 18 ವರ್ಷಗಳ ಬಳಿಕ (2009) ಅವರ ಪುತ್ರ ಶಿವಕುಮಾರ್‌ ಉದಾಸಿಯೇ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಈಗ ಇತಿಹಾಸವಾಗಿದೆ. ಅದೂ, ಹ್ಯಾಟ್ರಿಕ್ ಪ್ರಯತ್ನದಲ್ಲಿದ್ದಾರೆ.

1983ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಅಂದಿನ ಕಾಂಗ್ರೆಸ್‌ ಅಧ್ಯಕ್ಷೆ ಇಂದಿರಾ ಗಾಂಧಿ ಇಲ್ಲಿಗೆ ಪ್ರಚಾರಕ್ಕೆ ಬಂದಿದ್ದರು. ಆಗ ಹಾನಗಲ್‌ ಕ್ಷೇತ್ರದಲ್ಲಿ ಪಕ್ಷೇತರರಾಗಿ (ಆನೆ ಚಿಹ್ನೆ) ಸ್ಪರ್ಧಿಸಿದ್ದ ಸಿ.ಎಂ. ಉದಾಸಿ ಗೆಲುವು ಕಂಡಿದ್ದರು. ಅವರು, ಕಾಂಗ್ರೆಸೇತರ ಶಕ್ತಿಯಾಗಿ ರೂಪುಗೊಂಡಿದ್ದರು. ಅನಂತರ ನಡೆದ ಬೆಳವಣಿಗೆಯಿಂದಾಗಿ 1991 ಹಾಗೂ 1996ರ ಲೋಕಸಭೆಗೆ ಸ್ಪರ್ಧಿಸುವಂತೆ ಅವರಿಗೆ ಆಹ್ವಾನ ಬಂದಿತ್ತು.

‘ನಾವೆಲ್ಲ ಕಾಂಗ್ರೆಸ್‌ ವಿರುದ್ಧ ಇದ್ದೆವು. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಿರಿಯ ನಾಯಕರು, ಕಾಂಗ್ರೆಸೇತರ ಪಕ್ಷಗಳ ಮುಖಂಡರು ಒತ್ತಾಯಿಸಿದ್ದರು. ಆದರೆ, ನಾನು ರಾಜ್ಯ ರಾಜಕಾರಣದಲ್ಲೇ ಇರುವುದಾಗಿ ತಿಳಿಸಿದ್ದೆನು. ಅದಕ್ಕಾಗಿ, ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿದೆನು. ಹೊರತು, ಎಂದೂ ನಾನೇ ಅಭ್ಯರ್ಥಿ ಆಗಲಿಲ್ಲ’ ಎಂದು ಶಾಸಕ ಸಿ.ಎಂ. ಉದಾಸಿ ಆ ದಿನಗಳನ್ನು ‘ಪ್ರಜಾವಾಣಿ’ ಜೊತೆ ಮೆಲುಕು ಹಾಕಿದರು.

ADVERTISEMENT

‘ನಮ್ಮ ಕ್ಷೇತ್ರ ವ್ಯಾಪ್ತಿ, ರಾಜ್ಯ ರಾಜಕಾರಣವು ನನಗೆ ಆದ್ಯತೆಯಾಗಿತ್ತು.ನನಗೆ ಸ್ಥಳೀಯ ಅಭಿವೃದ್ಧಿಯ ಬಗ್ಗೆ ಇಚ್ಛೆ ಇತ್ತು. ಲೋಕಸಭೆಗೆ ಪ್ರವೇಶಿಸಿದರೆ ಶಾಸನ, ಕಾನೂನುಗಳ ನಿರೂಪಕರಾಗುತ್ತಾರೆ. ಅದಕ್ಕೆ ಪದವೀಧರರು ಉತ್ತಮ’ ಎಂದು ಅವರು ಅಂದಿನ ತಮ್ಮ ನಿಲುವನ್ನು ಸ್ಮರಿಸಿಕೊಂಡರು.

‘ಎಂಟನೇ ತರಗತಿ ಎಂದು ನೀವೇ (ಮಾಧ್ಯಮ) ಬರೆಯುತ್ತೀರಿ...’ ಎಂದು ಹಾಸ್ಯವಾಡಿದರು. ಸಿ.ಎಂ. ಉದಾಸಿಯವರು ಆರು ಬಾರಿ ಶಾಸಕರಾಗಿದ್ದಾರೆ. ಸಚಿವರಾಗಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದಾರೆ.

ಆದರೆ, 2008ರ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ರಾಜಕೀಯ ಬೆಳವಣಿಗೆ ಬಳಿಕ, ಬಿಜೆಪಿಯಲ್ಲಿ ಹಾವೇರಿ ಕ್ಷೇತ್ರಕ್ಕೆ ಯುವ, ಸುಶಿಕ್ಷಿತ ಅಭ್ಯರ್ಥಿ ಹುಡುಕಾಟವು ಆರಂಭಗೊಂಡಿತ್ತು. ರಾಜಕೀಯವಾಗಿ ಗೆಲುವಿನ ಲೆಕ್ಕಾಚಾರವೂ ಪ್ರಮುಖವಾಗಿತ್ತು. ಆ ಅವಕಾಶವು ಸಿ.ಎಂ. ಉದಾಸಿ ಅವರ ಪುತ್ರ, ಎಂಜಿನಿಯರಿಂಗ್ ಪದವೀಧರ ಹಾಗೂ ಕನ್ನಡದ ಜೊತೆ ಇಂಗ್ಲಿಷ್, ಹಿಂದಿ ಮತ್ತಿತರ ಭಾಷೆಗಳ ಮೇಲೆ ಹಿಡಿತ ಹೊಂದಿದ ಶಿವಕುಮಾರ್ ಉದಾಸಿ ಅವರಿಗೇ ಒಲಿದು ಬಂತು.

‘ಪದವೀಧರರು ಲೋಕಸಭೆ ಪ್ರವೇಶಿಸಿದರೆ ಉತ್ತಮ’ ಎಂಬ ಅಪ್ಪನ ಇಚ್ಛೆಯನ್ನು ಶಿವಕುಮಾರ್ ಉದಾಸಿ ನಿಜಗೊಳಿಸಿದರು. ಅಭಿವೃದ್ಧಿ ಯೋಜನೆಗಳ ಜೊತೆ ಸಂಸದೀಯ ಚಟುವಟಿಕೆಗಳಿಗೆ ಒತ್ತು ನೀಡಿದರು. ಎರಡು ಬಾರಿ ಸಂಸದರಾದರು ಎಂದು ಅವರ ಬೆಂಬಲಿಗರು ಸಂತಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.