ADVERTISEMENT

ಸಮಾಜಕ್ಕಾಗಿ ಬದುಕಿದವರ ಹೆಸರು ಚಿರಸ್ಥಾಯಿ

ಶಿವಬಸವ ದನಗಳ ಜಾತ್ರೆಗೆ ಚಾಲನೆ: ಕೈವಲ್ಯಾಶ್ರಮದ ಶಿವಕುಮಾರ ದೇವರು ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 13:01 IST
Last Updated 23 ಜನವರಿ 2021, 13:01 IST
ಹಾವೇರಿಯಲ್ಲಿ ಹಮ್ಮಿಕೊಂಡಿರುವ ‘ನಮ್ಮೂರ ಜಾತ್ರೆ’ ಅಂಗವಾಗಿ ‘ಶಿವಬಸವ ದನಗಳ ಜಾತ್ರೆ’ಗೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು 
ಹಾವೇರಿಯಲ್ಲಿ ಹಮ್ಮಿಕೊಂಡಿರುವ ‘ನಮ್ಮೂರ ಜಾತ್ರೆ’ ಅಂಗವಾಗಿ ‘ಶಿವಬಸವ ದನಗಳ ಜಾತ್ರೆ’ಗೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು    

ಹಾವೇರಿ:‘ನಮ್ಮ ಮನೆತನದ ಹಿಂದಿನ ತಲೆಮಾರುಗಳ ಹೆಸರುಗಳು ಬಹುತೇಕ ಗೊತ್ತಿರುವುದಿಲ್ಲ. ಆದರೆ ನೂರಾರು ವರ್ಷಗಳ ಹಿಂದಿನ ಸಂತ ಮಹಾತ್ಮರ, ಶಿವಯೋಗಿಗಳ ಹೆಸರು ನಮಗೆ ಗೊತ್ತಿರುತ್ತದೆ. ಏಕೆಂದರೆ ನಮ್ಮವರು ತಮಗಾಗಿ ಬದುಕಿದ್ದರೆ, ಮಹಾತ್ಮರು ಸಮಾಜಕ್ಕಾಗಿ ಬದುಕಿದವರು. ಹೀಗಾಗಿ ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ’ ಎಂದುಬಳೂಟಗಿಯ ಕೈವಲ್ಯಾಶ್ರಮದ ಶಿವಕುಮಾರ ದೇವರು ಅಭಿಪ್ರಾಯಪಟ್ಟರು.

ನಗರದ ಹುಕ್ಕೇರಿಮಠದಲ್ಲಿ ಹಮ್ಮಿಕೊಂಡಿರುವ ಶಿವಬಸವ ಸ್ವಾಮಿಗಳ 75ನೇ ಹಾಗೂ ಶಿವಲಿಂಗ ಶ್ರೀಗಳ 12ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ನಡೆದ ‘ನಮ್ಮೂರ ಜಾತ್ರೆ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ತಮ್ಮ ಜೀವನವನ್ನೇ ಶಿವಯೋಗ ಮಂದಿರಕ್ಕೆ ಮುಡಿಪಾಗಿಟ್ಟವರು ಶಿವಬಸವ ಸ್ವಾಮಿಗಳು ಎಂದು ಬಣ್ಣಿಸಿದರು.

‘ಅರಿವಿನ ಜ್ಯೋತಿ, ಅನುಭಾವದ ಬುತ್ತಿ ಹಾಗೂ ಸುಜ್ಞಾನದ ಬೆಳಕನ್ನು ಹೊಂದಿದ ಸಂತ ಪರಂಪರೆಯ ಈ ನಾಡಿನಲ್ಲಿ ಹಾವೇರಿ ಹುಕ್ಕೇರಿಮಠದ ಶಿವಬಸವ ಸ್ವಾಮಿಗಳು ಅಗ್ರಗಣ್ಯರಾಗಿದ್ದು, ಅವರ ಸ್ಮರಣೆಯಿಂದ ನಮ್ಮಲ್ಲಿ ದಿವ್ಯ ಚೇತನವು ಸೃಷ್ಟಿಯಾಗುತ್ತದೆ’ ಎಂದು ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ADVERTISEMENT

ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಶಿವಬಸವ ಶ್ರೀಗಳು ಹುಟ್ಟಿದ ಸಪ್ತಸಾಗರದಿಂದ ಹೊರಟ ಜ್ಯೋತಿಯು ಭಕ್ತಿಸಾಗರವಿರುವ ಹಾವೇರಿಗೆ ಬಂದಿದ್ದು, ಅದು ಕೇವಲ ಜ್ಯೋತಿಯಲ್ಲ ಅದು ಸಂಸ್ಕೃತಿ ಸಂಸ್ಕಾರದ ಪರಂಜ್ಯೋತಿಯಾಗಿದೆ. ಅಂತಹ ಪುಣ್ಯ ಪುರುಷರ ಸ್ಮರಣೆಯು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಸ್ಮರಣೆಯೂ ಆಗಿದೆ’ ಎಂದು ಹೇಳಿದರು.

ಸಮಾರಂಭದಲ್ಲಿ ಕು. ನಿಶಾಂತ ಬಳಿಗಾರ ಕುಂಚ ಕಾವ್ಯ ಕಲೆಯನ್ನು ಪ್ರದರ್ಶಿಸಿದರು. ಇಮಾಮ್ ಹುಸೇನ ಮತ್ತು ತಂಡದವರು ಜಾನಪದ ತತ್ವಪದಗಳನ್ನು ಪ್ರಸ್ತುತ ಪಡಿಸಿದರು.

ಸಮಾರಂಭದಲ್ಲಿ ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾವನೂರಿನ ಶಿವಕುಮಾರ ಸ್ವಾಮೀಜಿ, ಗಡಹಿಂಗ್ಲಜದ ವೀರಬಸವ ಸ್ವಾಮೀಜಿ, ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಕಡೆನಂದಿಹಳ್ಳಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹುಣಶ್ಯಾಳದ ಆನಂದ ದೇವರು ಇದ್ದರು.

ಆಕಾಶವಾಣಿ ಕಲಾವಿದ ಶಿವಕುಮಾರ ಹಡಗಲಿ ಪ್ರಾರ್ಥಿಸಿದರು. ನಾಗರಾಜ ನಡುವಿನಮಠ ಕಾರ್ಯಕ್ರಮ ನಿರ್ವಹಿಸಿದರು. ಕೆ.ಆರ್. ನಾಶೀಪುರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.