ADVERTISEMENT

ನೂಕಾಪುರ ಶಾಲೆ ಶಿಕ್ಷಕರಿಗೆ ತರಾಟೆ

ಅಶಿಸ್ತು ತೋರಿದ ಸಿಬ್ಬಂದಿಗೆ ಎಚ್ಚರಿಕೆ; ಮಕ್ಕಳಿಗೆ ಪಾಠ ಮಾಡಿದ ಡಿಡಿಪಿಐ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 16:54 IST
Last Updated 8 ಡಿಸೆಂಬರ್ 2018, 16:54 IST
ರಾಣೆಬೆನ್ನೂರು ತಾಲ್ಲೂಕಿನ ನೂಕಾಪುರ ಶಾಲೆಯಲ್ಲಿ ಡಿಡಿಪಿಐ ಅಂದಾನಪ್ಪ ವಡಗೇರ ವಿದ್ಯಾರ್ಥಿಗಳ ಜೊತೆ ಪಠ್ಯದ ಕುರಿತು ಸಂವಾದ ನಡೆಸಿದರು
ರಾಣೆಬೆನ್ನೂರು ತಾಲ್ಲೂಕಿನ ನೂಕಾಪುರ ಶಾಲೆಯಲ್ಲಿ ಡಿಡಿಪಿಐ ಅಂದಾನಪ್ಪ ವಡಗೇರ ವಿದ್ಯಾರ್ಥಿಗಳ ಜೊತೆ ಪಠ್ಯದ ಕುರಿತು ಸಂವಾದ ನಡೆಸಿದರು   

ರಾಣೆಬೆನ್ನೂರು: ‘ತಾಲ್ಲೂಕಿನ ನೂಕಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿಲ್ಲ. ಮಕ್ಕಳಿಗೆ ಓದಲು, ಬರೆಯಲು ಬರುವುದಿಲ್ಲ. ಶಿಕ್ಷಕರು ಪರಸ್ಪರ ಜಗಳವಾಡುತ್ತಾರೆ’ ಎಂಬ ಆರೋಪ ಕೇಳಿ ಬಂದಿದ್ದರಿಂದ ಡಿಡಿಪಿಐ ಅಂದಾನೆಪ್ಪ ವಡಗೇರ ಮತ್ತು ಬಿಇಒ ಎನ್.ಶ್ರೀಧರ ಶನಿವಾರ ಶಾಲೆಗೆ ಭೇಟಿ ನೀಡಿ, ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

15 ದಿನಗಳ ಹಿಂದೆ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರು. ‘ಶಾಲೆಯಲ್ಲಿ 8ನೇ ತರಗತಿವರೆಗೆ 212 ವಿದ್ಯಾರ್ಥಿಗಳಿದ್ದಾರೆ. 9 ಶಿಕ್ಷಕರಿದ್ದರೂ ಅವರಲ್ಲಿಯೇ 3 ಪಂಗಡಗಳಾಗಿದ್ದು, ಪ್ರತಿದಿನ ಕಚ್ಚಾಟ ನಡೆಯುತ್ತಿದೆ. ಇದರಿಂದ ಶಾಲೆಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಡಿಡಿಪಿಐ ಮತ್ತು ಬಿಇಒ ಬೆಳಿಗ್ಗೆ 8.30ರಿಂದ 12.30ರವರೆಗೆ ಮಕ್ಕಳಿಗೆ ಪಾಠ ಮಾಡಿ, ಮಕ್ಕಳ ಅಧ್ಯಯನದ ಗುಣಮಟ್ಟ ಪರಿಶೀಲಿಸಿದರು. ಹಿಂದಿ ಭಾಷೆ ಹೊರತುಪಡಿಸಿ, ಉಳಿದೆಲ್ಲ ವಿಷಯಗಳಲ್ಲೂ ಮಕ್ಕಳ ಕಲಿಕಾ ಮಟ್ಟ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬುದು ಕಂಡುಬಂದಿತು.

ADVERTISEMENT

ಈ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಜಮಾಯಿಸಿದ್ದ ಪೋಷಕರು, ‘ಶಿಕ್ಷಕರು ಮಕ್ಕಳ ಎದುರು ಕಿತ್ತಾಡುತ್ತಾರೆ. ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದಿಲ್ಲ. ಮುಖ್ಯಶಿಕ್ಷಕರ ಮಾತನ್ನೂ ಕೇಳುವುದಿಲ್ಲ. ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಶಿಕ್ಷಕರನ್ನು ಬೇರೆಡೆ ವರ್ಗಾಯಿಸಬೇಕು’ ಎಂದು ಪಟ್ಟು ಹಿಡಿದರು.

ಈ ಕುರಿತು ಪರಿಶೀಲನೆ ನಡೆಸಿ ಶಿಸ್ತು ಕ್ರಮವಹಿಸುವ ಭರವಸೆ ನೀಡಿದ ಡಿಡಿಪಿಐ, ನಂತರ ಶಿಕ್ಷಕರ ಸಭೆ ನಡೆಸಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು. ಒಂದು ತಿಂಗಳೊಳಗೆ ಶಾಲೆಯ ಪರಿಸ್ಥಿತಿ ಸುಧಾರಿಸಬೇಕು. ಅಶಿಸ್ತು ತೋರಿದ ಸಿಬ್ಬಂದಿ ವಿರುದ್ಧ ಕ್ರಮ ವಹಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.