ADVERTISEMENT

ರಾಷ್ಟ್ರಕೂಟರ ಕಾಲದ ಹಲಸೂರ ಗ್ರಾಮ

ಗಣೇಶಗೌಡ ಎಂ.ಪಾಟೀಲ
Published 3 ಆಗಸ್ಟ್ 2019, 15:06 IST
Last Updated 3 ಆಗಸ್ಟ್ 2019, 15:06 IST
ರಾಷ್ಟ್ರಕೂಟರ ಕಾಲದ ಕಲ್ಮೇಶ್ವರ ದೇವಸ್ಥಾನ
ರಾಷ್ಟ್ರಕೂಟರ ಕಾಲದ ಕಲ್ಮೇಶ್ವರ ದೇವಸ್ಥಾನ   

ಸವಣೂರ: ರಾಷ್ಟ್ರಕೂಟರ ಕಾಲದ ಶಿವಾಲಯ, ಹಳೆ ಶಾಸನಗಳು, ಹತ್ತಾರು ದೇವಾಲಯಗಳನ್ನು ಹೊಂದಿರುವ‌ ಇತಿಹಾಸ ಪ್ರಸಿದ್ಧ ಪುಣ್ಯಭೂಮಿ ಹಲಸೂರ ಗ್ರಾಮ.‌‌

ತಾಲ್ಲೂಕು ಕೇಂದ್ರದಿಂದ 18 ಕಿ.ಮೀ ದೂರದಲ್ಲಿರವ ಈ ಗ್ರಾಮ, ತೆವರಮಳ್ಳಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುತ್ತದೆ. ಗ್ರಾಮದ ಒಟ್ಟು ವಿಸ್ತೀರ್ಣ 32,122 ಹೆಕ್ಟೇರ್ ಪ್ರದೇಶದ ಪೈಕಿ, 28,760 ಹೆಕ್ಟೇರ್ ಕೃಷಿ ಭೂಮಿ ಇದೆ. ‘ರಾಷ್ಟ್ರಕೂಟರ ಕಾಲದ ಶಾಸನಗಳನ್ನು ಹೊಂದಿದ್ದ ಪಲಸೂರ ಗ್ರಾಮವೇ ಈಗ ಹಲಸೂರ ಆಗಿದೆ’ ಎಂಬ ಸಾಲುಗಳು ಡಾ. ಭೋಜರಾಜ ಪಾಟೀಲರು ಬರೆದ ‘ಕರ್ನಾಟಕ ಗ್ರಾಮ ಚರಿತ್ರೆ’ ಕೋಶದಲ್ಲಿ ಕಂಡುಬರುತ್ತವೆ.

ಮುಖ್ಯವಾಗಿ ಗ್ರಾಮದ ಹೊರಗಡೆ ಕಲ್ಮೇಶ್ವರ ದೇವಸ್ಥಾನವಿದ್ದು, ಅಲ್ಲಿ ರಾಷ್ಟ್ರಕೂಟರ ಕಾಲದ ಶಾಸನವಿದೆ. ಅದರ ಪ್ರಕಾರ ಹೇಳುವುದಾದರೆ ಈ ಗ್ರಾಮ ಸುಮಾರು 12 ಶತಮಾನಗಳಷ್ಟು ಹಳೆಯದ್ದು. ಇಲ್ಲಿ ರೈತ ಸಮುದಾಯವೇ ಹೆಚ್ಚಿದ್ದು ಭತ್ತ, ರಾಗಿ, ಜೋಳ, ನವಣೆ ಪ್ರಮುಖ ಆಹಾರ ಬೆಳೆಗಳಾಗಿವೆ. ಇನ್ನು ಹತ್ತಿ, ಶೇಂಗಾ, ಮೆಕ್ಕೆಜೋಳ ವಾಣಿಜ್ಯ ಬೆಳೆಗಳನ್ನೂ ಹೆಚ್ಚಾಗಿ ಬೆಳೆಯಲಾಗುತ್ತದೆ.

ADVERTISEMENT

‘182 ಕುಟುಂಬಗಳಿರುವ ಈ ಗ್ರಾಮದ ಜನಸಂಖ್ಯೆ 1,298. ಕೃಷಿ ಚಟುವಟಿಕೆ ಜತೆಗೇ ಹೈನುಗಾರಿಕೆ, ಸುಣ್ಣ ತಯಾರಿಕೆ, ಕ್ಷೌರಿಕ ವೃತ್ತಿಯನ್ನೂ ಕುಲಕಸುಬು ಮಾಡಿಕೊಂಡ ಕುಟುಂಬಗಳೂ ಇವೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಜೀವನ ಕಂಡುಕೊಂಡಿದ್ದಾರೆ. ಶಿಕ್ಷಕರು ಹಾಗೂ ಗಡಿ ಕಾಯೋ ಸೈನಿಕರ ಸಂಖ್ಯೆಯೂ ಇಲ್ಲಿ ಹೆಚ್ಚಿದೆ’ ಎನ್ನುತ್ತಾರೆ ಗ್ರಾಮಸ್ಥ ಗಂಗಾಧರ ನಿಂಬಕ್ಕನವರ.

‘ಕಲ್ಮೇಶ್ವರ ದೇವಾಸ್ಥಾನವು ಗರ್ಭಗುಡಿ ಹಾಗೂ ಅರ್ಧ ಮಂಟಪವೆಂದು ಊಹಿಸಬಹುದಾದ ಬಾಗಗಳನ್ನಷ್ಟೇ ಹೊಂದಿದೆ. ಉಳಿದ ಭಾಗಗಳು ನಾಶವಾಗಿವೆ. ಇನ್ನುಳಿದಂತೆ ಬಸವೇಶ್ವರ, ಮಾರುತಿ, ಈಶ್ವರ ದೇವಸ್ಥಾನಗಳು ಖ್ಯಾತಿ ಹೊಂದಿವೆ. ಉಡುಚಮ್ಮ ಹಾಗೂ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದಲ್ಲಿಓಕುಳಿ, ಹರಕೆ, ವಿಶೇಷ ಆಚರಣೆಗಳು ಗ್ರಾಮದ ವಿವಿಧ ಕಲಾವಿದರ ವಾದ್ಯ ವೈಭವಗಳೊಂದಿಗೆ ನಡೆಯುತ್ತವೆ’ ಎನ್ನುತ್ತಾರೆ ಗ್ರಾಮಸ್ಥ ವಿ.ಎನ್.ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.