ಬ್ಯಾಡಗಿ: ತಾಲ್ಲೂಕಿನ ಚಿಕ್ಕಣಜಿ ಗ್ರಾಮದ ಬಳಿ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ಸಸಿ ನೆಡುವ ಮೂಲಕ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿಗೆ ಆಕ್ರೋಶ ಹೊರಹಾಕಿದರು.
ಈ ವೇಳೆ ರೈತ ಸಂಘದ ಮುಖಂಡ ಮಲ್ಲೇಶಪ್ಪ ಡಂಬಳ ಮಾತನಾಡಿ, ‘ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ದುರಸ್ತಿ ಕಾಣದೇ ಗ್ರಾಮೀಣ ರಸ್ತೆಗಳಿಗಿಂತ ಕಡೆಯಾಗಿದೆ. ರಸ್ತೆ ತುಂಬಾ ಗುಂಡಿಗಳು ಬಿದ್ದಿದ್ದರೂ ಅವುಗಳನ್ನು ಮುಚ್ಚಲು ಮುಂದಾಗಿಲ್ಲ’ ಎಂದು ದೂರಿದರು.
ರಸ್ತೆಯಲ್ಲಿನ ಗುಂಡಿಗಳಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಅಂಗನವಾಡಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಎದುರು ರಸ್ತೆ ಹಾದು ಹೋಗಿರುವುದರಿಂದ ಮಕ್ಕಳು ರಸ್ತೆ ದಾಟಿ ಹೋಗುವುದು ಕಷ್ಟವಾಗಿದೆ. ಕೂಡಲೇ ಹಾಳಾಗಿರುವ ರಸ್ತೆ ದುರಸ್ತಿಗೆ ಮುಂದಾಗಬೇಕು. ಇಲ್ಲದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.