ADVERTISEMENT

ಫೋಕ್ಸೊ: 2ನೇ ಸ್ಥಾನದಲ್ಲಿ ಹಾವೇರಿ

‘ಗೆಳತಿ ವಿಶೇಷ ಚಿಕಿತ್ಸಾ ಘಟಕ’ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 13:54 IST
Last Updated 30 ಆಗಸ್ಟ್ 2018, 13:54 IST
ಹಾವೇರಿಯ ಸ್ತ್ರೀ ಶಕ್ತಿ ಭವನದಲ್ಲಿ ಗುರುವಾರ ನಡೆದ ‘ಗೆಳತಿ ವಿಶೇಷ ಚಿಕಿತ್ಸಾ ಘಟಕ’ ಕುರಿತು ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಎ. ವಿ. ಪಾಟೀಲ ಮಾತನಾಡಿದರು
ಹಾವೇರಿಯ ಸ್ತ್ರೀ ಶಕ್ತಿ ಭವನದಲ್ಲಿ ಗುರುವಾರ ನಡೆದ ‘ಗೆಳತಿ ವಿಶೇಷ ಚಿಕಿತ್ಸಾ ಘಟಕ’ ಕುರಿತು ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಎ. ವಿ. ಪಾಟೀಲ ಮಾತನಾಡಿದರು   

ಹಾವೇರಿ: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (ಫೋಕ್ಸೊ) ಪ್ರಕರಣ ದಾಖಲಾಗುತ್ತಿರುವ ಜಿಲ್ಲೆಗಳ ಪೈಕಿ ಹಾವೇರಿಯು ಎರಡನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವೈ. ಎಲ್. ಲಾಡಖಾನ್ ಹೇಳಿದರು.

ನಗರದ ಸ್ತ್ರೀ ಶಕ್ತಿ ಭವನದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ನಡೆದ ‘ಗೆಳತಿ ವಿಶೇಷ ಚಿಕಿತ್ಸಾ ಘಟಕ’ ಕುರಿತು ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಫೋಸ್ಕೊಅಡಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಅನಂತರ ಹಾವೇರಿಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ ಶೇ 80 ರಷ್ಟು ಆರೋಪಿಗಳು ಜೈಲಿನಲ್ಲಿ ಇದ್ದಾರೆ. ಇಂತಹ ಹೇಯ ಕೃತ್ಯ ಎಸಗುವ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.

ADVERTISEMENT

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತರ ಚಿಕಿತ್ಸೆ ಹಾಗೂ ಕಾನೂನು ಸಲಹೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ‘ಗೆಳತಿ ವಿಶೇಷ ಚಿಕಿತ್ಸಾ ಘಟಕ’ವನ್ನು ಸ್ಥಾಪಿಸಲಾಗಿದೆ ಎಂದ ಅವರು, ಸೆ.8 ರಂದು ಜಿಲ್ಲೆಯ ಎಲ್ಲ ಕೋರ್ಟ್‌ಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಎ. ವಿ. ಪಾಟೀಲ ಮಾತನಾಡಿ, ಕಾನೂನು ಬದ್ಧ ಜೀವನ ನಡೆಸಿದರೆ, ಬದುಕಿನಲ್ಲಿ ತೊಡಕು ನಿವಾರಣೆ ಸಾಧ್ಯ ಎಂದರು.

ಪ್ರಚಲಿತದಲ್ಲಿ ಜನರ ಭಾವನೆಗಳು ಬದಲಾಗುತ್ತಿವೆ. ಸತ್ಯವನ್ನು ಬಿಟ್ಟು ಎಲ್ಲವನ್ನೂ ಹೇಳುವುದೇ ಹೆಚ್ಚಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಗೆಳತಿ ವಿಶೇಷ ಚಿಕಿತ್ಸಾ ಘಟಕದ ಕಾನೂನು ಸಲಹೆಗಾರ್ತಿ ಮಂಗಳಾ ಕಮ್ಮಾರ, ನೆರವು ಕೋರಿ ಬಂದ ಮಹಿಳೆಯರಿಗೆ ಕಾನೂನು ನೆರವು ಮತ್ತು ಪುನರ್ವಸತಿ ಯೋಜನೆಗಳ ಕುರಿತು, ಮನೋರೋಗ ತಜ್ಞ ಡಾ.ವಿಜಯಕುಮಾರ ಬಳಿಗಾರ ಮಹಿಳೆಯರ ಮಾನಸಿಕ ಆರೋಗ್ಯದ ಕುರಿತು ಹಾಗೂ ನಗರ ಪೊಲೀಸ್ ಠಾಣೆ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಪಿ. ಜಿ. ನಂದಿ ಪೊಲೀಸ್ ದೂರು ಪ್ರಾಧಿಕಾರದ ರಚನೆ ಮಹತ್ವ ಹಾಗೂ ಕಾರ್ಯ ವೈಖರಿ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಶಸ್ತ್ರಚಿಕಿತ್ಸ ನಾಗರಾಜ ನಾಯಕ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಅಶೋಕ ಸಿ. ನೀರಲಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ. ಎನ್. ಮಾಳಿಗೇರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್. ಎಸ್. ರಾಘವೇಂದ್ರಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರಿ ಉಮಾ ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.