ರಟ್ಟೀಹಳ್ಳಿ: ಮಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ನೂರು ದಿನ ನರೇಗಾ ಉದ್ಯೋಗ ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ಇಂಗಳಗೊಂದಿ ಗ್ರಾಮದ ನೂರಾರು ಕೂಲಿ ಕಾರ್ಮಿಕರು ಹಾಗೂ ಕರ್ನಾಟಕ ವ್ಯವಸಾಯ ವೃತ್ತಿಪರ ಯೂನಿಯನ್ ತಾಲ್ಲೂಕು ಘಟಕದ ಸದಸ್ಯರು ತಾಲ್ಲೂಕು ಪಂಚಾಯ್ತಿ ಮುಂದೆ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ವ್ಯವಸಾಯ ವೃತ್ತಿಪರ ಯೂನಿಯನ್ ತಾಲ್ಲೂಕು ಘಟಕದ ಅಧ್ಯಕ್ಷ ಶೇಖಪ್ಪ ಶಿವಕ್ಕನವರ, ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷಕ್ಕೆ ಒಂದು ಕುಟುಂಬಕ್ಕೆ ನೂರು ದಿನ ಕೆಲಸ ನೀಡಬೇಕು ಎಂಬ ನಿಯಮವಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ನಿರತರು ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಆಗಮಿಸುವಂತೆ ಪಟ್ಟು ಹಿಡಿದರು. ನಂತರ ಪಿಎಸ್ಐ ರಮೇಶ ಪಿ.ಎಸ್. ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳುವುದು ಕಾನೂನು ಬಾಹಿರ, ಪ್ರತಿಭಟನೆ ಮಾಡುವುದಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪರವಾನಿಗೆ ಪಡೆದು ಧರಣಿ ನಡೆಸಬೇಕು ಎಂದರು.
ನಂತರ ಕೂಲಿ ಕಾರ್ಮಿಕರು ಪಿ.ಎಸ್.ಐ ಮನವಿಗೆ ಸ್ಪಂದಿಸಿ ಪ್ರತಿಭಟನೆ ಕೈ ಬಿಡುತ್ತೇವೆ. ಜೂನ್ 9ರ ಒಳಗಾಗಿ ಜಿಲ್ಲಾ ಪಂಚಾಯ್ತಿ ಸಿಇಒ ಸಮ್ಮುಖದಲ್ಲಿ ಕೂಲಿ ಕಾರ್ಮಿಕರ ಸಭೆ ಕರೆದು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು ಇಲ್ಲದಿದ್ದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
ಕರ್ನಾಟಕ ವೃತ್ತಿ ಪರ ಯೂನಿಯನ್ ಜಿಲ್ಲಾ ಘಟಕದ ಅಧ್ಯಕ್ಷ ಕಾಂತೇಶ ಹೊಲಬಿಕೊಂಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕಾಮಾಕ್ಷಿ ರೇವಣಕರ, ನಾಗರಾಜ ಮಳೂರ, ಹನುಮಂತಪ್ಪ ಹೊಲಬಿಕೊಂಡ, ನವೀನ್ ಹುಲ್ಲತ್ತಿ, ಮಂಜುಳಾ, ನಾಗಪ್ಪ ಮಾಳಗಿ ವನಜಾಕ್ಷಿ ಇಂಗಳಗೊಂದಿ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.