ADVERTISEMENT

ಅಕ್ರಮ ಮದ್ಯ ಮಾರಾಟ ತಡೆಗಟ್ಟಿ

ಹಿರೇಮುಗದೂರು ಗ್ರಾಮ ಪಂಚಾಯಿತಿ ಎದುರು ಮಹಿಳೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 15:01 IST
Last Updated 11 ಸೆಪ್ಟೆಂಬರ್ 2020, 15:01 IST
ಅಕ್ರಮ ಮದ್ಯ ಮಾರಾಟ ತಡೆಗಟ್ಟಿ ಎಂದು ಒತ್ತಾಯಿಸಿ ಮಹಿಳೆಯರು ಹಿರೇಮುಗದೂರು ಗ್ರಾಮ ಪಂಚಾಯ್ತಿ ಪಿಡಿಒ ಶಿವಾನಂದ ಹಡಪದ ಅವರಿಗೆ ಮನವಿ ಸಲ್ಲಿಸಿದರು 
ಅಕ್ರಮ ಮದ್ಯ ಮಾರಾಟ ತಡೆಗಟ್ಟಿ ಎಂದು ಒತ್ತಾಯಿಸಿ ಮಹಿಳೆಯರು ಹಿರೇಮುಗದೂರು ಗ್ರಾಮ ಪಂಚಾಯ್ತಿ ಪಿಡಿಒ ಶಿವಾನಂದ ಹಡಪದ ಅವರಿಗೆ ಮನವಿ ಸಲ್ಲಿಸಿದರು    

ಹಾವೇರಿ: ‘ಗ್ರಾಮದ ಎಲ್ಲೆಡೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಖಂಡನೀಯ. ಸಾರಾಯಿ ಕುಡಿತದಿಂದ ಊರಿನ ಕುಟುಂಬಗಳು ಬೀದಿಪಾಲಾಗುತ್ತಿವೆ’ ಎಂದು ಶುಕ್ರವಾರ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಬಡ ಕುಟುಂಬಗಳನ್ನು ರಕ್ಷಿಸುವ ಜವಾಬ್ದಾರಿ ಜಿಲ್ಲಾಡಳಿತಕ್ಕಿದ್ದು, ಕೂಡಲೇ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಂತೆ ಒತ್ತಾಯಿಸಿ ಮಹಿಳೆಯರು ಶುಕ್ರವಾರ ಹಿರೇಮುಗದೂರು ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ಮಾಡಿ ಪಿಡಿಒ ಶಿವಾನಂದ ಹಡಪದ ಅವರಿಗೆ ಮನವಿ ಸಲ್ಲಿಸಿದರು.

ಊರಿನಲ್ಲಿ ಬಹುತೇಕ ಅಂಗಡಿ, ಮನೆಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದಿಂದ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಈ ಕುಡಿತದ ಚಟಕ್ಕೆ ದಾಸರಾಗಿದ್ದಾರೆ. ನಿತ್ಯ ಮನೆಗಳಲ್ಲಿ ಪತಿ–ಪತ್ನಿ ನಡುವೆ ಜಗಳಗಳಾಗುತ್ತಿವೆ. ಕುಡಿಯಲು ಹಣ ನೀಡುವಂತೆ ಮಹಿಳೆಯರನ್ನು ಪೀಡಿಸುತ್ತಿದ್ದಾರೆ. ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮಹಿಳಾ ಸಂಘದ ಮುಖ್ಯಸ್ಥೆ ಫಕ್ಕೀರವ್ವ ಹೊಸಮನಿ ಅಳಲು ತೋಡಿಕೊಂಡರು.

ADVERTISEMENT

ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ಕಾಳಿ ಮಾತನಾಡಿ, ‘ಈ ಹಿಂದೆಯೇ ಪೊಲೀಸ್‌, ಅಬಕಾರಿ ಹಾಗೂ ತಹಶೀಲ್ದಾರ್‌ ಅವರಿಗೆ ಈ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆಯನ್ನು ಜಿಲ್ಲಾಡಳಿತ ಈ ಕೂಡಲೇ ನಿಲ್ಲಿಸದಿದ್ದರೆ ತೀವ್ರವಾದ ಹೋರಾಟಕ್ಕೆ ಊರಿನ ಜನತೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಫಕ್ಕೀರವ್ವ ಬಸನಾಳ, ಯಲ್ಲವ್ವ ಕಾಳಿ, ನೀಲವ್ವ ತಿಮ್ಮಾಪೂರ, ಸುನಿತಾ ಹೊಸಮನಿ, ಕಲ್ಲವ್ವ ಹೊಸಮನಿ, ಅನಸವ್ವ ಅರಳಳ್ಳಿ, ಗೀತಾ ಹೊಸಮನಿ, ಚನ್ನವ್ವ ಅರಳಳ್ಳಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.