ADVERTISEMENT

ಬಜೆಟ್‌ನಲ್ಲಿ ರಸ್ತೆ, ಚರಂಡಿ, ನೀರಿಗೆ ಆದ್ಯತೆ

₹1.70 ಕೋಟಿ ಉಳಿತಾಯ ಬಜೆಟ್‌ ಮಂಡಿಸಿದ ರಾಣೆಬೆನ್ನೂರು ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 16:53 IST
Last Updated 24 ಫೆಬ್ರುವರಿ 2023, 16:53 IST
ರಾಣೆಬೆನ್ನೂರಿನ ನಗರಸಭೆಯ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶುಕ್ರವಾರ ಕರೆದ ವಿಶೇಷ ಸಭೆಯಲ್ಲಿ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಬಜೆಟ್‌ ಮಂಡಿಸುವ ಮುನ್ನ ಬಜೆಟ್‌ ಪ್ರತಿ ಪ್ರದರ್ಶಿಸಿದರು. ವ್ಯವಸ್ಥಾಪಕ ಎಲ್‌.ಶಂಕರ್‌, ಪೌರಾಯುಕ್ತ ಎನ್‌.ಎಸ್‌. ಕುಮ್ಮಣ್ಣನವರ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಗಲವರ, ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ವಾಣಿಶ್ರೀ ಇದ್ದಾರೆ
ರಾಣೆಬೆನ್ನೂರಿನ ನಗರಸಭೆಯ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶುಕ್ರವಾರ ಕರೆದ ವಿಶೇಷ ಸಭೆಯಲ್ಲಿ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಬಜೆಟ್‌ ಮಂಡಿಸುವ ಮುನ್ನ ಬಜೆಟ್‌ ಪ್ರತಿ ಪ್ರದರ್ಶಿಸಿದರು. ವ್ಯವಸ್ಥಾಪಕ ಎಲ್‌.ಶಂಕರ್‌, ಪೌರಾಯುಕ್ತ ಎನ್‌.ಎಸ್‌. ಕುಮ್ಮಣ್ಣನವರ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಗಲವರ, ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ವಾಣಿಶ್ರೀ ಇದ್ದಾರೆ   

ರಾಣೆಬೆನ್ನೂರು: ಇಲ್ಲಿನ ನಗರಸಭೆಯ 2023-24ನೇ ಸಾಲಿಗೆ ₹1.70 ಕೋಟಿಯ ಉಳಿತಾಯ ಬಜೆಟ್‌ ಅನ್ನು ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಶುಕ್ರವಾರ ಮಂಡಿಸಿದರು.

ನಗರಸಭೆಯ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಮಂಡಿಸಿದ ಆಯ–ವ್ಯಯದಲ್ಲಿ ವಿವಿಧ ಮೂಲಗಳಿಂದ ಒಟ್ಟಾರೆ ₹73.72 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅಂದಾಜು ₹72.02 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದರು.

ಬಜೆಟ್‌ನ ಪ್ರಾರಂಭಿಕ ಶಿಲ್ಕು ₹10.04 ಕೋಟಿಗಳಷ್ಟಿದೆ. ನಿರೀಕ್ಷಿತ ರಾಜಸ್ವ ಸ್ವೀಕಾರದಿಂದ ₹34.68 ಕೋಟಿ, ನಿರೀಕ್ಷಿತ ಬಂಡವಾಳದಿಂದ ₹11.20 ಕೋಟಿ, ನಿರೀಕ್ಷಿತ ಅಸಮಾನ್ಯ ಸ್ವೀಕೃತಿಯಿಂದ ₹17.79 ಕೋಟಿ ಅಂದಾಜು ಆದಾಯ ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆಯಿಂದ ₹4.15 ಕೋಟಿ, ಮಳಿಗೆಗಳ ಬಾಡಿಗೆಯಿಂದ ₹2.50 ಕೋಟಿ, ನೀರಿನ ಕರ ₹2.50 ಕೋಟಿ, ಅಭಿವೃದ್ಧಿ ಕರದಿಂದ ₹5.50 ಕೋಟಿ ಆದಾಯ ಬೊಕ್ಕಸಕ್ಕೆ ಹರಿದು ಬರುವ ನಿರೀಕ್ಷೆಗಳಿವೆ ಎಂದು ವಿವರಿಸಿದರು.

ADVERTISEMENT

ಇನ್ನು, ರಸ್ತೆ ಅಭಿವೃದ್ಧಿ ಹಾಗೂ ಚರಂಡಿಗೆ ₹10.50 ಕೋಟಿ, ಬೀದಿ ದೀಪಗಳ ನಿರ್ವಹಣೆ ₹70 ಲಕ್ಷ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ₹20 ಲಕ್ಷ, ನೀರು ಸರಬರಾಜು ಕಾಮಗಾರಿಗಾಗಿ ₹1.12 ಕೋಟಿ, ನಗರದ ಸ್ಮಶಾನಗಳ ಅಭಿವೃದ್ಧಿ ಹಾಗೂ ವಿದ್ಯುತ್‌ ಚಿತಾಗಾರಕ್ಕಾಗಿ ₹25 ಲಕ್ಷ, ಸೈನ್ಸ್ ಪಾರ್ಕ್‌ ಮಾದರಿಯಲ್ಲಿ ಮ್ಯೂಸಿಯಂ ನಿರ್ಮಿಸಲು ₹50 ಲಕ್ಷ ಮೀಸಲಿರಿಸಲಾಗಿದೆ ಎಂದು ರೂಪಾ ಚಿನ್ನಿಕಟ್ಟಿ ತಿಳಿಸಿದರು.

‘ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಒಳಚರಂಡಿ ಯೋಜನೆ ಕಾಮಗಾರಿ ಮತ್ತು ನಿರ್ವಹಣೆ ತುಂಬಾ ಕಳಪೆಯಾಗಿದೆ. ಒಳಚರಂಡಿ ಕಟ್ಟಿ ರಸ್ತೆ ತುಂಬೆಲ್ಲ ಕೊಳಚೆ ನೀರು ಹರಿದಿರುವ ನಿದರ್ಶನಗಳಿದ್ದು, ಚುನಾಯಿತ ಪ್ರತಿನಿಧಿಗಳಾದ ನಾವು ತಲೆತಗ್ಗಿಸುವಂತಾಗಿದೆ’ ಎಂದು ಸದಸ್ಯೆ ಮಂಜುಳಾ ಹತ್ತಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಮತ್ತೊಬ್ಬ ಸದಸ್ಯೆ ಗಂಗಮ್ಮ ಹಾವನೂರು ದನಿಗೂಡಿಸಿದರು.

ವಿರೋಧ ಪಕ್ಷದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೇನಾಯ್ಕರ, ಮಂಜುಳಾ ಹತ್ತಿ, ನಾಗರಾಜ ಪವಾರ, ಪ್ರಕಾಶ ಪೂಜಾರ, ಗಂಗಮ್ಮ ಹಾವನೂರ ಸದಸ್ಯರು ಬಜೆಟ್ ಬಗ್ಗೆ ಪರ- ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಗಲವರ, ಪೌರಾಯುಕ್ತ ಎನ್.ಎಸ್.ಕುಮ್ಮಣ್ಣನವರ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಮಹೇಶ ಕಲಾಲ, ವ್ಯವಸ್ಥಾಪಕ ಎಲ್.ಶಂಕರ, ಜಿ.ಎಂ.ವಾಣಿಶ್ರೀ, ಮಧು ಸಾತೇನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.