ADVERTISEMENT

ಕಳಪೆ ಕಾಮಗಾರಿ: ತನಿಖೆಗೆ ಸೋಮಣ್ಣ ಸೂಚನೆ

‘ಗುಡಿಸಲು ಮುಕ್ತ’ ಹಾವೇರಿ ಜಿಲ್ಲೆಯ ಗುರಿ: ವಸತಿ ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 14:38 IST
Last Updated 25 ನವೆಂಬರ್ 2022, 14:38 IST
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಶುಕ್ರವಾರ ಜಿ+1 ವಸತಿ ಮನೆಗಳ ಕಾಮಗಾರಿಯನ್ನು ವಸತಿ ಸಚಿವ ವಿ.ಸೋಮಣ್ಣ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಶುಕ್ರವಾರ ಜಿ+1 ವಸತಿ ಮನೆಗಳ ಕಾಮಗಾರಿಯನ್ನು ವಸತಿ ಸಚಿವ ವಿ.ಸೋಮಣ್ಣ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು   

ಹಾವೇರಿ: ‘ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ನಿರ್ಮಾಣವಾದ ಜಿ+1 ಮನೆಗಳ ಕಾಮಗಾರಿ ಕಳ‍ಪೆಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ತನಿಖಾ ತಂಡ ರಚನೆ ಮಾಡಿ ನಾಲ್ಕು ದಿನಗಳಲ್ಲಿ ವರದಿ ನೀಡಬೇಕು’ ಎಂದು ವಸತಿ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಬಂಕಾಪುರ ಪಟ್ಟಣದಲ್ಲಿ ಶುಕ್ರವಾರ ಜಿ+1 ಮನೆಗಳ ಕಾಮಗಾರಿ ಪರಿಶೀಲಿಸಿದ ಸಂದರ್ಭದಲ್ಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಟ್ಟಡ ಮತ್ತು ಒಳಚರಂಡಿಯಲ್ಲಿ ಲೋಪಗಳಾಗಿರುವುದನ್ನು ಕಂಡು ಕಿಡಿಕಾರಿದರು. ‘ಇದು ಸಿಎಂ ತವರು ಕ್ಷೇತ್ರ. ಬೊಮ್ಮಾಯಿ ಅವರು ಸ್ವತಃ ಎಂಜಿನಿಯರ್‌ ಇದ್ದಾರೆ. ಇದನ್ನೆಲ್ಲ ನೋಡಿದ್ರೆ ಅವರು ಶಿಸ್ತು ಕ್ರಮ ಕೈಗೊಳ್ಳುತ್ತಾರೆ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅನ್ಯಾಯ ಸಹಿಸುವುದಿಲ್ಲ:

ADVERTISEMENT

‘ಅತಿವೃಷ್ಟಿಯಿಂದಾದ ಮನೆ ಹಾನಿ ಪ್ರಕರಣಗಳಲ್ಲಿ ಫಲಾನುಭವಿಗಳಿಂದ ಲಂಚ ಪಡೆದು ಅಧಿಕಾರಿಗಳು ಮನೆ ನೀಡುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ‘ಅನರ್ಹರಿಗೆ ಸೌಲಭ್ಯ ನೀಡಿದ್ದರೆ ಕ್ರಮ ಕೈಗೊಳ್ಳಲಾಗುವುದು. ಅರ್ಹರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಅನ್ಯಾಯ, ಅಕ್ರಮವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ’ ಎಂದರು.

ಗುಡಿಸಲು ಮುಕ್ತ ಜಿಲ್ಲೆ:

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೋಮಣ್ಣ ಮಾತನಾಡಿ, ಹಾವೇರಿ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿಸುವುದು ನನ್ನ ಗುರಿ. ಜಿಲ್ಲೆಯ ನಿವೇಶನ ರಹಿತ ಹಾಗೂ ವಸತಿ ರಹಿತರನ್ನು ಗುರುತಿಸಿ ವರದಿ ಸಲ್ಲಿಸಿದರೆ ಒಂದು ತಿಂಗಳೊಳಗಾಗಿ ಎಲ್ಲರಿಗೂ ಮನೆ, ನಿವೇಶನ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ಹಾವೇರಿಯಿಂದ ಆರಂಭ:

‘ರಾಜ್ಯದಲ್ಲಿರುವ ಎಲ್ಲ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗಗಳಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಹಾವೇರಿ ಜಿಲ್ಲೆಯಿಂದಲೇ ಈ ಯೋಜನೆ ಆರಂಭಿಸಲಾಗುವುದು. ತಲಾ ₹4 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.