ADVERTISEMENT

ಮನೆಗಳಿಗೇ ಪೌಷ್ಟಿಕ ಆಹಾರ ಪೂರೈಸಿ

ಪೋಷಣ ಅಭಿಯಾನ ಜಿಲ್ಲಾ ಮಟ್ಟದ ಸಮಿತಿ ಸಭೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 13:16 IST
Last Updated 24 ಸೆಪ್ಟೆಂಬರ್ 2020, 13:16 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಪೋಷಣ ಅಭಿಯಾನದ ಜಿಲ್ಲಾ ಮಟ್ಟದ ಸಮಿತಿ ಸಭೆಯು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ನಡೆಯಿತು 
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಪೋಷಣ ಅಭಿಯಾನದ ಜಿಲ್ಲಾ ಮಟ್ಟದ ಸಮಿತಿ ಸಭೆಯು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ನಡೆಯಿತು    

ಹಾವೇರಿ: ಕೊರೊನಾಹಿನ್ನೆಲೆಯಲ್ಲಿ ಅಂಗನವಾಡಿಗೆ ಮಕ್ಕಳು ಬರುತ್ತಿಲ್ಲ. ಈ ಕಾರಣಕ್ಕಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅವರವರ ಮನೆಯಲ್ಲೇ ಸೂಕ್ತ ಚಿಕಿತ್ಸೆ ಹಾಗೂ ಇಲಾಖೆಯ ಪೌಷ್ಟಿಕ ಆಹಾರಗಳನ್ನು ಪೂರೈಸಲು ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಪೋಷಣ ಅಭಿಯಾನ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದರು.

ಅಪೌಷ್ಠಿಕತೆ, ರಕ್ತಹೀನತೆ ತೊಡೆದು ಹಾಕಲು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಅಪೌಷ್ಟಿಕತೆ ಸಮಸ್ಯೆ ಎದುರಾಗುವುದಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಮಕ್ಕಳಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದರು.

ADVERTISEMENT

ಪೌಷ್ಟಿಕ ಕೈ ತೋಟ:ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಕ್ರಮವಹಿಸಬೇಕು. ರೈತರ ಹೊಲಗಳ ಬದುಗಳಲ್ಲಿ ಪೌಷ್ಟಿಕ ಆಹಾರವಾದ ಹಣ್ಣು, ತರಕಾರಿ, ಸೊಪ್ಪು ಬೆಳೆಯುವ ಕಿಟ್‍ಗಳನ್ನು ನೀಡಬೇಕು. ಒಂದೊಮ್ಮೆ ಅಂಗನವಾಡಿ ಆವರಣದಲ್ಲಿ ಸ್ಥಳವಕಾಶ ಕೊರತೆ ಇದ್ದರೆ ಶಾಲಾ ಆವರಣದಲ್ಲಿ ಬೆಳೆಯಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಕ್ಕಳ ಸ್ನೇಹಿ ಅಂಗನವಾಡಿ:ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಸ್ವಂತ ಕಟ್ಟಡವಿಲ್ಲದ ಅಂಗನವಾಡಿಗಳಿಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನವನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಸರಿಗೆ ಮಂಜೂರು ಮಾಡಿಕೊಳ್ಳಬೇಕು. ಮಕ್ಕಳ ಸ್ನೇಹಿ ಆಕರ್ಷಕ ಕಟ್ಟಡ ವಿನ್ಯಾಸದಿಂದ ನಿರ್ಮಾಣ ಮಾಡಬೇಕು. ಈ ಕುರಿತಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚನೆ ನೀಡಿದರು.

ಅಧಿಕಾರಿಗಳಿಗೆ ತರಬೇತಿ:ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೆಟ್ಟೆಪ್ಪನವರ, ರಾಜ್ಯದಲ್ಲಿ ಮೂರು ಹಂತದಲ್ಲಿ ಈ ಅಭಿಯಾನ ಜಾರಿಯಾಗಿದೆ. ಜಿಲ್ಲೆಯಲ್ಲಿ 2019-20ನೇ ಸಾಲಿನಿಂದ ಅನುಷ್ಠಾನಗೊಂಡಿದೆ. ಅಧಿಕಾರಿಗಳಿಗೆ ತರಬೇತಿ ಸಹ ನೀಡಲಾಗಿದೆ. ಪೋಷಣ್ ಅಭಿಯಾನ ಯೋಜನೆಯಡಿ ಮಕ್ಕಳ ಸಮರ್ಪಕ ಬೆಳವಣಿಗೆಗೆ ನಿಗಾವಹಿಸಲು ಜಿಲ್ಲೆಯ 1918 ಅಂಗನವಾಡಿಗಳಿಗೆ ಮಕ್ಕಳ ತೂಕದ ಯಂತ್ರ ಸೇರಿದಂತೆ ವಿವಿಧ ಉಪಕರಣ ಪೂರೈಸಲಾಗಿದೆ. ಸಂಯೋಜಕರು, ಯೋಜನಾ ಸಹಾಯಕರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.