ADVERTISEMENT

ಹಾವೇರಿ: ಜೋರು ಮಳೆ; ಎಂಟು ಸೇತುವೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 16:21 IST
Last Updated 20 ಆಗಸ್ಟ್ 2025, 16:21 IST
   

ಪ್ರಜಾವಾಣಿ ವಾರ್ತೆ

ಹಾವೇರಿ: ಜಿಲ್ಲೆಯಾದ್ಯಂತ ಕೆಲದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಬುಧವಾರವೂ ಮಳೆ ಮುಂದುವರಿಯಿತು. ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿಯೂ ಹೆಚ್ಚು ಮಳೆಯಾಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿರುವ ವರದಾ, ಧರ್ಮಾ, ತುಂಗಭದ್ರಾ ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ.

ನದಿಗಳ ನೀರಿನ ಮಟ್ಟ ಹೆಚ್ಚಳವಾಗಿದ್ದು, ಇದರಿಂದಾಗಿ ಜಿಲ್ಲೆಯ ಎಂಟು ಕಡೆಗಳಲ್ಲಿ ಸೇತುವೆಗಳು ಮುಳುಗಡೆಯಾಗಿವೆ. ಇದರಿಂದಾಗಿ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ಮಾರ್ಗದ ಮೂಲಕ ಜನರು ಸಂಚರಿಸುತ್ತಿದ್ದಾರೆ.

ADVERTISEMENT

ಸವಣೂರು ತಾಲ್ಲೂಕಿನ ಕಳಸೂರದಿಂದ ಹಾವೇರಿ/ಕರ್ಜಗಿ ರಸ್ತೆಗೆ ಸಂಪರ್ಕ ಕಲ್ಪಿಸುವ ವರದಾ ನದಿಯ ಸೇತುವೆ ಮುಳುಗಡೆಯಾಗಿದೆ. ಮೆಳ್ಳಾಗಟ್ಟಿ ಹಾಗೂ ದೇವಗಿರಿ ರಸ್ತೆ ಮೂಲಕ ಗ್ರಾಮಸ್ಥರು ಸಂಚರಿಸುತ್ತಿದ್ದಾರೆ.

ಹಾನಗಲ್ ತಾಲ್ಲೂಕಿನ ಲಕಮಾಪುರದಿಂದ ಬಾಳಂಬೀಡಕ್ಕೆ ಸಂಪರ್ಕ ಕಲ್ಪಿಸುವ ವರದಾ ನದಿ ಸೇತುವೆ ಹಾಗೂ ಕೂಡಲ ಗ್ರಾಮದಿಂದ ನಾಗನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ವರದಾ ನದಿ ಸೇತುವೆ ಮುಳುಗಡೆಯಾಗಿದೆ.

ಸುರಳೇಶ್ವರ ಗ್ರಾಮದಿಂದ ಕುಂಟನಹೊಸಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಧರ್ಮಾ ನದಿ ಸೇತುವೆ, ಗುಡೂರು–ಮಾರೋಳ ರಸ್ತೆ ನಡುವಿನ ಸೇತುವೆ, ಸವಣೂರು ತಾಲ್ಲೂಕಿನ ಚಿಕ್ಕಮಗದೂರು–ಕರ್ಜಗಿ ರಸ್ತೆಯಲ್ಲಿರುವ ಸೇತುವೆ, ಕಳಸೂರು–ಕೊಳೂರು ನಡುವಿನ ಸೇತುವೆ, ಹಿರೇಮರಳಿಹಳ್ಳಿಯಿಂದ ಕೋಣನತಂಬಗಿ ನಡುವಿನ ಸೇತುವೆ ಮುಳುಗಡೆಯಾಗಿದೆ.

ಹಾವೇರಿ ತಾಲ್ಲೂಕಿನ ದೇವಗಿರಿ ಬಳಿಯ ವರದಾ ನದಿ ಪಾತ್ರದಲ್ಲಿರುವ ದೇವಸ್ಥಾನ ಸಹ ಭಾಗಶಃ ಮುಳುಗಡೆಯಾಗಿದೆ. ನದಿ ಅಕ್ಕ–ಪಕ್ಕದ ಜಮೀನಿಗೂ ನೀರು ನುಗ್ಗುತ್ತಿದೆ.

ಜಿಲ್ಲಾ ಕೇಂದ್ರ ಹಾವೇರಿಯಲ್ಲಿಯೂ ಬುಧವಾರ ಬಿಡುವು ನೀಡುತ್ತಲೇ ಮಳೆಯಾಯಿತು. ಬುಧವಾರ ಕೆಲ ನಿಮಿಷ ಬಿಸಿಲು ಕಾಣಿಸಿಕೊಂಡರೂ ಬಹಳ ಹೊತ್ತು ಇರಲಿಲ್ಲ. ಮೋಡ ಕವಿದ ವಾತಾವರಣವೇ ಮುಂದುವರಿಯಿತು.

ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲೂ ಬಿಡುವು ಕೊಡುತ್ತಲೇ ಉತ್ತಮ ಮಳೆಯಾಗಿದೆ.

ಬೆಳೆ ಹಾನಿ: ‘ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ 111 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಈ ಬಗ್ಗೆ ಜಂಟಿ ಸಮೀಕ್ಷೆ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

‘ಕೃಷಿ ಬೆಳೆ ಹಾನಿಯೂ ಆಗಿದೆ. ಈ ಬಗ್ಗೆ ರೈತರಿಂದ ಅರ್ಜಿಗಳನ್ನು ಪಡೆಯಲಾಗುತ್ತಿದೆ. ಕ್ಷೇತ್ರ ಪರಿಶೀಲನೆ ಪೂರ್ಣಗೊಂಡು, ಜಂಟಿ ಸಮೀಕ್ಷೆ ಮುಗಿದ ನಂತರ ವರದಿ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಆಗಸ್ಟ್ 20ರವರೆಗೆ 370 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. 341 ವಿದ್ಯುತ್ ಕಂಬಗಳು ಹಾಗೂ 2 ಟ್ರಾನ್ಸ್‌ಫಾರ್ಮರ್‌ಗಳನ್ನು ಹೆಸ್ಕಾಂನವರು ಸರಿಪಡಿಸಿದ್ದಾರೆ. ಬಾಕಿ 29 ಕಂಬಗಳನ್ನು ನವೀಕರಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.